ಹಾಸನ: ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಸಮೀಪ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವ ನಿರ್ಧಾರ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕೆಂಚಟ್ಟಹಳ್ಳಿ ಗ್ರಾಮಸ್ಥರು ಮನವಿ ನೀಡಲು ಮುಂದಾದಾಗ ಅಹವಾಲು ಆಲಿಸದೆ ತೆರಳಿದ್ದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬಳಿ ಮನವಿ ಸಲ್ಲಿಸಲು ಮಹಿಳೆಯರೂ ಸೇರಿದಂತೆ ಹತ್ತಾರು ಗ್ರಾಮಸ್ಥರು ಸಚಿವರಿಗೆ ಕಾಯುತ್ತಿದ್ದರು. ಸಂಜೆ 5.30ಕ್ಕೆ ಬಂದ ಸಚಿವರು ಹೇಮಗಂಗೋತ್ರಿ ಡೀನ್ ಕಚೇರಿಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಭೆ, ಸುದ್ದಿಗೋಷ್ಠಿ ನಡೆಸಿದ ನಂತರ ಹೊರ ಬಂದರು. ಗ್ರಾಮಸ್ಥರು ಟ್ರಕ್ ಟರ್ಮಿನಲ್‌ಗಳನ್ನು ಹೇಮಗಂಗೋತ್ರಿ ಬಳಿ ನಿರ್ಮಿಸಬಾರದು ಎಂದು ಮನವಿ ನೀಡಲು ಮುಂದಾದರು.
ಈ ವೇಳೆ ಗ್ರಾಮಸ್ಥರು ಘೇರಾವ್ ಹಾಕಲು ಬಂದಿದ್ದಾರೆಂದು ಭಾವಿಸಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಶಾಸಕ ಪ್ರೀತಂಗೌಡ ಅವರು ದಿಢೀರನೆ ಕಾರು ಹತ್ತಿ ಹೊರಟರು. ಮನವಿ ಆಲಿಸದೇ ಹೊರಟ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಮನಬಂದಂತೆ ಸಚಿವರು, ಶಾಸಕರನ್ನು ನಿಂದಿಸಿದರು.
ಸಚಿವರ ಕಾರನ್ನು ಅಡ್ಡಗಟ್ಟಲು ಮಹಿಳೆ ಯರು ಮುಂದಾಗ ಪೊಲೀಸರು ಮಹಿಳೆಯರನ್ನು ತಡೆದು ಕಾರು ತೆರಳಲು ಅನುವು ಮಾಡಿಕೊಟ್ಟರು. ಅನಂತರ ಮಾಧ್ಯಮಗಳೆದರು ಮಹಿಳೆಯರು ಸಚಿವ ಅಶ್ವತ್ಥ ನಾರಾಯಣ ಹಾಗೂ ಶಾಸಕ ಪ್ರೀತಂ ಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎರಡ್ಮೂರು ದಿನದಲ್ಲಿ ನಿರ್ಧಾರ: ಮುಂಜಾಗ್ರತಾ ಕ್ರಮವಾಗಿ ಹೇಮಗಂಗೋತ್ರಿ ಆವರಣದಲ್ಲಿ ಡಿವೈಎಸ್ಪಿ ಉದಯಭಾಸ್ಕರ್, ಇನ್‌ಸ್ಪೆಕ್ಟರ್ ಕೃಷ್ಣರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೆ, ಗ್ರಾಮದ ಮುಖಂಡರೊಬ್ಬರು ಮೈಸೂರು ವಿವಿ ಕುಲಪತಿಗೆ ಮನವಿ ಸಲ್ಲಿಸಿದಾಗ ಟ್ರಕ್ ಟರ್ಮಿನಲ್ ನಿರ್ಮಾಣ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು 2 – 3 ದಿನಗಳಲ್ಲಿ ನಿರ್ಧಾರ ಪ್ರಕಟವಾಗಲಿದೆ ಎಂದು ಕುಲಪತಿಯವರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪರಿಶೀಲಿಸುವ ಭರವಸೆ : ಸುದ್ದಿಗೋಷ್ಠಿಯಲ್ಲಿ ಟ್ರಕ್ ಟರ್ಮಿನಲ್ ವಿವಾದದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಹೇಮಗಂಗೋತ್ರಿಗೆ 78 ಎಕರೆ ಪ್ರದೇಶವಿದೆ. ಅದನ್ನು ಉಳಿಸಿಕೊಳ್ಳಲಿ. ಟ್ರಕ್ ಟರ್ಮಿನಲ್ ಜಾಗ ಹೇಮಗಂಗೋತ್ರಿಗೆ ಅಗತ್ಯವಿಲ್ಲ ಎಂದು ಹೇಳಿದರು. ಟ್ರಕ್ ಟರ್ಮಿನಲ್ ನಿರ್ಮಾಣದಿಂದ ಶೈಕ್ಷಣಿಕ ಪರಿಸರ ಹಾಳಾಗುವ ಆತಂಕವಿದೆ ಎಂದು ಗಮನ ಸೆಳೆದಾಗ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.