Advertisement

ಕ್ವಾರಂಟೈನ್‌ಗೆ ಕರೆ ತಂದವರಿಗೆ ತಡೆ

09:38 AM Jul 19, 2020 | Suhan S |

ದೇವನಹಳ್ಳಿ: ಹೈದ್ರಾಬಾದ್‌ನಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರನ್ನು ಶಾಂತಿನಗರದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲು ಹೊರಟಿದ್ದ ಬಸ್‌ ಹಾಗೂ ಅಧಿಕಾರಿಗಳನ್ನು ತಡೆದು ವಾಪಸ್‌ ಕಳುಹಿಸಿದ ಘಟನೆ ನಡೆದಿದೆ.

Advertisement

ನಗರದ ಶಾಂತಿ ನಗರದ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಹೈದ್ರಾಬಾದ್‌ನಿಂದ ಆಗಮಿಸಿದ 25 ಪ್ರಯಾಣಿಕರನ್ನು ಅಧಿಕಾರಿಗಳು ಕರೆ ತಂದಿದ್ದರು. ಇದರಿಂದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್‌ ಮಾಡಿಸಲು ಬಿಡುವುದಿಲ್ಲ ಎಂದು ಪ್ರತಿಭಟಿಸಿದರು.

ಕೋವಿಡ್ ತೀವ್ರತೆ ಹೆಚ್ಚುತ್ತಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ 75ಕ್ಕೂ ಹೆಚ್ಚಾಗಿದ್ದು, ಇದೀಗ ಸೆಂಚುರಿ ಭಾರಿಸುವ ಭಯದ ವಾತಾವರಣವಿದೆ. ಹಲವಾರು ವಾರ್ಡುಗಳಲ್ಲಿ ಸೋಂಕಿತರು ಕಂಡು ಬಂದಿದ್ದು, ತಾಲೂಕಿನಲ್ಲಿಯೂ ಕೋವಿಡ್ ಅಟ್ಟಹಾಸ ಮುಂದುವರಿಯುತ್ತಿದೆ. ಪುರಸಭಾ ಸದಸ್ಯ ಜಿ.ಎ.ರವೀಂದ್ರ ಮಾತನಾಡಿ, ನಗರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲಿರುವ ಸುಮಾರು ಜನರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಇದರಿಂದ ಅಧಿಕಾರಿಗಳಿಗೂ ಸೋಂಕು ತಗುಲುತ್ತಿದೆ. ಕೂಡಲೇ ಇದಕ್ಕೊಂದು ಮುಕ್ತಿ ಕಾಣಿಸಬೇಕು. ನಗರ ಪ್ರದೇಶದಲ್ಲಿ ಕ್ವಾರಂಟೈನ್‌ ಸೂಕ್ತವಲ್ಲ. ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ ಎಂದರು. ಪುರಸಭಾ ಮಾಜಿ ಅಧ್ಯಕ್ಷ ನರಸಿಂಹ ಮೂರ್ತಿ, ಅಕ್ಕಪಕ್ಕದಲ್ಲಿ ಮನೆಗಳಿದ್ದು, ಮಕ್ಕಳು ಆಟವಾಡಲು ಹೊರಬರುತ್ತಾರೆ. ವಯಸ್ಸಾದ ನಾಗರಿಕರು ಮನೆಯಲ್ಲಿಯೇ ಇರುತ್ತಾರೆ. ಪಕ್ಕದಲ್ಲಿಯೇ ನ್ಯಾಯಾಧೀಶರ ವಸತಿ ಗೃಹವಿದ್ದರೂ ಲೆಕ್ಕಿಸದೇ ನಗರದಲ್ಲಿಯೇ ಜನಸಂದಣಿ ಇರುವ ಕಡೆ ಕ್ವಾರಂಟೈನ್‌ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಮಾಜಿ ಸದಸ್ಯ ಯಂಬ್ರಹಳ್ಳಿ ಗೋಪಾಲ್‌ಗೌಡ, ನಗರದ ಹೊರವಲಯದಲ್ಲಿ ಜಾಗ ಗುರ್ತಿಸಿ ಏಕೆ ಕ್ವಾರಂಟೈನ್‌ ಮಾಡಬಾರದು. ಸೋಂಕು ಹರಡುವ ಜಾಗಗಳಲ್ಲಿ ಜನಸಂದಣಿ ಇರುತ್ತದೆ. ಇದನ್ನು ಅರಿತು ಅಧಿಕಾರಿಗಳು ಹೊರವಲಯದ ರೆಸಾರ್ಟ್‌, ವಸತಿ ಗೃಹಗಳಿಗೆ ಕ್ವಾರಂಟೈನ್‌ಗೆ ಕಳುಹಿಸಿಕೊಡಲಿ ಎಂದು ಮನವಿ ಮಾಡಿದರು. ಮುಖಂಡ ಶ್ರೀಧರ್‌, ನಾಗೇಶ್‌ ಬಾಬು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next