Advertisement

ಹಾಲಾಡಿ ಸರ್ಕಲ್‌ಗಾಗಿ ಊರವರ ಹೋರಾಟ

01:05 AM Dec 01, 2018 | Team Udayavani |

ಹಾಲಾಡಿ: ಜಾಗದ ಸಮಸ್ಯೆಯಿಂದಾಗಿ ಇಲ್ಲಿನ ಜನರ ಬಹು ದಿನದ ಬೇಡಿಕೆಯಾಗಿದ್ದ ಹಾಲಾಡಿ ಸರ್ಕಲ್‌ ಪ್ರಸ್ತಾವ ಕೈಬಿಡಲಾಗಿದೆ. ಆದರೆ ಸರ್ಕಲ್‌ ಆಗದಿದ್ದರೆ ಇಲ್ಲಿ ದಿನ ನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತದೆ. ಅಗತ್ಯವಾಗಿ ಸರ್ಕಲ್‌ ಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಊರವರು ಸಂಘಟಿತ ಹೋರಾಟಕ್ಕೆ ಮುಂದಾಗಿದ್ದಾರೆ. ಈಗಾಗಲೇ ಊರವರು ಹಾಲಾಡಿ ಗ್ರಾ.ಪಂ.ಗೆ ಸರ್ಕಲ್‌ ಬೇಕು ಎನ್ನುವ ಬೇಡಿಕೆಯ ಮನವಿಯನ್ನು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತರಲು ಜನ ಮುಂದಾಗಿದ್ದಾರೆ. 

Advertisement

‘ಬ್ಲಾಕ್‌ ಸ್ಪಾಟ್‌’ಗೆ ಸರ್ಕಲ್‌
ಆಗುಂಬೆ, ಸಾಗರ, ಹೆಬ್ರಿ, ಹೊಸಂಗಡಿ, ತೀರ್ಥಹಳ್ಳಿ, ಕುಂದಾಪುರ ಮೊದಲಾದ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ ಆಗಿದ್ದು, ಇಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹಾಗಾಗಿಯೇ ‘ಬ್ಲಾಕ್‌ ಸ್ಪಾಟ್‌’ ಎನ್ನುವ ನೆಲೆಯಲ್ಲಿ ಹಾಲಾಡಿಗೆ ಶಾಸಕ ಶ್ರೀನಿವಾಸ ಶೆಟ್ಟಿಯವರ ಮುತುವರ್ಜಿಯಲ್ಲಿ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಸರ್ಕಲ್‌ ಹಾಗೂ ಸುಮಾರು 300 ಮೀಟರ್‌ ಉದ್ದದ ದ್ವಿಪಥ ರಸ್ತೆ ಕಾಮಗಾರಿಗೆ 3.1 ಕೋ.ರೂ. ಮಂಜೂರಾಗಿತ್ತು.  ಕಳೆದ ಮಾರ್ಚ್‌ನಲ್ಲಿಯೇ ಕಾಮಗಾರಿ ಕೂಡ ಆರಂಭಗೊಂಡಿತ್ತು. ಆದರೆ ಸರ್ಕಲ್‌ ಇನ್ನೇನು ಆಗಲಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಭೂಸ್ವಾಧೀನ ಸಮಸ್ಯೆಯಿಂದಾಗಿ ಕೇವಲ ಜಂಕ್ಷನ್‌ ಮಾತ್ರ ಆಗಲಿದೆ ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ಊರವರೊಂದಿಗೆ ಇದ್ದೇವೆ
ಗ್ರಾ.ಪಂ. ಯಾವತ್ತಿಗೂ ಊರವರೊಂದಿಗೆ ಇದೆ. ಊರವರು ಸರಿಯಾದ ರೀತಿಯಲ್ಲಿ ಮನವಿಯೊಂದನ್ನು ಕೊಡಲು ತಿಳಿಸಲಾಗಿದೆ. ಬಳಿಕ ಸಭೆ ಅಥವಾ ಡಿಸಿ ಗಮನಕ್ಕೆ ತರುವ ಕುರಿತಂತೆ ಪರಿಶೀಲಿಸಲಾಗುವುದು. ಇಲ್ಲಿನ ಜನರ ಹಿತ ಕಾಯಲು ಪಂಚಾಯತ್‌ ಬದ್ಧ ಎಂದು ಹಾಲಾಡಿ ಗ್ರಾ.ಪಂ. ಅಧ್ಯಕ್ಷ  ಸರ್ವೋತ್ತಮ ಹೆಗ್ಡೆ ತಿಳಿಸಿದ್ದಾರೆ.

ಮನವಿ ಕೊಡಲಿ
ಹಾಲಾಡಿಗೆ ಸರ್ಕಲ್‌ ಬೇಕು ಎನ್ನುವ ಕಾರಣಕ್ಕೆ ನಾನೇ ಸ್ವತಃ ಇದು ಬ್ಲಾಕ್‌ ಸ್ಪಾಟ್‌ ಎನ್ನುವ ನೆಲೆಯಲ್ಲಿ ಸರ್ಕಲ್‌ಗೆ ಅನುದಾನ ಮಂಜೂರು ಮಾಡಿಸಿದೆ. ಆದರೆ ಈಗ ಜಾಗದ ಸಮಸ್ಯೆಯಿದೆ. ಸರಕಾರಿ ಜಾಗದಲ್ಲಿ ಅಂಗಡಿಗಳನ್ನು ಕಟ್ಟಿಕೊಂಡಿದ್ದರೂ ಕೂಡ ಅವರೆಲ್ಲ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ ಕೊಡಲು ಬೇರೆ ಜಾಗವಿಲ್ಲ. ಸಾಮಾಜಿಕ ನ್ಯಾಯದಡಿ ಅಲ್ಲಿರುವವರನ್ನು ಎಬ್ಬಿಸಿ, ಸರ್ಕಲ್‌ ನಿರ್ಮಿಸುವುದು ಸರಿಯಲ್ಲ. ಸರ್ಕಲ್‌ ಕುರಿತಾಗಿ ಊರವರು ಯಾರೂ ನನ್ನ ಗಮನಕ್ಕೆ ತಂದಿಲ್ಲ, ಮನವಿ ಕೊಡಲಿ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕರು

ಎಸಿ ಭೂಬಾಲನ್‌ ಭೇಟಿ
ಹಾಲಾಡಿ ಸರ್ಕಲ್‌ ನಿರ್ಮಾಣ ಕುರಿತ ಗೊಂದಲ ಸಂಬಂಧ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್‌ ಅವರು ಶುಕ್ರವಾರ ಹಾಲಾಡಿಗೆ ಭೇಟಿ ನೀಡಿ, ಸ್ಥಳೀಯರು, ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು. ಈ ಸಂಬಂಧ ಮಾತನಾಡಿದ ಎಸಿ, ಸರ್ಕಲ್‌ ಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದ್ದು, ಈ ಬಗ್ಗೆ ನಾನು ಅಧಿಕಾರಿಗಳು, ಪೊಲೀಸರ ಜತೆಗೆ ಚರ್ಚೆ ನಡೆಸುತ್ತೇನೆ. ಆ ಬಳಿಕವಷ್ಟೇ ನಿರ್ಧರಿಸಲಾಗುವುದು ಎಂದವರು ‘ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಸರ್ಕಲ್‌ ಅಗತ್ಯ
ಜಾಗದ ಸಮಸ್ಯೆಯಿದೆ ಎನ್ನುವ ಕಾರಣ ನೀಡಿ ಸರ್ಕಲ್‌ ಪ್ರಸ್ತಾವ ಕೈ ಬಿಟ್ಟಿರುವುದು ಸರಿಯಲ್ಲ. ಅಲ್ಲಿ ಇರುವುದು ಸರಕಾರಿ ಜಾಗ. ಅದನ್ನೆಲ್ಲ ಅತಿಕ್ರಮಿಸಿಕೊಂಡು ಅಂಗಡಿಯನ್ನು ನಿರ್ಮಿಸಿದ್ದಾರೆ. ಸರ್ಕಲ್‌ ಇಲ್ಲದಿದ್ದರೆ ಅಪಘಾತವಾಗುವ ಸಾಧ್ಯತೆ ಹೆಚ್ಚು. ಅಭಿವೃದ್ಧಿ ದೃಷ್ಟಿಯಿಂದಲೂ ಸರ್ಕಲ್‌ ಅಗತ್ಯವಿದೆ. ಈ ಬಗ್ಗೆ ಪಂಚಾಯತ್‌ಗೂ ಮನವಿ ಸಲ್ಲಿಸಿದ್ದೇವೆ. ವಿಶೇಷ ಗ್ರಾಮಸಭೆ ಕರೆಯಲು ಮನವಿ ಮಾಡಲಾಗಿದೆ.
– ಸೀತಾರಾಮ ಗಾಣಿಗ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next