Advertisement

ಮಂಗಳೂರು -ಕಾರವಾರ ನಡುವೆ ಲೋಕಲ್‌ ರೈಲು ಕೊರತೆ

01:25 AM Feb 01, 2022 | Team Udayavani |

ಕುಂದಾಪುರ: ಮಂಗಳೂರು, ಸುರತ್ಕಲ್‌, ಕಾರವಾರ, ಗೋವಾ ನಡುವೆ ಅಸಂಖ್ಯಾಕ ಜನ ವ್ಯಾಪಾರ ವಹಿವಾಟಿಗಾಗಿ ಪ್ರಯಾಣಿಸುತ್ತಾರೆ. ಕರಾವಳಿಗರು ತೀರಾ ಇತ್ತೀಚೆಗಷ್ಟೇ ರೈಲು ಸೌಲಭ್ಯ, ರೈಲಿನ ಪಾಸ್‌ಗಳು, ಪಾರ್ಸೆಲ್‌ ಅವಕಾಶಗಳ ಕುರಿತು ತಿಳಿಯತೊಡಗಿದ್ದಾರೆ. ಕುಂದಾಪುರ- ಬೆಂಗಳೂರು ಪಂಚಗಂಗಾ ಎಕ್ಸ್‌ ಪ್ರಸ್‌ ಆರಂಭವಾದ ಬಳಿಕ ಹೆಚ್ಚು ಮಂದಿ ರೈಲು ಸೇವೆಗಳ ಪ್ರಯೋಜನ ಪಡೆಯುತ್ತಿದ್ದಾರೆ.

Advertisement

ಈ ಮಧ್ಯೆ ಹೊಸ ರೈಲು ಸೇವೆಗಳನ್ನು ನೀಡಿ ಜನೋಪಯೋಗಿ ಆಗಬೇಕಿದ್ದ ಕೊಂಕಣ ರೈಲ್ವೇ ಇರುವ ಕೆಲವು ರೈಲುಗಳನ್ನು ರದ್ದು ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುವುದು ಜನರ ಅಸಮಾಧಾನ. ಎರಡು ವರ್ಷಗಳ ಹಿಂದೆ ಬೆಳಗಿನ ಮಡಗಾಂವ್‌ ಪ್ಯಾಸೆಂಜರ್‌ ಏರಲು ಸಾಧ್ಯವಾಗದ ಪ್ರಯಾಣಿಕರಿಗೆ ಮುಂದಿನ ಎರಡು ತಾಸುಗಳ ಅವಧಿಯಲ್ಲಿ ಮಡಗಾಂವ್‌ ಇಂಟರ್‌ ಸಿಟಿ, ಅನಂತರ ಮೈಸೂರು -ಕಾರವಾರ ರೈಲು ಬರುತ್ತಿದ್ದವು. ಆದರೆ ಈಗ ಮಡಗಾಂವ್‌ ಪ್ಯಾಸೆಂಜರ್‌ ರೈಲು ಬೆಳಗ್ಗೆ ಎಂಟಕ್ಕೆ ತಪ್ಪಿತೆಂದರೆ ಅಪರಾಹ್ನ ಮೂರೂವರೆ ಸಿಎಸ್‌ಟಿ ರೈಲಿನ ವರೆಗೆ ಬೇರೆ ರೈಲು ಇಲ್ಲ. ಈ ಸಮಸ್ಯೆ ಗೋವಾ ಭಾಗದಿಂದ ಮಂಗಳೂರು ಕಡೆಗೆ ಬರುವವರಿಗೂ ಇದ್ದು, ಅಪರಾಹ್ನ 2ರ ಪ್ಯಾಸೆಂಜರ್‌, ಸಂಜೆ 4ರ ಮಂಗಳಾ ರೈಲಿನ ಅನಂತರ ಬೇರೆ ರೈಲುಗಳಿಲ್ಲ. ನೇತ್ರಾವತಿ ರೈಲಿನ ನಿಲುಗಡೆಯನ್ನೂ ರದ್ದು ಮಾಡಿದ ಕಾರಣ ಅದರ ಉಪಯೋಗವೂ ಈ ಭಾಗಕ್ಕೆ ಇಲ್ಲ.

ಮಂಗಳೂರು, ಉಡುಪಿ ಭಾಗದ ಆಸ್ಪತ್ರೆಗಳಿಂದ ಚೇತರಿಸಿಕೊಂಡು ಮರಳಿ ಕಾರವಾರ ಕಡೆ ಹೋಗುವ ಅಸಂಖ್ಯಾತ ಮಂದಿ ಬೆಳಗಿನ ಪ್ಯಾಸೆಂಜರ್‌ ರೈಲನ್ನು ಕಷ್ಟಪಟ್ಟು ಏರಬೇಕಾದ ಪರಿಸ್ಥಿತಿ ಇದೆ. ಸುರತ್ಕಲ್‌, ಉಡುಪಿ ಭಾಗದಿಂದ ಮುರುಡೇಶ್ವರ, ಗೋಕರ್ಣ, ಕಾರವಾರ, ಗೋವಾ ಕಡೆಗೆ ನೂರಾರು ಮಂದಿ ಬೆಳಗ್ಗಿನ ಪ್ಯಾಸೆಂಜರ್‌ ರೈಲಿನ ಬಳಿಕ ಬರುತ್ತಿದ್ದ ರೈಲುಗಳನ್ನು ಬಳಸುತ್ತಿದ್ದರು. ಹಾಗೆಯೇ ಸಂಜೆ, ಮಡಗಾಂವ್‌ ನಲ್ಲಿ ನಾಲ್ಕು ಗಂಟೆಯ ಅನಂತರ ರೈಲು ನಿಲ್ದಾಣಕ್ಕೆ ಬರುತ್ತಿದ್ದು, ಅವರಿಗೆ ಮರುದಿನ ಬೆಳಗ್ಗೆಯ ವರೆಗೆ ಬೇರೆ ಯಾವ ರೈಲುಗಳೂ ಇಲ್ಲ.

ಜನರ ಅನುಕೂಲಕ್ಕಾಗಿ ರೈಲುಗಳು ಇರಬೇಕಾಗಿತ್ತು, ಇದರ ಬದಲಾಗಿ ರೈಲುಗಳ ಸಮಯಕ್ಕೆ ಜನ ಬದಲಾಗಬೇಕಾದ ಸ್ಥಿತಿ ಒದಗಿದೆ. ದೂರ ಪ್ರಯಾಣವಾದರೆ ರೈಲಿನ ಸಮಯಕ್ಕೆ ಹೊರಡುವುದರಲ್ಲಿ ಅರ್ಥವಿದೆ. ಸ್ಥಳೀಯ ಪ್ರಯಾಣಿಕರು ಕೋವಿಡ್‌ ಆರ್ಥಿಕ ದುಷ್ಪರಿಣಾಮಗಳ ನಡುವೆ ಒಂದೇ ರೈಲಿಗೆ ಹೊಂದಿ ಕೊಳ್ಳಬೇಕಾಗಿ ಬಂದಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಕೊಂಕಣ ರೈಲ್ವೇ ನಿಗಮ ತತ್‌ಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
– ಗಣೇಶ್‌ ಪುತ್ರನ್‌ ಅಧ್ಯಕ್ಷರು,
ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ

ಈ ಬಗ್ಗೆ ಚರ್ಚೆ ನಡೆದಿದೆ. ಜನರಿಂದ ಬೇಡಿಕೆ ಇದೆ. ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಂದೆರಡು ದಿನಗಳಲ್ಲಿ ತಿಳಿಯಲಿದೆ.
-ಬಿ.ಬಿ. ನಿಕ್ಕಂ, ರೀಜನಲ್‌ ರೈಲ್ವೇ ಮ್ಯಾನೇಜರ್‌ ಕೊಂಕಣ ರೈಲ್ವೇ, ಕಾರವಾರ

Advertisement

ಇಂಟರ್‌ಸಿಟಿ ರೈಲು ಕಣ್ಮರೆ
ಪಂಚಗಂಗಾ, ಮಂಗಳಾ ಎಕ್ಸ್‌ಪ್ರೆಸ್‌ ರೈಲುಗಳಾಗಿದ್ದು, ಬಹುತೇಕ ತುಂಬಿರುತ್ತವೆ. ಕುಂದಾಪುರ, ಉಡುಪಿ, ಸುರತ್ಕಲ್‌ ಕಡೆ ತೆರಳುವ ಪ್ರಯಾಣಿಕರು ಒಂದೋ ಅಪರಾಹ್ನ ಎರಡರ ಪ್ಯಾಸೆಂಜರ್‌ ಅಥವಾ ಮಂಗಳಾ ರೈಲನ್ನೇ ಹಿಡಿಯಬೇಕು. ಇಲ್ಲವೇ ಬಸ್‌ ಮೂಲಕ ಹೋಗಬೇಕು. ಈ ಹಿಂದೆ ಇದ್ದ ಇಂಟರ್‌ ಸಿಟಿ ರೈಲು ಜನಪ್ರಿಯವಾಗುತ್ತಿದ್ದ ಹೊತ್ತಿನಲ್ಲೇ ಕೋವಿಡ್‌ ನೆಪದಲ್ಲಿ ಕಣ್ಮರೆಯಾಗಿದ್ದು, ಇನ್ನೂ ಆರಂಭವಾಗಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next