Advertisement

ಸಂಗೀತೋತ್ಸವದಲ್ಲಿ ಮಿಂಚಿದ ಸ್ಥಳೀಯ ಪ್ರತಿಭೆಗಳು

06:55 PM Mar 06, 2020 | mahesh |

ರಾಗಧನದ ವತಿಯಿಂದ ಎಮ್‌.ಜಿ.ಎಮ್‌ ಕಾಲೇಜಿನ ಸಹಯೋಗದಲ್ಲಿ ಮೂರು ದಿನಗಳ ಶ್ರೀ ಪುರಂದರದಾಸ ಹಾಗೂ ತ್ರಿಮೂರ್ತಿ ಉತ್ಸವವು ಇತ್ತೀಚೆಗೆ ನಡೆಯಿತು. ಮೊದಲನೇ ದಿನದಂದು ಪ್ರಕಟಿತ ಕಲಾವಿದೆಯ ಗೈರು ಹಾಜರಿಯಲ್ಲಿ ಉಡುಪಿಯ ಕು| ಸಮನ್ವಿಯ ಕಛೇರಿಯನ್ನು ಏರ್ಪಡಿಸಲಾಗಿತ್ತು. ಇವರು ಅತಿ ಕಡಿಮೆ ಅವಧಿಯ ತಯಾರಿಯಲ್ಲಿ ಒಂದು ಪ್ರಬುದ್ಧವಾದ ಕಛೇರಿಯನ್ನು ನೀಡಿದರು.

Advertisement

ಶುರುವಿನ ಬೇಹಾಗ್‌ ವರ್ಣದಲ್ಲಿ ಸಾಟಿಲೇನಿಯಲ್ಲಿ ಮಾಡಿದ ಕ್ಷಿಪ್ರಗತಿಯ ಅಕಾರಗಳು ಹಾಗೂ ಕಛೇರಿಯ ಮಧ್ಯೆ ಮಧ್ಯೆ ನಿರೀಕ್ಷೆ ಮಾಡದ ಪರಿಯಲ್ಲಿ ಸೆಕುಂಡುಗಳಲ್ಲಿ ಹಾದು ಹೋಗಿ ಮುದ ನೀಡಿದ‌ ಅತಿವೇಗದ ಬಿರ್ಕಾಗಳು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿವೆ. ಗೌಳದ ಅಗಣಿತ ಮಹಿಮಾ, ಬಳಿಕ ವರಾಳಿಯ ಮೈವೆತ್ತ ಮನೋಧರ್ಮದಲ್ಲಿ ಶ್ಯಾಮಾಶಾಸ್ತ್ರಿಗಳ ಬಂಗಾರು ಕಾಮಾಕ್ಷಿ ತುಂಬಾ ಚೆನ್ನಾಗಿ ಮೂಡಿ ಬಂತು. ವಿಸ್ತಾರಕ್ಕಾಗಿ ಬಳಸಿಕೊಂಡ ಇನ್ನೆರಡು ರಚನೆಗಳು, ಬೃಂದಾವನೀ ಸಾರಂಗದ ಸೌಂದರ ರಾಜಂ ಆಶ್ರಯೇ ಹಾಗೂ ಹರಿಕಾಂಭೋಜಿಯ ದಿನಮಣಿವಂಶ. ಬೃಂದಾವನಿಯಲ್ಲಿ ಶ್ರುತಿಬೇಧವನ್ನು ಮಾಡಿ ಅದರಲ್ಲಿ ಬೃಂದಾವನೀ ಹಾಗೂ ದುರ್ಗಾ ರಾಗಗಳನ್ನು ಬಹು ಚಾಕಚಕ್ಯತೆಯಿಂದ ನಿರೂಪಿಸಿದರು. ದಿನಮಣಿವಂಶದ ಒಂದು ಬೇರೆಯೇ ಸ್ವರೂಪವನ್ನು ತೆರೆದಿಟ್ಟರು.

ಲಘು ರಚನೆಗಳು ಮತ್ತು ವಿ|ಚಿತ್ರವೀಣಾ ರವಿಕಿರಣ್‌ ಸಂಯೋಜಿತ ಸಿಂಧುಭೈರವಿ ತಿಲ್ಲಾನ ಬಲು ಸೊಗಸಾಗಿತ್ತು. ಈ ಕಛೇರಿಗೆ ವೈಭವ್‌ ರಮಣಿ ವಯೊಲಿನ್‌ ಹಾಗೂ ತುಮಕೂರು ರವಿಶಂಕರ್‌ ಮೃದಂಗ ಸಹಕಾರವನ್ನಿತ್ತರು. ಮರುದಿನ ಅನೀಶ್‌ ವಿ. ಭಟ್‌ ಅವರಿಗೆ ಈ ಬಾರಿಯ “ರಾಗಧನ ಪಲ್ಲವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಂತರದಲ್ಲಿ ಅವರದೇ ಕಛೇರಿ ನಡೆಯಿತು. ಮೊದಲಿಗೆ ನಳಿನ ಕಾಂತಿ ವರ್ಣ , ನಂತರ “ಪಲ್ಲವಪದ ಮೃದುತರಸ್ಯ’ದಲ್ಲಿ ಮಾಡಿದ ಸ್ವರಪ್ರಸ್ತಾರದೊಂದಿಗಿನ ಬೇಗಡೆಯ ವಲ್ಲಭನಾಯಕಸ್ಯ’ವನ್ನು ಹಾಡಿದರು. ಮುಂದೆ ಹಾಡಿದ ಶುದ್ಧ ಧನ್ಯಾಸಿಯ ಸುಬ್ರಹ್ಮಣ್ಯೇನ ರಕ್ಷಿತೋಹಂ ಕೃತಿಗೆ ಪಲ್ಲವಿಯಲ್ಲಿ ಮಾಡಿದ ಪುಟ್ಟ ಪುಟ್ಟ ಪ್ಯಾಟರ್ನ್ ಹಾಗೂ ಲೆಕ್ಕಾಚಾರದ ಸ್ವರ ಪ್ರಸ್ತಾರಗಳು ಸೊಗಸಾಗಿದ್ದುವು.

ಕಲ್ಯಾಣಿಯ ಈಶ ಪಾಹಿಮಾಂನ ಬಳಿಕ ಪ್ರಧಾನವಾಗಿ, ರಾಗಂ ತಾನಂ ಪಲ್ಲವಿಯನ್ನು ಗೌರೀಮನೋಹರೀ ರಾಗದಲ್ಲಿ ಹಾಡಿದರು. ಈ ನಿರೂಪಣೆಯಲ್ಲಿ ಕಲಾವಿದನಿಗೆ ಸಂಗೀತದ ಬಗೆಗಿರುವ ಹಸಿವು, ಆಳವಾದ ಪರಿಜ್ಞಾನ, ಬದ್ಧತೆಯನ್ನು ಕಾಣುವಂತಾಯಿತು. “ಗೌರೀಪತೇ ಪಶುಪತೇ ಉಮಾಪತೇ’ ಎನ್ನುವ ಸಾಹಿತ್ಯವನ್ನು ಖಂಡ ತ್ರಿಪುಟತಾಳದಲ್ಲಿ, ವಾಸಂತಿ, ಕಾಪಿ, ಬೇಹಾಗ್‌ ರಾಗಗಳಲ್ಲಿ ರಾಗಮಾಲಿಕೆಯೊಂದಿಗೆ ನಡೆಬೇಧಗಳೊಂದಿಗೆ ವಿದ್ವತೂ³ರ್ಣವಾಗಿಸಿದರು. ಇವರಿಗೆ ಗಣರಾಜ್‌ ಕಾರ್ಲೆ ಹಾಗೂ ಎಚ್‌. ಎಸ್‌. ನಾಗರಾಜ್‌ ಅವರು ಕ್ರಮವಾಗಿ ವಯೊಲಿನ್‌ ಹಾಗೂ ಮೃದಂಗ ಸಹಕಾರವನ್ನಿತ್ತರು.

ವಿದ್ಯಾಲಕ್ಷ್ಮೀ ಕಡಿಯಾಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next