Advertisement
ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪುತ್ತೂರಿಗೆ ಹೋಗುವ ರಾಜ್ಯ ಹೆದ್ದಾರಿಯಿಂದ ಅಡ್ಡಕ್ಕೆ ಬೊಳಂತಿಲ ಹೊಸ ಕಾಲನಿಗೆ ಸಂಪರ್ಕ ರಸ್ತೆಯಿದ್ದು, ಈ ರಸ್ತೆಯ ಆರಂಭದಲ್ಲೇ ಚರಂಡಿಗೆ ಮೋರಿಯನ್ನು ಅಳವಡಿಸಲಾಗಿದೆ. ಮೋರಿ ಹಾಕಿರುವ ಸ್ಥಳದಲ್ಲಿ ಮಣ್ಣಿನ ಕಚ್ಚಾ ರಸ್ತೆಯಿದೆ. ಹಲವು ವರ್ಷಗಳ ಹಿಂದಿನ ಮೋರಿ ಇದಾಗಿರುವುದರಿಂದ ಮೋರಿಯು ಇದೀಗ ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿದ್ದು, ಮೋರಿಯ ಮೇಲ್ಭಾಗದಲ್ಲಿ ಎರಡು ಕಡೆ ದೊಡ್ಡ ದೊಡ್ಡ ರಂಧ್ರಗಳು ನಿರ್ಮಾಣವಾಗಿವೆ. ಈ ರಂಧ್ರಗಳಲ್ಲಿ ಒಂದು ರಸ್ತೆಯ ಮಧ್ಯಭಾಗದಲ್ಲಿದ್ದರೆ, ಇನ್ನೊಂದು ರಸ್ತೆಯ ಬದಿಯಲ್ಲಿದೆ. ಇನ್ನೊಂದೆಡೆ ಇದು ಮಣ್ಣಿನ ರಸ್ತೆಯಾಗಿರುವುದರಿಂದ ಈ ಪ್ರದೇಶವು ಮಳೆಗಾಲದಲ್ಲಿ ಸಂಪೂರ್ಣ ಕೆಸರಿನಿಂದ ಕೂಡಿರುತ್ತದೆ.
ಈ ಮೋರಿಯು ಎರಡು ಕಡೆ ಬಾಯ್ಬಿಟ್ಟು ಅದರೊಳಗಿನ ಕಬ್ಬಿಣದ ಸಣ್ಣ ಸರಳುಗಳು ಎದ್ದು ಬಂದಿವೆ. ಈ ಕಾಲನಿಯಲ್ಲಿ ಹಲವು ಮನೆಗಳಿದ್ದು, ಮಕ್ಕಳು ಸೇರಿದಂತೆ ಪಾದಾಚಾರಿಗಳ ನಿತ್ಯ ಓಡಾಡುತ್ತಾರೆ. ಎಲ್ಲಿಯಾದರೂ ತಪ್ಪಿ ಇದರೊಳಗೆ ಬಿದ್ದರೆ ಕಾಲು ಮುರಿತಕ್ಕೊಳಗಾಗುವುದರಲ್ಲಿ ಸಂಶಯವಿಲ್ಲ. ಸಣ್ಣ ಟೈರ್‌ನ ವಾಹನಗಳು ಈ ರಂಧ್ರದೊಳಗೆ ಸಿಲುಕಿಕೊಳ್ಳುವ ಅಪಾಯವಿದೆ.ದೊಡ್ಡ ವಾಹನಗಳನ್ನು ಇದರ ಮೇಲಿಂದ ಚಲಾಯಿಸಿಕೊಂಡು ಹೋದರೆ ಮೋರಿಯೇ ಕುಸಿದು ಬೀಳುವ ಸಾಧ್ಯತೆ ಇದೆ. ಆದ್ದರಿಂದ ಗ್ರಾ.ಪಂ. ಶೀಘ್ರ ಎಚ್ಚೆತ್ತುಕೊಂಡು ಇಲ್ಲಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ. ಹೊಸ ಮೋರಿ ಅಗತ್ಯ
ಇಲ್ಲಿಯ ಮೋರಿಯು ಬಿರುಕು ಬಿಟ್ಟು ಅದರಲ್ಲಿ ಎರಡು ಕಡೆ ರಂಧ್ರಗಳಾಗಿದೆ. ಆಕಸ್ಮಾತ್ ಇಲ್ಲಿ ಸಂಚರಿಸುವವರು ಇದರೊಳಗೆ ಕಾಲು ಹಾಕಿದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಗ್ರಾ.ಪಂ. ಈ ಮೋರಿಯನ್ನು ತೆಗೆದು ಮತ್ತೂಂದು ಮೋರಿ ಅಳವಡಿಸಬೇಕು.
– ಖಲಂದರ್ ಶಾಫಿ,
ಕಾರ್ಯದರ್ಶಿ, ನಮ್ಮೂರು- ನೆಕ್ಕಿಲಾಡಿ