ಬೆಂಗಳೂರು: ಎರಡನೇ ಹಂತದಲ್ಲಿ ಚುನಾವಣೆ ನಡೆದ ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಶುಕ್ರವಾರ ನಡೆಯಲಿದ್ದು, ಕಣದಲ್ಲಿರುವ 4,360 ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ.
ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ ವಾಗಲಿದೆ. ನ್ಯಾಯಾಲಯದಲ್ಲಿನ ವ್ಯಾಜ್ಯದ ಹಿನ್ನೆಲೆಯಲ್ಲಿ ನೆಲ ಮಂಗಲ ಪುರಸಭೆ ಹಾಗೂ ಸೊರಬ ಪಟ್ಟಣ ಪಂಚಾಯಿತಿಗೆ ಜೂ.1ರಂದು ಮತದಾನ ನಡೆದು,
-ಜೂ.3ಕ್ಕೆ ಮತ ಎಣಿಕೆ ನಡೆಯುವುದರಿಂದ ಮೇ 29ಕ್ಕೆ ಮತದಾನ ನಡೆದಿದ್ದರೂ ಬೆಂಗಳೂರು ಗ್ರಾಮಾಂತರ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ಅಂದರೆ, ಜೂ.3ಕ್ಕೆ ನಡೆಯಲಿದೆ. ಉಳಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಶುಕ್ರವಾರ (ಮೇ 31) ನಡೆಯಲಿದೆ.
ರಾಜ್ಯದ 22 ಜಿಲ್ಲೆಗಳ 8 ನಗರಸಭೆ, 32 ಪುರಸಭೆ ಹಾಗೂ 21 ಪಟ್ಟಣ ಪಂಚಾಯಿತಿಗಳು ಸೇರಿದಂತೆ 61 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 1,296 ವಾರ್ಡ್‌ಗಳಲ್ಲಿ ಮೇ 29ರಂದು ಮತದಾನ ನಡೆದಿತ್ತು. ಶೇ.72.09 ಮತದಾನ ಆಗಿತ್ತು.
ಇದೇ ವೇಳೆ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22, ಬಿಬಿಎಂಪಿಯ ಸಗಾಯಪುರಂ ಮತ್ತು ಕಾವೇರಿಪುರ ವಾರ್ಡ್, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ನಗರಸಭೆಯ ವಾರ್ಡ್ ಸಂಖ್ಯೆ 26, ಬೆಳಗಾವಿ ಜಿಲ್ಲೆ ಸದಲಗಾ ಪುರಸಭೆಯ ವಾರ್ಡ್ ಸಂಖ್ಯೆ 19, ಮುಗಳಖೋಡ ಪುರಸಭೆಯ ವಾರ್ಡ್ ಸಂಖ್ಯೆ 2ರ ಮತ ಎಣಿಕೆ ಸಹ ನಡೆಯಲಿದೆ.
ಇದಲ್ಲದೇ ವಿವಿಧ ಕಾರಣಗಳಿಂದ ತೆರವಾಗಿರುವ ರಾಜ್ಯದ 8 ಜಿಲ್ಲೆಗಳ ಎಂಟು ತಾಲೂಕು ಪಂಚಾಯಿತಿಗಳ 10 ಸ್ಥಾನಗಳಿಗೆ ಮತ್ತು 30 ಜಿಲ್ಲೆಗಳ 191 ಗ್ರಾಮ ಪಂಚಾಯಿತಿಗಳ 202 ಖಾಲಿ ಸ್ಥಾನಗಳ ಉಪ ಚುನಾವಣೆಯ ಮತದಾನದ ಎಣಿಕೆ ಕಾರ್ಯವೂ ಮೇ 31ರಂದು ನಡೆಯಲಿದೆ.