Advertisement

ಲೋಕಲ್‌ ಫೈಟ್‌: ನಾಮಪತ್ರಕ್ಕೆ ಇಂದು ಕೊನೆ ದಿನ

10:55 AM May 16, 2019 | Team Udayavani |
ಬಂಗಾರಪೇಟೆ: ಪುರಸಭೆಯ 27 ವಾರ್ಡ್‌ಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇದ್ದು, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಸೇರಿ 48 ಉಮೇದುವಾರಿಕೆ ಸಲ್ಲಿಕೆಯಾಗಿವೆ.
ಪುರಸಭೆಯ 1 ರಿಂದ 10 ವಾರ್ಡ್‌ಗೆ ಒಟ್ಟು 10 ನಾಮಪತ್ರಗಳು ಸ್ವೀಕಾರವಾಗಿದ್ದು, ಕಾಂಗ್ರೆಸ್‌ 7, ಬಿಜೆಪಿ 2 ಹಾಗೂ ಜೆಡಿಎಸ್‌ ಒಂದು ನಾಮಪತ್ರ ಸಲ್ಲಿದೆ ಎಂದು ಚುನಾವಣಾಧಿಕಾರಿ ಹಾಗೂ ಬೂದಿ ಕೋಟೆ ಕಾಲೇಜಿನ ಪ್ರಾಂಶುಪಾಲ ಚಂದ್ರಮರಕಲ ಮತ್ತು ಸಹಾಯಕ ಚುನಾವಣಾಧಿಕಾರಿ ಹಾಗೂ ಸರ್ಕಾರಿ ಬಾಲಕಿಯರ ಕಾಲೇಜಿನ ಉಪನ್ಯಾಸಕ ಪರಶುರಾಂ ಉಂಕಿ ತಿಳಿಸಿದರು.
ಪುರಸಭೆಯ 11 ರಿಂದ 20 ವಾರ್ಡ್‌ಗಳಲ್ಲಿ ಒಟ್ಟು 18 ನಾಮಪತ್ರಗಳು ಸ್ವೀಕಾರವಾಗಿದ್ದು, ಕಾಂಗ್ರೆಸ್‌ 9, ಬಿಜೆಪಿ 4 ಹಾಗೂ ಜೆಡಿಎಸ್‌ 5 ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ವಿಶ್ವನಾಥ್‌ ಮತ್ತು ಸಹಾಯಕ ಚುನಾವಣಾಧಿಕಾರಿ ಹಾಗೂ ಬೂದಿಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬೋಡಿರೆಡ್ಡಿ ತಿಳಿಸಿದರು.
ಪುರಸಭೆಯ 20 ರಿಂದ 27 ವಾರ್ಡ್‌ಗಳಲ್ಲಿ ಒಟ್ಟು 20 ನಾಮಪತ್ರಗಳು ಸ್ವೀಕಾರವಾಗಿದ್ದು, ಕಾಂಗ್ರೆಸ್‌ 6, ಬಿಜೆಪಿ 7, ಜೆಡಿಎಸ್‌ 4 ನಾಮಪತ್ರಗಳು ಹಾಗೂ ಪಕ್ಷೇತರರಾಗಿ 3 ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಹಾಗೂ ಬೂದಿಕೋಟೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್‌ ಹಾಗೂ ಸಹಾಯಕ ಚುನಾವಣಾಧಿಕಾರಿ ಹಾಗೂ ತಾಲೂಕು ಅಕ್ಷರ ದಾಸೀಹ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಕೆ.ಶಶಿಕಲಾ ತಿಳಿಸಿದರು.
ಪುರಸಭೆಯ 27 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ ಪಕ್ಷವು 22 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಬಿ ಫಾರಂ ನೀಡಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ 13 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್‌ ಪಕ್ಷವು ಒಟ್ಟು 10 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪಕ್ಷೇತರರಾಗಿ ಮೂರು ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್‌ ಪಕ್ಷದಿಂದ ಪ್ರಭಾವಿ ಅಭ್ಯರ್ಥಿಗಳಾದ ಅರುಣಾಚಲಂ ಮಣಿ, ಎಂ.ಗುಣಶೀಲನ್‌(ಅಣ್ಣಾದೊರೈ), ಗಂಗಮ್ಮ, ಎನ್‌.ಭಾಗ್ಯಮ್ಮ, ಆರೋಕ್ಯರಾಜನ್‌, ಷಫಿ, ಪುರಸಭೆ ಮಾಜಿ ಅಧ್ಯಕ್ಷ ಸಿ.ರಮೇಶ್‌ ಪತ್ನಿ ಪೊನ್ನಿ, ಬಿಜೆಪಿಯ ಎಂಸಿಜೆ.ವೇಲುಮುರುಗನ್‌, ಜೆಡಿಎಸ್‌ ಪಕ್ಷದ ಎಂ.ಶಿವಕುಮಾರ್‌, ವೈ.ವಿ.ರಮೇಶ್‌, ಪುರಸಭೆ ಮಾಜಿ ಅಧ್ಯಕ್ಷ ಡಿ.ಕುಮಾರ್‌ ಪುತ್ರಿ ಕೆ.ಅಶ್ವಥಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
27 ವಾರ್ಡ್‌ನಲ್ಲೂ ಕಾಂಗ್ರೆಸ್‌ಗೆ ಗೆಲುವು
ಬಂಗಾರಪೇಟೆ:
ಪುರಸಭೆಯಲ್ಲಿ 30 ವರ್ಷಗಳಿಂದ ಕಾಂಗ್ರೆಸ್‌ ಸುಭದ್ರ ಆಡಳಿತ ನಡೆಸುತ್ತಿದೆ. ಇದರಿಂದ ನಾಗರಿಕರು 27 ವಾರ್ಡ್‌ಗಳಲ್ಲಿಯೂ ಪಕ್ಷ ಗೆಲ್ಲಿಸಲಿದ್ದಾರೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಭರವಸೆ ನೀಡಿದರು.

ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ 27 ವಾರ್ಡ್‌ಗಳ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಜಿಲ್ಲೆಯಲ್ಲಿ ಬಂಗಾರಪೇಟೆ ಪುರಸಭೆ ಮಾದರಿಯನ್ನಾಗಿ ಮಾಡಲಾಗಿದೆ. ಮಾಜಿ ಅಧ್ಯಕ್ಷರಾದ ಕೆ.ಚಂದ್ರಾರೆಡ್ಡಿ, ಶಂಶುದ್ಧೀನ್‌ಬಾಬು, ಗಂಗಮ್ಮ, ಭಾಗ್ಯಮ್ಮ, ರಮೇಶ್‌, ಕುಮಾರ್‌, ಎಂ.ಗುಣಶೀಲನ್‌ ಸೇರಿ ಎಲ್ಲಾ ಪ್ರಭಾವಿ ಸದಸ್ಯರು ಉತ್ತಮ ಕೆಲಸ ಮಾಡಿರುವುದರಿಂದ ಕ್ಷೇತ್ರ ಬದಲಾವಣೆಯಾದರೂ ಜನ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್‌ ಗೆಲ್ಲಿಸಲು ಜನ ನಿರ್ಧಾರ: ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಡಬಲ್ ರಸ್ತೆ, ಸರ್ಕಾರಿ ಆಸ್ಪತ್ರೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ಮಾಡಿ ಮುಗಿಸಲಾಗಿದೆ. ಪಟ್ಟಣದಲ್ಲಿ ಇನ್ನೂ ಪುರಸಭೆ ಹೊಸ ಕಚೇರಿ, ರಂಗಮಂದಿರ, ಸುಸಜ್ಜಿತ ಬಸ್‌ ನಿಲ್ದಾಣ, ವಾಣಿಜ್ಯ ಮಳಿಗೆ ನಿರ್ಮಾಣ ಮಾಡಬೇಕಾಗಿದೆ. ಇದರಿಂದ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಜನ ಈಗಾಗಲೇ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಿದರು.

ನಾಮಪತ್ರ ವಾಪಸ್‌ ಪಡೆಯುತ್ತಾರೆ: ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲಾ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲವಾದ್ರೂ ಗೊಂದಲ ಸೃಷ್ಟಿ ಮಾಡಲು ಕೆಲವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಂತಿಮವಾಗಿ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಾಮಪತ್ರ ವಾಪಸ್‌ ಪಡೆದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಬಂಡಯವಾಗಿ ಸ್ಪರ್ಧಿಸಿದ್ರೆ ಕ್ರಮ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಯಾರೇ ಬಂಡಾಯವಾಗಿ ಸ್ಪರ್ಧಿಸಿದರೂ ಪಕ್ಷದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ ಜಿಲ್ಲೆಯ 8 ಮುಖಂಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಈಗಾಗಲೇ ವರದಿ ನೀಡಲಾಗಿದೆ.

ಭಿನ್ನಮತೀಯರಿಗೂ ನೋಟಿಸ್‌ ತಲುಪಿದೆ ಎಂದು ಎಚ್ಚರಿಕೆ ನೀಡಿದ ಅವರು, ಪುರಸಭೆ 27 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್‌ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ಸಲಹೆ ನೀಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎ.ಪಾರ್ಥಸಾರಥಿ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಗುಣಶೀಲನ್‌, ಶಂಶುದ್ಧೀನ್‌ಬಾಬು, ಭಾಗ್ಯಮ್ಮ, ಉಪಾಧ್ಯಕ್ಷ ಷಫಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next