Advertisement

ಲೋಕಲ್‌ ಫೈಟ್‌: ಕೈ-ಕಮಲಕ್ಕೆ  ತೆನೆ ಪೈಪೋಟಿ

03:27 PM Aug 31, 2018 | Team Udayavani |

ಗುಳೇದಗುಡ್ಡ: ಪ್ರತಿಷ್ಠೆಯ ಕಣವಾಗಿರುವ ಬಾದಾಮಿ ಮತಕ್ಷೇತ್ರದ ಎರಡು ಪುರಸಭೆ ಹಾಗೂ ಒಂದು ಪಪಂ ಚುನಾವಣೆಯಲ್ಲಿ ಕೈ -ಕಮಲಕ್ಕೆ ತೆನೆ ಪಕ್ಷವು ಸಹ ಪೈಪೋಟಿ ನೀಡುತ್ತಿದೆ. ಗುಳೇದಗುಡ್ಡದಲ್ಲಿ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಕಮಲ-ತೆನೆ ಪಕ್ಷಗಳು ಸಹ ಈ ಬಾರಿ ಶತಾಯಗತಾಯ ಪುರಸಭೆ ಅಧಿಕಾರ ಗದ್ದುಗೆ ಏರಲೇಬೇಕೆಂದು ಮೂರು ಪಕ್ಷಗಳು ಜಿದ್ದಿಗೆ ಬಿದ್ದಿದು, ಅಬ್ಬರದ ಪ್ರಚಾರ ನಡೆಸಿವೆ.

Advertisement

ಪಟ್ಟಣದಲ್ಲಿ ಒಟ್ಟು 23 ಡಿವಿಜನ್‌ಗಳಿದ್ದು, ಅದರಲ್ಲಿ 28,349 ಮತದಾರರಿದ್ದು, 14,216 ಪುರುಷ ಮತದಾರರು, 14,133 ಮಹಿಳಾ ಮತದಾರರು ಇದ್ದಾರೆ. ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ 23 ವಾರ್ಡ್‌ಗಳ ಪೈಕಿ ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 22 ವಾರ್ಡ್‌ಗಳಲ್ಲಿ ಒಟ್ಟು 64 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

22ಕಡೆ ಕಾಂಗ್ರೆಸ್‌: ಪಟ್ಟಣದಲ್ಲಿ ಕಾಂಗ್ರೆಸ್‌ ಅಧಿಕಾರ ಪಡೆಯಲೇಬೇಕೆಂದು ಆಯಾ ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷದಲ್ಲಿನ ಮತ್ತು ಆಯಾ ವಾರ್ಡುಗಳಲ್ಲಿ ಸಾಮಾಜಿಕವಾಗಿ ತೊಡಗಿಕೊಂಡಿರುವವರನ್ನೇ ತನ್ನತ್ತ ಸೆಳೆದುಕೊಂಡು ಟಿಕೆಟ್‌ ಕೊಟ್ಟು, ಚುನಾವಣಾ ಅಖಾಡಕ್ಕೆ ಇಳಿಸಿ, ಜಾಣ ನಡೆ ಪ್ರದರ್ಶಿಸಿದೆ. ಸಿದ್ದರಾಮಯ್ಯ ಕ್ಷೇತ್ರದ ಶಾಸಕರಾಗಿರುವುದರಿಂದ ಮೂರು ಪಟ್ಟಣಗಳಪುರಸಭೆ ಅಧಿಕಾರ ಹಿಡಿಯುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್‌ ಈ ಬಾರಿ 22 ಕಡೆ ಸ್ಪರ್ಧಿಸಿದ್ದು, ಅದರಲ್ಲಿ ಬಹುತೇಕ ಹೊಸಬರಿಗೆ ಮಣೆ ಹಾಕಿದೆ.

16ಕಡೆ ಜೆಡಿಎಸ್‌: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಮತ ಬಂದಿರುವುದರಿಂದ ಮುಖಂಡರಲ್ಲಿ ಉತ್ಸಾಹ ಮೂಡಿಸಿದೆ. ಪುರಸಭೆ 23 ವಾರ್ಡ್ ಗಳಲ್ಲಿ 16ಕಡೆ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಗುಳೇದಗುಡ್ಡದಲ್ಲಿ ಪಾರುಪತ್ಯ ಸ್ಥಾಪಿಸಬೇಕೆಂದಿದೆ ಜೆಡಿಎಸ್‌. 

20ಕಡೆ ಬಿಜೆಪಿ ಸ್ಪರ್ಧೆ: ಪಟ್ಟಣದಲ್ಲಿ ಬಿಜೆಪಿ ಒಟ್ಟು 20 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎರಡು ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. 10ನೇ ವಾರ್ಡ್‌ನಿಂದ ಹಾಲಿ ಅಧ್ಯಕ್ಷ ಶಿವು ಹಾದಿಮನಿ ಮೂರನೇ ವಾರ್ಡ್‌ನಿಂದ ಮಾಜಿ ಅಧ್ಯಕ್ಷೆ ಭಾಗ್ಯಾ ಉದ್ನೂರಗೆ ಮಾತ್ರ ಬಿಜೆಪಿ ಮತ್ತೆ ಟಿಕೆಟ್‌ ನೀಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಆದ ಹಿನ್ನಡೆಗೆ ಸ್ಥಳೀಯ ಮುಖಂಡರೇ ಕಾರಣ ಎಂಬುದು ಯುವ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಶ್ರೀರಾಮುಲು ಅವರಿಂದ ಪ್ರಚಾರ ಮಾಡಿಸಿ, ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸ ಮಾಡಿದೆ.

Advertisement

ತಾಯಿ ಮಗನ ಸ್ಪರ್ಧೆ: ಈ ಬಾರಿ ಕಾಂಗ್ರೆಸ್‌ನಿಂದ ಹಳಬರು ಸ್ಪರ್ಧಿಸಿದ್ದರು. ಪುರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ ಅವರ ಪತ್ನಿ ವಿದ್ಯಾ ಮರಗೋಡ 11ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ, ಮಾಜಿ ಅಧ್ಯಕ್ಷ ನಾಗಪ್ಪ ಗೌಡರ ಪತ್ನಿ ಯಲ್ಲವ್ವ ಗೌಡರ 20ನೇ ವಾರ್ಡ್‌ನಿಂದ, ಮಾಜಿ ಅಧ್ಯಕ್ಷ ವೈ.ಆರ್‌.ಹೆಬ್ಬಳ್ಳಿ 21ನೇ ವಾರ್ಡ್‌ನಿಂದ ತಮ್ಮ ಪುತ್ರ ರಾಜಶೇಖರ ಹೆಬ್ಬಳ್ಳಿ, 22ನೇ ವಾರ್ಡ್‌ನಿಂದ ಪತ್ನಿ ರಾಜವ್ವ ಅವರನ್ನು ನಿಲ್ಲಿಸಿದ್ದು, ತಾಯಿ ಮಗನ ಸ್ಪರ್ಧೆ ಪಟ್ಟಣದಲ್ಲಿ ಜನರ ಗಮನ ಸೆಳೆದಿದೆ. ಸದ್ಯದ ಪುರಸಭೆ ಚುನಾವಣೆಯು ಪಟ್ಟಣದಲ್ಲಿ ಶಾಸಕ ಸಿದ್ದರಾಮಯ್ಯ, ಅವರ ಆಪ್ತ ಹೊಳಬಸು ಶೆಟ್ಟರ, ಜೆಡಿಎಸ್‌ನ ಹನಮಂತ ಮಾವಿನಮರ, ಬಿಜೆಪಿ ಮಾಜಿ ಶಾಸಕ ರಾಜಶೇಖರ ಶೀಲವಂತ ನಡುವಿನ ಚುನಾವಣಾ ಕಣವಾಗಿ ಮಾರ್ಪಟಿದೆ. ಮೂರು ಪಕ್ಷಗಳಿಗೂ ಪ್ರತಿಷ್ಠೆ ಪ್ರಶ್ನೆಯಾಗಿದೆ.

ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next