ಬೆಂಗಳೂರು: ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಬುಧವಾರ ಮತದಾನ ನಡೆದಿದ್ದು, ಒಟ್ಟಾರೆ ಶೇ.72.09 ರಷ್ಟು ಮತದಾನ ಆಗಿದೆ.
ರಾಜ್ಯದ 22 ಜಿಲ್ಲೆಗಳ 8 ನಗರಸಭೆ, 32 ಪುರಸಭೆ ಹಾಗೂ 21 ಪಟ್ಟಣ ಪಂಚಾಯಿತಿಗಳು ಸೇರಿದಂತೆ 61 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 1,296 ವಾರ್ಡ್‌ಗಳಲ್ಲಿ ಬುಧವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಿತು. 4,360 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.
ಇದೇ ವೇಳೆ, ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22ರಲ್ಲಿ ಶೇ.57.06, ಬಿಬಿಎಂಪಿಯ ಸಗಾಯಪುರಂ ವಾರ್ಡ್‌ನಲ್ಲಿ ಶೇ.44.83, ಕಾವೇರಿಪುರಂ ವಾರ್ಡ್‌ನಲ್ಲಿ ಶೇ.39.54, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ನಗರಸಭೆಯ ವಾರ್ಡ್ ಸಂಖ್ಯೆ 26ರಲ್ಲಿ ಶೇ.40.07 ರಷ್ಟು ಮತದಾನ ಆಗಿದೆ. ಅದೇ ರೀತಿ, ಬೆಳಗಾವಿ ಜಿಲ್ಲೆ ಸದಲಗಾ ಪುರಸಭೆಯ ವಾರ್ಡ್ ಸಂಖ್ಯೆ 19ರಲ್ಲಿ 89.99 ಮತ್ತು ಮುಗಳಖೋಡ ಪುರಸಭೆಯ ವಾರ್ಡ್ ಸಂಖ್ಯೆ 2ರಲ್ಲಿ ಶೇ.93.99ರಷ್ಟು ಮತದಾನ ಆಗಿದೆ.
ಇದಲ್ಲದೆ, ವಿವಿಧ ಕಾರಣಗಳಿಂದ ತೆರವಾಗಿರುವ ರಾಜ್ಯದ 8 ಜಿಲ್ಲೆಗಳ, ಎಂಟು ತಾಲೂಕು ಪಂಚಾಯಿತಿಗಳ 10 ಸ್ಥಾನಗಳಿಗೆ ಮತ್ತು 30 ಜಿಲ್ಲೆಗಳ 191 ಗ್ರಾಮ ಪಂಚಾಯಿತಿಗಳ 202 ಖಾಲಿ ಸ್ಥಾನಗಳ ಉಪ ಚುನಾವಣೆಗೂ ಸಹ ಬುಧವಾರ ಮತದಾನ ನಡೆದಿದೆ. ಮೇ 31ರಂದು ಮತ ಎಣಿಕೆ ನಡೆಯಲಿದೆ.
30 ಮಂದಿ ಅವಿರೋಧ ಆಯ್ಕೆ: ರಾಜ್ಯದ ಏಳು ಜಿಲ್ಲೆಗಳ 11 ನಗರ ಸ್ಥಳೀಯ ಸಂಸ್ಥೆಗಳ 30 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ 15, ಪಕ್ಷೇತರರು 13 ಮತ್ತು ಬಿಜೆಪಿ, ಜೆಡಿಎಸ್‌ನ ತಲಾ ಒಬ್ಬರು ಅಭ್ಯರ್ಥಿಗಳಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಸಭೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ಪುರಸಭೆ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪುರಸಭೆ, ತಾಳಿಕೋಟೆ ಪುರಸಭೆ, ಧಾರವಾಡದ ಕಲಘಟಗಿ ಪಟ್ಟಣ ಪಂಚಾಯಿತಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆ, ಹೊನ್ನಾವರ ಪಟ್ಟಣ ಪಂಚಾಯಿತಿ, ಬೀದರ್ ಜಿಲ್ಲೆಯ ಹುಮನಾಬಾದ್ ಪುರಸಭೆ, ಭಾಲ್ಕಿ ಪುರಸಭೆ, ಔರಾದ ಪಟ್ಟಣ ಪಂಚಾಯಿತಿ ಹಾಗೂ ಬಳ್ಳಾರಿ ಜಿಲ್ಲೆಯ ಹಡಗಲಿ ಪುರಸಭೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.