Advertisement
ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ನಿಯಮಾನುಸಾರ ಪ್ರತಿ ವರ್ಷ ಸಲ್ಲಿಸಬೇಕಾಗಿರುವ ಅವರ ಹಾಗೂ ಅವರ ಕುಟುಂಬದ ಆಸ್ತಿ ಘೋಷಣೆ ನಮೂನೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಎನ್‌ಐಸಿ ಮುಖೇನ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಬಹುತೇಕ ಜಿ.ಪಂ, ತಾ.ಪಂ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳು ತಮ್ಮ ಆಸ್ತಿ, ಹೊಣೆಗಾರಿಕೆಯನ್ನು ಆನ್‌ಲೈನ್ ಮೂಲಕ ನಮೂದು ಮಾಡುತ್ತಿದ್ದಾರೆ. ಪ್ರಾಥಮಿಕವಾಗಿ ಸದಸ್ಯರ ಹೆಸರುಗಳನ್ನು ಸಂಬಂಧಪಟ್ಟ ಕ್ಷೇತ್ರಗಳಿಗೆ ಮ್ಯಾಪ್ ಮಾಡಬೇಕಿದೆ. ಮ್ಯಾಪಿಂಗ್ ತಂತ್ರಾಂಶ ಬಳಸಲು ಆಯೋಗದ ವೆಬ್‌ಸೈಟ್ www.karsec.gov.inಗೆ ಲಾಗಿನ್ ಆಗಬೇಕಿದೆ. ಅದರಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಗ್ರಾಮ ಪಂಚಾಯತ್ ಆಯ್ಕೆ ಮಾಡಿ ಸಂಬಂಧಪಟ್ಟ ಕ್ಷೇತ್ರವನ್ನು ಆರಿಸಬೇಕು. ಆಯಾಯಾ ಸ್ಥಳೀಯ ಸಂಸ್ಥೆಗಳಲ್ಲಿ ಆನ್‌ಲೈನ್ ನೋಂದಣಿ ಮಾಡಿಸಬೇಕಿದೆ. ಗ್ರಾ.ಪಂ. ಸದಸ್ಯರು ಆನ್‌ಲೈನ್ ಮೂಲಕ ನೋಂದಣಿ ಮಾಡುವಾಗ ಪಿಡಿಓ ಅವರ ಮೊಬೈಲ್ ಸಂಖ್ಯೆಗೆ ಆರು ಸಂಖ್ಯೆಯ ಓಟಿಪಿ ಬರುತ್ತದೆ. ಈ ಓಟಿಪಿಯನ್ನು ತಂತ್ರಾಂಶದಲ್ಲಿ ದಾಖಲಿಸಬೇಕು. ಅದರ ಮುಖೇನ ಆಸ್ತಿ ಕುರಿತ ಫಾರಂನಲ್ಲಿ ವಿವರಗಳನ್ನು ಭರ್ತಿ ಮಾಡಬೇಕು. ಸದಸ್ಯರ ಕುಟುಂಬದವರ ವಿವರಗಳನ್ನು ಕೂಡ ನಮೂದಿಸಬೇಕಿದೆ. ಒಂದು ವೇಳೆ ಸದಸ್ಯರ ಹೆಸರು ಆನ್‌ಲೈನ್ ಮೂಲಕ ನೋಂದಣಿ ಮಾಡುವ ವೇಳೆ ಅವರ ಕ್ಷೇತ್ರಗಳ ಎದುರು ಬಾರದೇ ಇದ್ದರೆ ಅಂತಹ ಸದಸ್ಯರುಗಳನ್ನು ತಮಗೆ ಮುಂದೆ ನೀಡಲಾಗುವ ‘ಸೂಪರ್ ಯೂಸರ್ ಅಡ್ಮಿನ್’ ಲಾಗಿನ್ ಮೂಲಕ ಹೊಸ ಸದಸ್ಯರನ್ನು ಸೇರಿಸಲು ಅವಕಾಶವಿದೆ.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಉಲ್ಲೇಖೀಸಿದಂತೆ, ನಮೂನೆ 1ರ ಕ್ರಮ ಸಂಖ್ಯೆ 1ರಲ್ಲಿ ಸದಸ್ಯರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಕ್ರ.ಸಂಖ್ಯೆ 2ರಲ್ಲಿ ಕುಟುಂಬದ ಸದಸ್ಯರ ಹೆಸರು ಸಂಬಂಧದ ದಾಖಲು ಮಾಡಬೇಕು. 3ರಲ್ಲಿ ಸದಸ್ಯರ ಒಟ್ಟು ವಾರ್ಷಿಕ ಆದಾಯ ನಮೂದಿಸಬೇಕು. ಬ್ಯಾಂಕ್, ನಿಗಮ, ಮಂಡಳಿಗಳಲ್ಲಿ ತೊಡಗಿಸಿರುವ ಹಣದ ವಿವರ, ಆಭರಣಗಳು, ಜಾನುವಾರುಗಳ ವಿವರ, 5000ರೂ.ಗಳಿಗಿಂತ ಅಧಿಕ ಬೆಲೆ ಬಾಳುವ ಟಿ.ವಿ. ರೆಫ್ರಿಜರೇಟರ್ ಸೇರಿದಂತೆ ಜನಪ್ರತಿನಿಧಿಯ ಮನೆಯಲ್ಲಿ ಬಳಕೆಯಲ್ಲಿರುವ ವಸ್ತುಗಳು, ವಾಹನಗಳ ಬಗ್ಗೆ ದಾಖಲಾತಿ ಮಾಡಬೇಕಿದೆ. ಜತೆಗೆ ಕೃಷಿ ಜಮೀನಿನ ವಿವರ, ಕಟ್ಟಡ ನಿರ್ಮಿಸಿದ ಕೃಷಿಯೇತರ ಜಮೀನಿನ ವಿವರ, ಕಟ್ಟಡಗಳ ವಿವರ ಹಾಗೂ ಇತರ ಸ್ಥಿರಾಸ್ತಿಗಳ ವಿವರವನ್ನೂ ನಮೂದಿಸಬೇಕಿದೆ.
Related Articles
Advertisement