Advertisement

ಲೋಕಲ್‌ ಫೈಟ್‌; ಈಗಿನಿಂದಲೇ ತಾಲೀಮು

06:08 PM Aug 14, 2021 | Team Udayavani |

ಮಸ್ಕಿ: ಮತಕ್ಷೇತ್ರ ವ್ಯಾಪ್ತಿಯ 13 ತಾಪಂ, 5 ಜಿಪಂ ಕ್ಷೇತ್ರಗಳ ಸ್ಥಾನಕ್ಕೆ ಸ್ಪರ್ಧಿಸಲು ಈಗಿನಿಂದಲೇ ತಾಲೀಮು ಆರಂಭಗೊಂಡಿದೆ. ಜಿಪಂ, ತಾಪಂ ಕ್ಷೇತ್ರಗಳಿಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಅಧಿಸೂಚನೆ ಹೊರ ಬೀಳಬಹುದು ಎನ್ನುವ ನಿರೀಕ್ಷೆ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ, ಕಾಂಗ್ರೆಸ್‌-ಜೆಡಿಎಸ್‌ನ ಮುಖಂಡರು ಚುನಾವಣೆಗೆ ಬೇಕಾದ ಪೂರ್ವ ಸಿದ್ಧತೆ ಚುರುಕುಗೊಳಿಸಿದ್ದಾರೆ.

Advertisement

ಕೇವಲ ಆಯಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳು ಮಾತ್ರವಲ್ಲ ಮೂರೂ ಪಕ್ಷದ ಮುಖಂಡರು ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕಳೆದ ಒಂದು ವಾರದಿಂದ ಮೂರು ಪಕ್ಷಗಳು ಕ್ಷೇತ್ರದಲ್ಲಿ ಹಳ್ಳಿಗಳ ಸುತ್ತಾಟ, ಜನಸಂಪರ್ಕ, ಕಾರ್ಯಕರ್ತರ ಸಭೆ ಆರಂಭಿಸಿದ್ದಾರೆ.

ಪೂರ್ವಭಾವಿ ಸಭೆ: ಮಸ್ಕಿ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ ಕಾಂಗ್ರೆಸ್‌ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಅತ್ಯಂತ ಹೆಚ್ಚಿನ ಉಮೇದಿಯಲ್ಲಿದೆ. ಹಾಲಿ ಶಾಸಕ ಆರ್‌.ಬಸನಗೌಡ ತುರುವಿಹಾಳ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳನ್ನು ವಶಪಡಿಸಿಕೊಳ್ಳುವ ಯೋಜನೆ ರೂಪಿಸಿದ್ದು, ಇದಕ್ಕಾಗಿ ಮತ್ತೂಮ್ಮೆ ಕಾಂಗ್ರೆಸ್‌ನ ಜಿಲ್ಲೆಯ ಎಲ್ಲ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಇತ್ತೀಚೆಗೆ ಮಸ್ಕಿಯಲ್ಲಿ ಜಿಪಂ, ತಾಪಂ ಚುನಾವಣೆಯ ಪೂರ್ವಭಾವಿ ಸಭೆ ನಡೆಸುವ ಮೂಲಕ ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ನಾಯಕರನ್ನು ಒಗ್ಗೂಡಿಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಕ್ಷೇತ್ರದ ಹಳ್ಳಿಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಭಾವನಾತ್ಮಕ ಅಂಶ: ಇನ್ನು ಬಿಜೆಪಿ ಮುಖಂಡರು ಕೂಡ ಲೋಕಲ್‌ ಫೈಟ್‌ಗೆ ಪ್ರತಿದಾಳ ಉರುಳಿಸುತ್ತಿದ್ದಾರೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಉಪಚುನಾವಣೆ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತ್ತೆ ಗಂಭೀರವಾಗಿ ಪರಿಗಣಿಸಿದ್ದಾರೆ. ಸೋಲಿನ ಆತ್ಮಾವಲೋಕನ ಜತೆಗೆ ಮೂರು ಅವ ಧಿಯ ಶಾಸಕತ್ವದಲ್ಲಿ ಏನೆಲ್ಲ ಕೆಲಸ ಮಾಡಿದರೂ ಜನ ನನ್ನನ್ನು ಸೋಲಿಸಿದ್ದೀರಿ? ನಾನೇನು ತಪ್ಪು ಮಾಡಿದ್ದೇ?ಎನ್ನುವ ಭಾವನಾತ್ಮಕ ಅಂಶಗಳನ್ನು
ಈಗಿನಿಂದಲೇ ಪ್ರಸ್ತಾಪಿಸುತ್ತಿದ್ದಾರೆ. ಇಂತಹ ಅಂಶಗಳ ಮೂಲಕ ಈಗಿನಿಂದಲೇ ಜಿಪಂ, ತಾಪಂ ಚುನಾವಣೆಗಳಿಗೆ ಮತ ಕೋಯ್ಲು ಆರಂಭಿಸಿದ್ದಾರೆ. ಇವರಿಗೆ ಸ್ಥಳೀಯ ಬಿಜೆಪಿ ನಾಯಕರು ಬೆಂಬಲವಾಗಿ ಬಿರುಸಿನ ಕ್ಷೇತ್ರ ಪರ್ಯಟನೆ ನಡೆಸಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಮೊದಲ ಸುತ್ತಿನ ಸಭೆ ನಡೆದಿದ್ದು, ಎರಡನೇ ಸುತ್ತಿನ ಸಭೆಗಳನ್ನು ಆರಂಭಿಸುತ್ತಿದ್ದಾರೆ.

ಜೆಡಿಎಸ್‌ ಅಖಾಡಕ್ಕೆ: ಇನ್ನು ಮಸ್ಕಿಯಲ್ಲಿ ಪ್ರಭಾವವೇ ಇಲ್ಲ ಎನಿಸಿಕೊಂಡಿದ್ದ ಜೆಡಿಎಸ್‌ ಕೂಡ ಮಸ್ಕಿ ಅಖಾಡಕ್ಕೆ ಪ್ರವೇಶ ಮಾಡಿದೆ. ಜಿಪಂ, ತಾಪಂ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧರಾಗಿದ್ದು, ಹೊಸದಾಗಿ ಪಕ್ಷಕ್ಕೆ ಸೇರಿದ ರಾಘವೇಂದ್ರ ನಾಯಕ, ತಾಲೂಕು ಅಧ್ಯಕ್ಷ ಅಮರೇಶ ಹಂಚಿನಾಳ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಆರಂಭವಾಗಿವೆ. ಮಸ್ಕಿ ಕ್ಷೇತ್ರದ ಬಹುತೇಕ ಹೋಬಳಿಗಳಲ್ಲಿ ಈಗಾಗಲೇ ಓಡಾಡಿ ಅಭ್ಯರ್ಥಿಗಳನ್ನು ಫೈನಲ್‌ ಮಾಡುವ ಕಾರ್ಯ ನಡೆದಿದೆ.

Advertisement

ಜಿದ್ದಾ-ಜಿದ್ದಿನ ಕಣ
ಮಸ್ಕಿ ಕ್ಷೇತ್ರದಲ್ಲಿ ಉಪ ಚುನಾವಣೆ ಬಿಸಿ ಈಗೀಗ ಆರುವ ವೇಳೆಗೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗುತ್ತಿರುವುದು ಎಲ್ಲ ಪಕ್ಷಗಳಿಗೂ ಜಿದ್ದಾಜಿದ್ದು ಎನಿಸಿದೆ. ವಿಶೇಷವಾಗಿ ಈ ಬಾರಿ ಮೆದಕಿನಾಳ, ಸಂತೆಕಲ್ಲೂರು ಜಿಪಂ ಕ್ಷೇತ್ರಗಳು ಅತ್ಯಂತ ಆಕರ್ಷಕ ಕ್ಷೇತ್ರಗಳಾಗಿವೆ. ಹಾಲಿ-ಮಾಜಿ ಶಾಸಕರ ಸಂಬಂಧಿಗಳು, ರಾಜಕೀಯ ಹಿರಿಯ ನಾಯಕರ ಆಪ್ತರು ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದ್ದರಿಂದ ಈ ಎರಡು ಕ್ಷೇತ್ರಕ್ಕೆ ಹೆಚ್ಚು ರಂಗು ಬಂದಿದೆ. ಮೆದಕಿನಾಳ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಪುತ್ರ ಪ್ರಸನ್ನ ಪಾಟೀಲ್‌ ಅಥವಾ ಅವರ ಅಳಿಯ ರವಿಗೌಡ ಪಾಟೀಲ್‌ ಸ್ಪರ್ಧಿಸಿದರೆ ಹಾಲಿ ಶಾಸಕ ಸಹೋದರ ಆರ್‌.ಬಸನಗೌಡ ತುರುವಿಹಾಳ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಇನ್ನು ಸಂತೆಕಲ್ಲೂರು ಜಿಪಂಗೆ ಶರಣಬಸವ ಮಟ್ಟೂರು ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಹುತೇಕ ಫೈನಲ್‌ ಆಗಿದ್ದು, ಎದುರಾಳಿಯಾಗಿ ಯಾರಾಗುತ್ತಾರೆ ಎನ್ನುವುದೇ ಕೂತೂಹಲ ಮೂಡಿಸಿದೆ.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next