ಕೆಜಿಎಫ್: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಭಾನುವಾರ ನಡೆಯಲಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದ್ದು, ಬಹುತೇಕ ಅವಿರೋಧ ಆಯ್ಕೆಯಾಗುವ ಸಂಭವ ಇದೆ.
ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ವಳ್ಳಲ್ ಮುನಿಸ್ವಾಮಿ ಮತ್ತು ಬಿ.ಮಾಣಿಕ್ಯಂ ತೀವ್ರ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷೆ ಸ್ಥಾನವು ಮಹಿಳೆ ( ಎ) ಗುಂಪಿಗೆ ಸೇರಿದ್ದು, ದೇವಿ ಗಣೇಶ್ ಹೆಸರು ಮುನ್ನೆಲೆಗೆ ಬಂದಿದೆ. ಶಾಸಕರ ನಿರ್ಧಾರಕ್ಕೆ ಬದ್ಧ: ಕಾಂಗ್ರೆಸ್ ಪಕ್ಷದಲ್ಲಿ ಅಂತಿಮ ನಿರ್ಧಾರವನ್ನು ಸ್ಥಳೀಯ ಹೈಕಮಾಂಡ್ ಆಗಿರುವ ಶಾಸಕಿ ಎಂ.ರೂಪಕಲಾ ಬೆಳಗ್ಗೆ ಪ್ರಕಟಿಸಲಿದ್ದಾರೆ. ಎಲ್ಲಾ 26 ಬೆಂಬಲಿಗರನ್ನು ಕೋಲಾರದ ಬಳಿಯ ರೆಸಾರ್ಟ್‌ನಲ್ಲಿ ಇರಿಸಲಾಗಿದ್ದು, ಶಾಸಕಿ ಎಲ್ಲರ ಜೊತೆ ವೈಯಕ್ತಿಕವಾಗಿ ಮಾತನಾಡಿ, ಅವರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಎಲ್ಲರೂ ಶಾಸಕಿಯ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇವರ ಜೊತೆಗೆ ಇನ್ನೂ ಮೂವರು ಕಾಂಗ್ರೆಸ್ ಸದಸ್ಯರು ಸಹ ಅವಕಾಶ ಸಿಕ್ಕರೆ ತಾವು ಕೂಡ ಸಿದ್ಧ ಎಂದು ಬಿಂಬಿಸಲು ಹೊರಟಿದ್ದಾರೆ.
ಮಂಜುಳಾದೇವಿಗೆ ವಿಪ್ ಜಾರಿ: ಕಾಂಗ್ರೆಸ್ ಪಕ್ಷಕ್ಕೆ ಹೊರತುಪಡಿಸಿದರೆ ಜೆಡಿಎಸ್ ಎರಡು ಸ್ಥಾನ ಹೊಂದಿದ್ದು, ತಮ್ಮ ಬೆಂಬಲವನ್ನು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಆರ್‌ಪಿಐ ಇಬ್ಬರು ಸದಸ್ಯರನ್ನು ಹೊಂದಿದೆ. ಪಕ್ಷದ ಅಧ್ಯಕ್ಷ ಎಸ್.ರಾಜೇಂದ್ರನ್ ತಾವು ಸ್ಪರ್ಧೆಯಲ್ಲಿ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನೊಬ್ಬ ಸದಸ್ಯೆ ಮಂಜುಳಾದೇವಿ ತನ್ನ ಒಲವನ್ನು ಕಾಂಗ್ರೆಸ್ ಪಕ್ಷದ ಕಡೆಗೆ ತೋರಿದ್ದಾರೆ. ಅವರು ಸಹ ಕ್ಯಾಂಪ್‌ನಲ್ಲಿ ಇದ್ದಾರೆ. ಈ ಮಧ್ಯೆ ಮಂಜುಳಾದೇವಿಗೆ ವಿಪ್ ಜಾರಿ ಮಾಡಿರುವ ಆರ್‌ಪಿಐ, ಪಕ್ಷವು ಸೂಚಿಸಿದ ರೀತಿಯಲ್ಲಿಯೇ ಮತದಾನ ಮಾಡಬೇಕು. ಕಾಂಗ್ರೆಸ್ ಅಥವಾ ಇನ್ಯಾವುದೋ ಪಕ್ಷಕ್ಕೆ ಮತದಾನ ಮಾಡಬಾರದು ಎಂದು ವಿಪ್‌ನಲ್ಲಿ ತಿಳಿಸಲಾಗಿದೆ.
ಬಿಜೆಪಿಯಲ್ಲಿ ಮೂವರು ಸದಸ್ಯರಿದ್ದು, ಅವರು ಇದುವರೆಗೂ ಚುನಾವಣೆ ಬಗ್ಗೆ ತಮ್ಮ ರಾಜಕೀಯ ದಾಳ ಉರುಳಿಸಿಲ್ಲ. ಕಾದು ನೋಡುವ ತಂತ್ರಕ್ಕೆ ಒಳಗಾಗಿದ್ದಾರೆ. ಪಕ್ಷದ ಹಿರಿಯ ನಾಯಕರು ತಮಗೆ ಬೆಂಬಲ ಇಲ್ಲದ ಪ್ರಯುಕ್ತ ಸಾಹಸ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದ ಹಾಗಿದೆ. ಬಹುತೇಕ ಪಕ್ಷೇತರರು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ಹಲವರು ಕೂಡ ಬೆಂಬಲ ನೀಡಲು ಮುಂದಾಗಿದ್ದಾರೆ.
ಚುನಾವಣೆ ಸಮಯ : ಬೆಳಗ್ಗೆ 8ರಿಂದ 10 ಗಂಟೆ ವರೆಗೂ ನಾಮಪತ್ರ ಸಲ್ಲಿಸಲು ಅವಕಾಶ. ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಪರಿಶೀಲನೆ, ವಾಪಸಾತಿ, ಅಗತ್ಯವಿದ್ದರೆ ಚುನಾವಣೆ ಮತ್ತು ಫಲಿತಾಂಶ ಘೋಷಣೆ ನಡೆಯಲಿದೆ. ಸಹಾಯಕ ಕಮೀಷನರ್ ಸೋಮಶೇಖರ್ ಚುನಾವಣಾಧಿಕಾರಿಯಾಗಿದ್ದಾರೆ.