ಬೆಂಗಳೂರು: ರೈತರ 50 ಸಾವಿರ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದರೂ ಇದೇನೂ ದೊಡ್ಡ ಸಾಧನೆಯಲ್ಲ. ಕನಿಷ್ಠ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಿದರೆ ಹೆಚ್ಚಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿರುವ ಅವರು, ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ರೈತರಿಗೆ ಲಾಭವಾಗಬೇಕೆನ್ನುವ ಸಲುವಾಗಿ ಹೋರಾಟ ಮುಂದುವರಿಸಿರುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ಮನ್ನಾ ತೀರ್ಮಾನವನ್ನು ಸರ್ಕಾರ ಮೊದಲೇ ಕೈಗೊಂಡಿದ್ದರೆ ಹಲವು ರೈತರ ಆತ್ಮಹತ್ಯೆ ತಡೆಯಬಹುದಿತ್ತು. ಆದರೆ, ಮುಖ್ಯಮಂತ್ರಿಗಳ ಈಗಿನ ಕ್ರಮ ಗಮನಿಸಿದರೆ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ಬರುವುದು ನಿಶ್ಚಿತ ಎನ್ನುವಂತಾಗಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಿದಾಗಲೇ ಚುನಾವಣೆ ತಯಾರಿ ನಡೆದಿರುವುದು ಸ್ಪಷ್ಟವಾಗಿತ್ತು. ಆದರೆ, ಮುಖ್ಯಮಂತ್ರಿಗಳು ಇದನ್ನು ಅಲ್ಲಗಳೆಯಬಹುದಷ್ಟೆ ಎಂದು ಹೇಳಿದರು.
ಕೊನೆಗೂ ಬಿಜೆಪಿ ಹೋರಾಟಕ್ಕೆ ಮಣಿದು ರೈತರ 50 ಸಾವಿರ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗಿದೆ. ರಾಜ್ಯ ಸರ್ಕಾರ ಮಂಡಿಸಿರುವ ಬೃಹತ್ ಗಾತ್ರದ ಬಜೆಟ್‌ಗೆ ಹೋಲಿಸಿದರೆ ಸಾಲ ಮನ್ನಾ ಮೊತ್ತ 8165 ಕೋಟಿ ರೂ. ದೊಡ್ಡ ಮೊತ್ತವೇನೂ ಅಲ್ಲ. ಆದರೆ, ಪರಿಸ್ಥಿತಿ ಗಮನಿಸಿದರೆ ಸಾಲ ಮನ್ನಾದ ಹೊರೆ ಮುಂದಿನ ಸರ್ಕಾರದ ಮೇಲೆ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಸಾಲ ಮನ್ನಾಕ್ಕೆ ಈ ಸರ್ಕಾರ ಎಷ್ಟು ಮೊತ್ತ ಭರಿಸುತ್ತದೆ ಎಂಬುದು ಮುಖ್ಯವಾಗಲಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಎಂಬ ಕಾಂಗ್ರೆಸ್‌ನ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ರೈತರು ಪಡೆದ ಸಾಲ ಮನ್ನಾ ಮಾಡುವುದರಿಂದ ಶೇ.80ರಷ್ಟು Ã ೈತರಿಗೆ ಉಪಯೋಗವಾಗುತ್ತದೆ ಎನ್ನುವುದ ನಿಜ. ಆದರೆ, ಈ ಕುರಿತು ಈಗ ನಾವು ಏನನ್ನೂ ಹೇಳುವುದಿಲ್ಲ. ರಾಷ್ಟ್ರೀಯ ನಾಯಕರೊಂದಿಗೆ ಈ ಕುರಿತು ಮಾತನಾಡುತ್ತೇನೆ ಎಂದು ಹೇಳಿದರು.
ಬಿಜೆಪಿಯ ಹೋರಾಟ, ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಹಾಗಾಗಿ ಇದು ಬಿಜೆಪಿಯ ಹೋರಾಟಕ್ಕೆ ಸಿಕ್ಕಿದ ಪ್ರತಿಫಲ. ಈ ಸರ್ಕಾರದ ಅವಧಿ ಇನ್ನು 8-10 ತಿಂಗಳು ಮಾತ್ರ ಉಳಿದಿದೆ. ಆದ್ದರಿಂದ ಸಾಲ ಮನ್ನಾದಿಂದ ಆಗುವ 8165 ಕೋಟಿ ರೂ. ಅನ್ನು ಈ ಆರ್ಥಿಕ ವರ್ಷದಲ್ಲೇ ಭರಿಸಬೇಕು. ಮುಂದಿನ ಸರ್ಕಾರದ ಮೇಲೆ ಹೊರೆ ಹೊರಿಸಿ ತಾವು ಪಾರಾಗುವ ಕೆಲಸ ಮಾಡಬಾರದು.
– ಜಗದೀಶ್ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ