ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಯೋಜನೆ ವ್ಯಾಪ್ತಿಯಿಂದ ಹೊರಗುಳಿದ ರೈತರು ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯ ಮಂತ್ರಿಯಾಗಿರುವುದರಿಂದ ಮತ್ತೆ ಆಶಾಭಾವನೆ ಹೊಂದಿದ್ದಾರೆ. 14 ತಿಂಗಳ ಹಿಂದೆ ಯಡಿಯೂರಪ್ಪ ಆರು ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಬೆಳೆ ಸಾಲ ಪಡೆದ ಎಲ್ಲ ರೈತರಿಗೂ ಯಾವುದೇ ಷರತ್ತು ವಿಧಿಸದೇ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವರೇ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಘೋಷಿಸಿದ್ದ ಯೋಜನೆಯಿಂದ ಎಲ್ಲ ರೈತರಿಗೆ ಪ್ರಯೋಜನ ಸಿಗಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. 2018ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಸಾಲ ಪಡೆದ ಎಲ್ಲ ರೈತರ 1 ಲಕ್ಷದ ವರೆಗಿನ ಬೆಳೆ ಸಾಲ ಮನ್ನಾ ಮಾಡುವ ಘೋಷಣೆಯನ್ನು ಯಡಿಯೂರಪ್ಪ ಮಾಡಿದ್ದರು. ಆದರೆ, ಅವರು ಆ ಸಂದರ್ಭದಲ್ಲಿ ತಮ್ಮ ಸರ್ಕಾರದ ಬಹುಮತ ಸಾಬೀತು ಪಡೆಸುವಲ್ಲಿ ವಿಫಲರಾಗಿದ್ದರಿಂದ ಆರೇ ದಿನದಲ್ಲಿ ರಾಜೀನಾಮೆ ಸಲ್ಲಿಸಿ ನಿರ್ಗಮಿಸುವಂತಾಗಿತ್ತು. ಆದರೆ, ವರ್ಷದ ಬಳಿಕ ರಾಜ್ಯದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.
ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಬಂದ ದಿನವೇ ರೈತರಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ದೊರೆಯುವ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದಿಂದಲೂ 4 ಸಾವಿರ ರೂ. ಸೇರಿಸಿ ನೀಡಲು ತೀರ್ಮಾನಿಸಿದ್ದಾರೆ. ಆದರೆ, ಕುಮಾರಸ್ವಾಮಿ ಸರ್ಕಾರದಲ್ಲಿ ಅನೇಕ ಷರತ್ತುಗಳ ಹಿನ್ನೆಲೆಯಲ್ಲಿ ಸಾಲ ಮನ್ನಾ ಯೋಜನೆಯಿಂದ ವಂಚಿತರಾದ ರೈತರು ಯಡಿಯೂರಪ್ಪ ಆರಂಭದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿದ್ದ ಕೃಷಿ ಸಾಲ ಪಡೆದುಕೊಂಡಿರುವ ಎಲ್ಲ ರೈತರ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುತ್ತಾರೆ ಎನ್ನುವ ಆಶಾ ಭಾವನೆ ಇಟ್ಟುಕೊಂಡಿದ್ದಾರೆ.
ಆರಂಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಯೋಜನೆಗೆ 46 ಸಾವಿರ ಕೋಟಿ ಹಣ ಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ, ಷರತ್ತುಗಳನ್ನು ವಿಧಿಸಿದ ನಂತರ 18 ಸಾವಿರ ಕೋಟಿಗೆ ಇಳಿದಿತ್ತು. ಯಡಿಯೂರಪ್ಪ ಘೋಷಣೆ ಮಾಡಿರುವ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡಿದರೂ ಸುಮಾರು 20 ರಿಂದ 22 ಸಾವಿರ ಕೋಟಿ ರೂ. ಮಾತ್ರ ಹಣ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು.
ಸಾಲ ಪಡೆದ ರೈತರು: ರಾಜ್ಯದಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಿಂದ ಸುಮಾರು 45 ಲಕ್ಷ ರೈತರು ಬೆಳೆ ಸಾಲ ಪಡೆದುಕೊಂಡಿದ್ದಾರೆ. ಸುಮಾರು 10 ಸಾವಿರ ರೂ.ನಿಂದ ಹಿಡಿದು 10 ಲಕ್ಷದವರೆಗೂ ರೈತರು ಹೊಂದಿರುವ ಜಮೀನಿನ ಆಧಾರದ ಮೇಲೆ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಸಾಲ ಮನ್ನಾ ಯೋಜನೆ ಘೋಷಣೆ ಮಾಡಿ ನಂತರ ಯೋಜನೆ ವ್ಯಾಪ್ತಿಗೆ ಒಳ ಪಡಿಸಲು ರೈತರಿಗೆ ಸುಮಾರು 11 ಷರತ್ತುಗಳನ್ನು ವಿಧಿಸಿದರು.
ವಿಶೇಷವಾಗಿ ಐದು ಎಕರೆ ಮೇಲಿನ ಕೃಷಿ ಭೂಮಿ ಹೊಂದಿದ ರೈತರು ಹಾಗೂ ತೆರಿಗೆ ಕಟ್ಟುವ ಮತ್ತು ಸರ್ಕಾರಿ ಉದ್ಯೋಗ ಮಾಡುವ, 20 ಸಾವಿರಕ್ಕಿಂತ ಹೆಚ್ಚಿನ ಸಂಬಳ ಪಡೆಯುವ ರೈತರು ಕುಮಾರಸ್ವಾಮಿ ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿದ್ದಾರೆ. ಸಹಕಾರಿ ಬ್ಯಾಂಕ್‌ಗಳಿಂದ ಸುಮಾರು 22.65 ಲಕ್ಷ ರೈತರು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 21 ಲಕ್ಷ ರೈತರು ಬೆಳೆ ಸಾಲ ಪಡೆದುಕೊಂಡಿ ದ್ದಾರೆ. ಆದರೆ, ರಾಜ್ಯ ಸರ್ಕಾರದ ಷರತ್ತುಗಳಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯೇ ಸುಮಾರು 7 ಲಕ್ಷ ರೈತರು, ಸಹಕಾರ ಬ್ಯಾಂಕ್‌ಗಳಿಂದಲೂ ಸುಮಾರು 2 ಲಕ್ಷ ರೈತರು ಯೋಜನೆ ಯಿಂದ ವಂಚಿತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
* ಶಂಕರ ಪಾಗೋಜಿ