Advertisement
ಸಂತೆಬಾಚಹಳ್ಳಿ ಹೋಬಳಿ ಕೆರೆಗಳ ಭರ್ತಿ ಮಾಡುವಂತೆ ಸೆಲ್ಫಿ ವಿಡಿಯೋ ಮೂಲಕ ಮನವಿ ಮಾಡಿದ್ದಲ್ಲದೆ, ತನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಸಿಎಂಗೆ ತಿಳಿಸಿ ಆತ್ಮಹತ್ಯೆಗೆ ಶರಣಾಗಿದ್ದ ಕೆ.ಆರ್.ಪೇಟೆ ತಾಲೂಕಿನ ಅಘಲಯ ಗ್ರಾಮದ ರೈತ ಸುರೇಶ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಿಎಂ ಕುಮಾರಸ್ವಾಮಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
Advertisement
ಮಾಧ್ಯಮಗಳ ವಿರುದ್ಧ ಟೀಕೆ: ಗ್ರಾಮ ವಾಸ್ತವ್ಯದ ಬಗ್ಗೆ ಮಾಧ್ಯಮಗಳಲ್ಲಿ ತರಹೇವಾರಿ ಸುದ್ದಿಗಳು ಬರುತ್ತಿವೆ. ಈಗ ಕರ್ನಾಟಕದ ಕನಿಷ್ಠ ಮೂಲ ಸೌಕರ್ಯಗಳ ಕೊರತೆಯಿರುವ ಗ್ರಾಮಗಳನ್ನು ಹುಡುಕುತ್ತಿದ್ದಾರೆ. ಮಾಧ್ಯಮಗಳು ಈ ಹಿಂದೆ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳನ್ನು ಏಕೆ ಎಚ್ಚರಿಸಲಿಲ್ಲ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಆದರೂ ಮಾಧ್ಯಮಗಳ ವರದಿಗಳನ್ನು ಸಕಾರಾತ್ಮಕ ವಾಗಿ ಸ್ವೀಕರಿಸಿ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸು ತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ನಾಟಕ ಆಡ್ತಿರೋರು ಯಾರು? ಗ್ರಾಮ ವಾಸ್ತವ್ಯ ಮಾಡುವುದನ್ನು ಬಿಟ್ಟು ಬರ ವೀಕ್ಷಣೆ ಮಾಡಿ ಎಂದು ಹೇಳುವ ಬಿಜೆಪಿ ಅಧ್ಯಕ್ಷ ಯಡಿಯೂರ ಪ್ಪನವರು ಮತ್ತೂಂದು ಕಡೆ ಅಧಿಕಾರಿಗಳಿಗೆ ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ. ಆದರೆ, ನಾವು ವಿರೋಧ ಪಕ್ಷದವರು ಸರ್ಕಾರವನ್ನು ಟೀಕೆ ಮಾಡಬೇಕಲ್ಲ. ಅದಕ್ಕೆ ಟೀಕೆ ಮಾಡುತ್ತಿದ್ದೇವೆ. ಬೇಜಾರು ಮಾಡಿಕೊಳ್ಳಬೇಡಿ ಅಂತಾರೆ. ಡ್ರಾಮಾ ಯಾರು ಮಾಡುತ್ತಿದ್ದಾರೆ ಎನ್ನುವುದನ್ನು ರಾಜ್ಯದ ಜನರೇ ನಿರ್ಧರಿಸಬೇಕೆಂದು ಸಿಎಂ ಛೇಡಿಸಿದರು.
ಜನರ ಕಷ್ಟಕ್ಕೆ ಮಿಡಿಯುವ ಹೃದಯ: ನನ್ನದು ಜನಸಾಮಾನ್ಯರ ಕಷ್ಟಕ್ಕೆ ಮಿಡಿಯುವ ಹೃದಯ. ಜನಸಾಮಾನ್ಯರ ನೋವಿಗೆ ದನಿಯಾಗಿ ಕೈಲಾದ ಸಹಾಯವನ್ನು ಮಾಡುವುದು ನಾನು ಬೆಳೆಸಿ ಕೊಂಡು ಬಂದಿರುವ ಸಂಸ್ಕಾರ. ನನ್ನ ನಡೆ- ನುಡಿಯಲ್ಲಿ, ನನ್ನ ಕಾರ್ಯಕ್ರಮಗಳಲ್ಲಿ ತಪ್ಪು ಹುಡುಕುವ ಮಾಧ್ಯಮದವರ ನಡೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ಆದ್ದರಿಂದಲೇ ಮಾಧ್ಯಮ ದವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದೇನೆ. ರಾಜ್ಯದ ಸಮಗ್ರವಾದ ಅಭಿವೃದ್ಧಿಯೇ ನನ್ನ ಮೂಲಮಂತ್ರ ಎಂದು ಹೇಳಿದರು.
ಗ್ರಾಮ ವಾಸ್ತವ್ಯ ಮುನ್ನಡೆಸುವೆ: ಮಂಡ್ಯ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕನಸು ಕಂಡಿದ್ದೇನೆ. ನನಗೆ ಹಾಗೂ ನನ್ನ ತಂದೆಯವರಿಗೆ ಕಷ್ಟದಲ್ಲಿದ್ದಾಗ ಕೈಹಿಡಿದು ಮುನ್ನಡೆಸಿ ಆಶ್ರಯ ನೀಡಿದ ಮಂಡ್ಯ ಜಿಲ್ಲೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಟೀಕೆಗಳು ಸಾಯುತ್ತವೆ. ಆದರೆ, ನಾವು ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ. ಯಾರು ಏನೇ ಟೀಕೆ- ಟಿಪ್ಪಣಿ ಮಾಡಿದರೂ ಗ್ರಾಮವಾಸ್ತವ್ಯ ಕಾರ್ಯ ಕ್ರಮವನ್ನು ಮುನ್ನಡೆಸುತ್ತೇನೆ. ನನ್ನ ಸಚಿವ ಸಂಪುಟದ ಸದಸ್ಯರಿಗೂ ಗ್ರಾಮ ವಾಸ್ತವ್ಯ ಮಾಡುವಂತೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಅಘಲಯ ದೊಡ್ಡ ಕೆರೆ ವೀಕ್ಷಣೆ:ಅಘಲಯ ಗ್ರಾಮಕ್ಕೆ ಬರುವ ಮಾರ್ಗ ಮಧ್ಯದಲ್ಲಿ ಸಿಗುವ ಅಘಲಯ ಗ್ರಾಮದ ದೊಡ್ಡ ಕೆರೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾರಿನಿಂದ ಕೆಳಗಿಳಿದು ವೀಕ್ಷಿಸಿದರು. ಸಾಲದಭಾದೆ ಯಿಂದ ನೇಣು ಬಿಗಿದುಕೊಂಡು ಮೃತರಾದ ಸುರೇಶ್ ಅವರ ತೋಟವನ್ನೂ ವೀಕ್ಷಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಶಾಸಕ ನಾರಾಯಣಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ, ಜಿಲ್ಲಾಧಿಕಾರಿ ಮಂಜುಶ್ರೀ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಎಂ.ಶಿವಮೂರ್ತಿ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಜಿ.ಪ್ರಭು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಸದಸ್ಯ ಬಿ.ಎಲ್.ದೇವರಾಜು, ಪುರಸಭೆಯ ಮಾಜಿ ಅಧ್ಯಕ್ಷ ಹೆಚ್.ಕೆ.ಅಶೋಕ್, ಪುರಸಭೆಯ ಸದಸ್ಯರಾದ ಹೆಚ್.ಆರ್.ಲೋಕೇಶ್, ಕೆ.ಎಸ್.ಸಂತೋಷ್, ಅಶೋಕ್ ಮತ್ತಿತರರಿದ್ದರು.
ಉಪಾಹಾರ ಸೇವನೆ: ತಾಪಂ ಮಾಜಿ ಉಪಾಧ್ಯಕ್ಷ ಜಾನಕೀರಾಂ ಮನೆಯಲ್ಲಿ ಶಾಸಕ ನಾರಾಯಣ ಗೌಡ ಅವರೊಂದಿಗೆ ಉಪಾಹಾರ ಸೇವಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಯವರ ಕುಶಲೋಪರಿ ವಿಚಾರಿಸಿದರು.