Advertisement

ಸಾಲ ಮನ್ನಾ:ಒಂದೇ ಆಧಾರ್‌ ಸಂಖ್ಯೆಗೆ 100 ರೈತರ ಹೆಸರು ಲಿಂಕ್‌!

04:05 PM Oct 26, 2017 | Team Udayavani |

ಮುಂಬಯಿ:ಸಾಲ ಮನ್ನಾ ಅನುಷ್ಠಾನಕ್ಕೆ ಆನ್‌ಲೈನ್‌ ನೋಂದಣಿಯ ಮಹಾರಾಷ್ಟ್ರ ಸರಕಾರದ ಪ್ರಯತ್ನವು ಇದೀಗ ಸುಮಾರು 100 ರೈತರ ಹೆಸರನ್ನು ಒಂದೇ ಆಧಾರ್‌ ಸಂಖ್ಯೆಯೊಂದಿಗೆ ಜೋಡಿಸುವ ಮೂಲಕ ಇಡೀ ಆಡಳಿತವನ್ನೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

Advertisement

ರಾಜ್ಯ ಸರಕಾರವು ತನ್ನ ಸಾಲ ಮನ್ನಾದ ಲಾಭ ಸೂಕ್ತ ವ್ಯಕ್ತಿಗೆ ತಲುಪುವಂತೆ ಮಾಡಲು ರೈತರ ಆಧಾರ್‌ ಸಂಖ್ಯೆಯೊಂದಿಗೆ ಆನ್‌ಲೈನ್‌ ನೋಂದಣಿಗೆ ಒತ್ತು ನೀಡಿತ್ತು. ಆದರೆ, ಈ ಆನ್‌ಲೈನ್‌ ನೋಂದಣಿಯಲ್ಲಿ 100ಕ್ಕಿಂತಲೂ ಹೆಚ್ಚಿನ ರೈತರ ಹೆಸರು ಒಂದೇ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದು ಕಂಡುಬಂದಿದೆ.

ಮಹಾರಾಷ್ಟ್ರ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ರೈತರ ಸಂಭಾವ್ಯ ಫಲಾನುಭವಿಗಳ ಪಟ್ಟಿಯೊಂದನ್ನು ತೋರಿಸಿದ್ದು, ಅದರಲ್ಲಿ ಎಲ್ಲರ ನೋಂದಣಿ ಒಂದೇ  ಆಧಾರ್‌ ಸಂಖ್ಯೆಯೊಂದಿಗೆ ಆಗಿರುವುದು ಕಂಡುಬಂದಿದೆ. ಇದು ಸರಕಾರಕ್ಕೆ ಕಳವಳ ವನ್ನುಂಟುಮಾಡಿದೆ.

ಆಧಾರ್‌ ಸಂಖ್ಯೆ ನಕಲಿ ಫಲಾನುಭವಿಗಳನ್ನು ಪತ್ತೆ ಮಾಡುವಂತಹ ಒಂದು ಮುಖ್ಯ ಕೀಲಿ ಎಂದು ನಾವು ಯಾವಾಗಲೂ ಭಾವಿಸುತ್ತಿದ್ದೆವು. ಆದರೆ, ಈಗ ಇಷ್ಟೊಂದು ರೈತರ ಹೆಸರು ಒಂದೇ ಆಧಾರ್‌ ಸಂಖ್ಯೆಯಲ್ಲಿ ನೋಂದಣಿಯಾಗಿರುವುದನ್ನು ನೋಡುವಾಗ, ನಮಗೆ ಅದನ್ನು ಹೇಗೆ ಎದುರಿಸಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಧಿಕಾರಿ ನುಡಿದಿದ್ದಾರೆ.

ಒಂದೊಮ್ಮೆ ನಾವು ಇದರ ಹಸ್ತಚಾಲಿತ ಪರಿಶೀಲನೆ ನಡೆಸಿದರೆ, ಅದು ಇನ್ನಷ್ಟು ವಾರಗಳನ್ನು ತೆಗೆದುಕೊಳ್ಳಲಿದೆ. ಸಾಲ ಮನ್ನಾ ಯೋಜನೆಯ ಅನುಷ್ಠಾನದಲ್ಲಿ ವಿಳಂಬಕ್ಕಾಗಿ ರೈತ ಸಮುದಾಯವೂ ಈಗಾಗಲೇ ಆಕ್ರೋಶಗೊಂಡಿದೆ‌ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಏತನ್ಮಧ್ಯೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಬುಧವಾರ  ಬ್ಯಾಂಕ್‌ ಅಧಿಕಾರಿಗಳ ತುರ್ತು ಸಭೆಯೊಂದನ್ನು ಕರೆದು, ಸಾಲ ಮನ್ನಾ ಯೋಜನೆಯನ್ನು ವೇಗವಾಗಿ ಕಾರ್ಯ ಗತಗೊಳಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭ ಕೆಲ ಬ್ಯಾಂಕ್‌ ಅಧಿಕಾರಿಗಳು,ಆನ್‌ಲೈನ್‌ ರಿಜಿಸ್ಟ್ರೇಶನ್‌ ಪೋರ್ಟಲ್‌(ಆಪ್ಲೆ ಸರ್ಕಾರ್‌)ನಿಂದ ಸಿಕ್ಕಿರುವ ದತ್ತಾಂಶವು ತಮ್ಮಲ್ಲಿರುವ ದಾಖಲೆಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕೆಲವು ರೈತರ ಹೆಸರು ಕಾಣೆಯಾಗಿದೆ. ಅದೇ, ಇನ್ನೂ ಕೆಲವರ ಹೆಸರು ಭೂಮಿಯ ಗಾತ್ರ ಅಥವಾ ಸಾಲದ ಪ್ರಕಾರದೊಂದಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರಕಾರವು ತನ್ನ 34,000 ಕೋ.ರೂ.ಗಳ ಕೃಷಿ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಮೊದಲ ಹಂತವಾಗಿ ಕಳೆದ ವಾರ 4,000 ಕೋ.ರೂ. ಜಾರಿಗೊಳಿಸಿದೆ.ಕೇಂದ್ರ ಸರಕಾರವೂ ಈ ವರ್ಷ ಬೆಳೆ ವಿಮೆ ಯೋಜನೆಯ ಲಾಭ ನೀಡಲು ಆಧಾರ್‌ ಕಡ್ಡಾಯ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next