Advertisement

ಪಡಿತರ ಚೀಟಿಗಾಗಿ ಸಾಲಗಾರರ ಪರದಾಟ

03:33 PM Dec 22, 2018 | Team Udayavani |

ರಾಯಚೂರು: ಸರ್ಕಾರ ರೈತರ ಸಾಲಮನ್ನಾಕ್ಕಾಗಿ ಒಡ್ಡಿರುವ ಪಡಿತರ ಚೀಟಿ ಕಡ್ಡಾಯ ಎಂಬ ಷರತ್ತು ಸವಾಲಾಗಿ ಪರಿಣಮಿಸಿದೆ. ಈಗ ಸಾಲ ಪಡೆದ ರೈತರಲ್ಲಿ ಬಹುತೇಕರಲ್ಲಿ ಪಡಿತರ ಚೀಟಿಯೇ ಇಲ್ಲ ಎನ್ನುವುದು ಒಂದೆಡೆಯಾದರೆ, ಕೆಲವೆಡೆ ಹೆಸರು ತಿದ್ದುಪಡಿ ಮಾಡುವುದಕ್ಕೂ ಆಸ್ಪದ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಸಂಬಂಧಿಸಿದ ಬ್ಯಾಂಕ್‌ಗಳು ಸಾಲ ಪಡೆದವರಿಗೆ ಈಗಾಗಲೇ ಟೋಕನ್‌ ನೀಡುತ್ತಿವೆ. ನಾವು ಕೇಳಿದಾಗ ಅಗತ್ಯ ದಾಖಲೆ
ಸಲ್ಲಿಸುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಮುಖ್ಯವಾಗಿ ಪಹಣಿ, ರೈತರ ಆಧಾರ್‌ ಕಾರ್ಡ್‌ ಜತೆಗೆ ಪಡಿತರ ಚೀಟಿ ಕಡ್ಡಾಯ ಎನ್ನುವ ನಿಯಮವೇ ಈಗ ಮುಳುವಾಗುತ್ತಿದೆ. ಇದರಿಂದ ರೈತರು ನಿತ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಿಗೆ ಅಲೆಯುವಂತಾಗಿದೆ.
 
ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಲ್ಲಿ ಹೆಚ್ಚಾಗಿ ಐದು ಎಕರೆಗಿಂತ ಮೇಲ್ಪಟ್ಟ ಮಧ್ಯಮ ಹಾಗೂ ದೊಡ್ಡ ರೈತರೇ ಇದ್ದಾರೆ. ಅವರೆಲ್ಲ ಎಪಿಎಲ್‌ ಕಾರ್ಡ್‌ ವ್ಯಾಪ್ತಿಗೆ ಬರುವವರಾಗಿದ್ದಾರೆ. ಎಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರದಿಂದ ತಿಂಗಳಿಗೆ ಐದು ಕೆಜಿ ಅಕ್ಕಿ ಹೊರತಾಗಿಸಿ ಮತ್ತೇನು ಸಿಗುವುದಿಲ್ಲ. ಹೀಗಾಗಿ ಸಾಕಷ್ಟು ಜನ ಕಾರ್ಡ್‌ ಪಡೆಯುವ ಗೋಜಿಗೆ ಹೋಗಿಲ್ಲ. ಇನ್ನೂ ಪಡೆದರೂ ಕೆಲ
ರೈತರ ಪಹಣಿ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಬದಲಾಗಿದೆ. ಅದನ್ನು ತಿದ್ದುಪಡಿ ಮಾಡಿಸಲು ಹೋದರೆ ಈಗ ಯಾವ ತಿದ್ದುಪಡಿ ಕೂಡ ಮಾಡುವುದಿಲ್ಲ ಎನ್ನುತ್ತಿದ್ದಾರೆ ಇಲಾಖೆ ಅಧಿಕಾರಿಗಳು.

ಜಿಲ್ಲೆಯಲ್ಲಿ 190 ವಾಣಿಜ್ಯ ಬ್ಯಾಂಕ್‌ಗಳಲ್ಲಿ ಡಿ.31, 2017ರೊಳಗಾಗಿ ಬೆಳೆ ಸಾಲ ಪಡೆದ ಒಟ್ಟು 1,24,051 ರೈತರಿದ್ದಾರೆ. ಸಾಲ ಮನ್ನಾ ಆಗಬೇಕಾದರೆ ಪಹಣಿ, ಆಧಾರ ಕಾರ್ಡ್‌, ಪಡಿತರ ಚೀಟಿ ನಕಲು ಪ್ರತಿ ಸಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, ಪಡಿತರ ಚೀಟಿಯನ್ನು ಜು.5ರ 2018ಗಿಂತ ಮುಂಚಿತವಾಗಿ ಪಡೆದಿರಬೇಕು ಎಂಬ ನಿಯಮ ಈಗ ಸಮಸ್ಯೆಗೀಡು ಮಾಡಿದೆ. ದಾಖಲೆ ಸಲ್ಲಿಕೆಗೆ ಕಾಲಾವಕಾಶ ನೀಡಿರುವ ಸರ್ಕಾರ ಪಡಿತರ ಚೀಟಿ ಪಡೆಯಲು ಕಾಲಾವಕಾಶ ನಿಗದಿ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಆಧಾರ್‌ ಕಡ್ಡಾಯ: ಜಿಲ್ಲೆಯಲ್ಲಿ 3,76,498 ಬಿಪಿಎಲ್‌, 45,161 ಅಂತ್ಯೋದಯ ಕಾರ್ಡ್‌ದಾರರಿದ್ದಾರೆ. ಉಳಿದಂತೆ ಎಪಿಎಲ್‌
ಕಾರ್ಡ್‌ದಾರರು ಕೇವಲ ಎರಡು ಸಾವಿರ ಇರಬೇಕಷ್ಟೇ ಎನ್ನುತ್ತಾರೆ ಅಧಿಕಾರಿಗಳು. ಈಗ ಪಡಿತರ ಚೀಟಿ ಪಡೆಯಬೇಕಾದರೆ ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ಬೇಕು. ಅದರ ಜತೆಗೆ ಆದಾಯ ಪ್ರಮಾಣಪತ್ರವನ್ನೂ ಸಲ್ಲಿಸಬೇಕಿದೆ. ಒಂದು ವೇಳೆ ಆಧಾರ್‌ ಕಾರ್ಡ್‌ ಸಲ್ಲಿಸದಿದ್ದರೆ ಪಡಿತರ ಚೀಟಿಯೇ ವಿತರಣೆ ಆಗುವುದಿಲ್ಲ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ಎಲ್ಲವೂ ಬಂದ್‌: ಒಂದೆಡೆ ಪಡಿತರ ಚೀಟಿ ಕಡ್ಡಾಯ ಮಾಡಿರುವ ಸರ್ಕಾರ ಮತ್ತೂಂದೆಡೆ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. 2017-18ನೇ ಸಾಲಿನ ಪಡಿತರ ಚೀಟಿ ವಿಲೇವಾರಿ ಬಾಕಿ ಉಳಿದ ಕಾರಣ 2019ರ ಜ.1ರವರೆಗೆ ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಕಾರ್ಯ ಸ್ಥಗಿತಗೊಳಿಸಿದೆ. ಹೀಗಾಗಿ ಪಡಿತರ ಚೀಟಿಯಲ್ಲಿ ಹೆಸರು ಬದಲಾಗಿದ್ದಲ್ಲಿ ತಿದ್ದುಪಡಿಗೂ ಅವಕಾಶ ಇಲ್ಲದಂತಾಗಿದೆ. 

Advertisement

ಸಮಿತಿ ಮೇಲೆ ನಿಂತಿದೆ ನಿರ್ಧಾರ
ಈಗಾಗಲೇ ಬ್ಯಾಂಕ್‌ಗಳಲ್ಲಿ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ರೈತರಿಗೆ ಟೋಕನ್‌ ನೀಡುತ್ತಿದ್ದು, ನಾವು ಹೇಳಿದಾಗ ದಾಖಲೆ ಸಲ್ಲಿಸುವಂತೆ ಹೇಳಲಾಗುತ್ತಿದೆ. ಒಂದು ವೇಳೆ ಬ್ಯಾಂಕ್‌ಗೆ ಸಲ್ಲಿಸುವ ದಾಖಲೆ ಹೋಲಿಕೆ ಆಗದಿದ್ದಲ್ಲಿ ಆಯಾ ತಾಲೂಕಿನ ತಹಶೀಲ್ದಾರ್‌ ನೇತೃತ್ವದ ಸಮಿತಿ ಪರಿಶೀಲಿಸಿ ಸಾಲಮನ್ನಾ ಆಗಬೇಕೆ ಬೇಡವೇ ಎಂದು ನಿರ್ಧರಿಸಲಿದೆ. ಹೀಗಾಗಿ ತಹಶೀಲ್ದಾರ್‌ ಸಮಿತಿಯನ್ನೇ ರೈತರ ಸಾಲ ಮನ್ನಾ ಅವಲಂಬಿಸಿದೆ.

ಪಡಿತರ ಚೀಟಿ ವಿತರಣೆ ಈಗ ಪಾರದರ್ಶಕವಾಗಿದೆ. ಆಧಾರ್‌ ಕಾರ್ಡ್‌, ಆದಾಯ ಪ್ರಮಾಣ ಸಲ್ಲಿಸದ ಹೊರತು ಕಾರ್ಡ್‌ ನೀಡುವುದಿಲ್ಲ. ಅಲ್ಲದೇ, ಎಲ್ಲವೂ ಆನ್‌ಲೈನ್‌ ವ್ಯವಸ್ಥೆಯಲ್ಲಿ ನಡೆಯಲಿದ್ದು, ಕಾರ್ಡ್‌ ಸಲ್ಲಿಸಿದ ಕೆಲ ದಿನಗಳಲ್ಲಿ ಅವರ ಮನೆಗೆ ಬರಲಿದೆ. ಆದರೆ, ಹಳೇ ಕಾರ್ಡಗಳ ಬಾಕಿ ಉಳಿದ ಕಾರಣ ಈಗ ಕಾರ್ಡ್‌ ತಿದ್ದುಪಡಿ ಸ್ಥಗಿತ ಮಾಡಲು ಸೂಚನೆ ಬಂದಿದೆ.
 ಅರುಣಕುಮಾರ, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next