ಗುಂಡ್ಲುಪೇಟೆ: ಮೂಖಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ 43 ಮಂದಿ ರೈತರಿಗೆ 36 ಲಕ್ಷ ರೂ. ಸಾಲ ನೀಡಲಾಗುತ್ತಿದೆ ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನೀಲ್ ತಿಳಿಸಿದರು.
ತಾಲೂಕಿನ ಮೂಖಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂಖಹಳ್ಳಿ ಸಂಘ ಆರಂಭಿಸಿ ಕೇವಲ ವರ್ಷ ಮಾತ್ರ ಕಳೆದಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಸಾಲ ಪಡೆದ ಪ್ರತಿಯೊಬ್ಬರೂ ಮರು ಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಸೇರಿದಂತೆ ತಾಂತ್ರಿಕ ಕಾರಣದಿಂದ ಮೂಖಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ವರ್ಷದಿಂದ ಸಾಲ ನೀಡಲು ವಿಳಂಬವಾಗಿತ್ತು. ನಂತರ ಅವುಗಳನದ್ರೂ ಸರಿಪಡಿಸಿ ಸಾಲ ನೀಡಲಾಗುತ್ತಿದೆ. ಸಾಲಮನ್ನಾವಾಗುತ್ತದೆ ಎಂದು ಭಾವನೆ ಬಿಟ್ಟು ಮರು ಪಾವತಿಗೆ ಸಹಕರಿಸಬೇಕು ಎಂದರು.
ಪ್ರತಿ ರೈತನಿಗೂ ಎಕರೆ, ಬೆಳೆವಾರು ಆಧಾರದ ಮೇಲೆ ಸಾಲ ನೀಡಲಾಗಿದೆ. ಇದನ್ನು ಸಕಾಲದಲ್ಲಿ ಮರು ಪಾವತಿ ಮಾಡದಿದ್ದರೆ ಸಮಸ್ಯೆ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ. ಆದ್ದರಿಂದ ಎರಡು ಮೂರು ತಿಂಗಳು ಬಾಕಿ ಉಳಿಸಿಕೊಳ್ಳದೆ ಕಟ್ಟಬೇಕು. ವಿಳಂಬ ಮಾಡದಿದ್ದರೆ ಹೊಸ ಸಾಲವನ್ನು ಸಂಘದಿಂದ ಸುಲಭವಾಗಿ ಪಡೆಯಬಹುದು ಎಂದು ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ನಾಗರಾಜನಾಯಕ, ನಿರ್ದೇಶಕ ಹರಿಶ್ವಂದ್ರ, ಮಹದೇವ, ಮಹದೇವೆಗೌಡ, ಕರಿಬಸವೇಗೌಡ, ದೊಡ್ಡೆಗೌಡ, ಮೇಲ್ವಿಚಾರಕ ರಮೇಶ್, ಚಂದ್ರಮೌಳಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಸತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.