ಬಾಗಲಕೋಟೆ: ಪಶು ಸಂಗೋಪನೆ ಮತ್ತು ಮೀನುಗಾರಿಕೆ ಚಟುವಟಿಕೆಗಳಿಗಾಗಿ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸಲು ಜಿಲ್ಲೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲ ಅಭಿಯಾನ ಕಾರ್ಯಕ್ರಮವನ್ನು ವಾರದ ಪ್ರತಿ ಶುಕ್ರವಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾ ಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನ ಹಮ್ಮಿಕೊಳ್ಳುವ ಕುರಿತು ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಹಾಗೂ ಜಿಲ್ಲಾ ಅಗ್ರಣಿ ಬ್ಯಾಂಕನ್ ಸಹಯೋಗದಲ್ಲಿ ವಾರದ ಪ್ರತಿ ಶುಕ್ರವಾರ ರೈತರಿಗೆ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಸಾಲ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಭಾರತ ಸರಕಾರದ ಹಣಕಾಸು ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆಯು ಹೈನುಗಾರಿಕೆ, ಕುರಿ-ಮೇಕೆ, ಹಂದಿ, ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆ ಉಪ ಕಸಬುಗಳನ್ನು ಕೈಗೊಳ್ಳಲು ಅವಶ್ಯಕತೆ ಇರುವ ದುಡಿಮೆ ಬಂಡವಾಳವನ್ನು ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವು ಒದಗಿಸುವ ಅಭಿಯಾನವನ್ನು ಹಮ್ಮಿಕೊಳ್ಳಲು ಎಲ್ಲ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದ್ದು, ಜಿಲ್ಲೆಯಲ್ಲಿ ಕೆಸಿಸಿ ಸಾಲ ಅಭಿಯಾನ ಪ್ರಾರಂಭಿಸಲಾಗಿದೆ ಎಂದರು.
ಹೈನುಗಾರಿಕೆ, ಕುರಿ-ಮೇಕೆ, ಹಂದಿ, ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆ ಉಪ ಕಸಬುಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯಲ್ಲಿನ ರೈತರು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ದುಡಿಮೆ ಬಂಡವಾಳಕ್ಕೆ ಆರ್ಥಿಕ ನೆರವು ಪಡೆಯಬಹುದಾಗಿದೆ. ಈಗಾಗಲೇ ಕುರಿ-ಮೇಕೆ, ಹಂದಿ, ಕೋಳಿ ಹೊಂದಿದವರಿಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿದರು.
ಈ ಕಿಸಾನ್ ಕ್ರೆಡಿಟ್ ಕಾಡ್ì ಯೋಜನೆಯಡಿ 2 ಲಕ್ಷ ರೂ. ವರೆಗಿನ ಸಾಲದ ಮೊತ್ತಕ್ಕೆ ಶೇ. 2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ. ಅಲ್ಲದೇ ಸಕಾಲದಲ್ಲಿ ಈ ಸಾಲವನ್ನು ಮರುಪಾವತಿ ಮಾಡಿದಲ್ಲಿ ವಾರ್ಷಿಕ ಶೇ.3ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನದ ಸೌಲಭ್ಯ ಪಡೆಯಬಹುದಾಗಿದೆ. ಆಸಕ್ತರು ರೈತರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಮಟ್ಟದಲ್ಲಿ 5 ಜನ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ ಎಂದರು.
ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಗೋಪಾಲರೆಡ್ಡಿ, ನಬಾರ್ಡನ ಯಮುನಾ ಪೈ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ|ಶಶಿಧರ ನಾಡಗೌಡರ, ಮೀನುಗಾರಿಕೆ ಉಪ ನಿರ್ದೇಶಕ ಇರ್ಪಾನ್ ಬಾಂಗಿ, ಭಾರತೀಯ ಸ್ಟೇಟ್ ಬ್ಯಾಂಕಿನ ಕ್ಷೇತ್ರೀಯ ವ್ಯವಸ್ಥಾಪಕ ನರಸಿಂಹಮೂರ್ತಿ, ಕೆವಿಜಿ ಬ್ಯಾಂಕಿನ ಕ್ಷೇತ್ರೀಯ ವ್ಯವಸ್ಥಾಪಕ ಶ್ರೀಧರ ಉಪಸ್ಥಿತರಿದ್ದರು.