ಸೀತಾಂಗೋಳಿ: ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಿದ್ದರೂ ಲೋಡ್ ಶೆಡ್ಡಿಂಗ್‌ಗೆ ಆಸ್ಪದ ನೀಡದೆ, ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದೆಂದು ವಿದ್ಯುತ್ ಇಲಾಖೆ ಸಚಿವ ಎಂ.ಎಂ ಮಣಿ ಹೇಳಿದರು.
ರಾಜ್ಯ ವಿದ್ಯುತ್ ಮಂಡಳಿ ನಿಗಮದಿಂದ ಜಿಲ್ಲೆಯಲ್ಲಿ ಸ್ಥಾಪಿಸ ಲಾದ 30ನೇ ಸೆಕ್ಷನ್ ಕಚೇರಿ ಪುತ್ತಿಗೆ ಗ್ರಾ. ಪಂಚಾಯತ್‌ನ ಸೀತಾಂಗೋಳಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 30 ಶೇ. ವಿದ್ಯುತ್ ವಿನಿಯೋಗಿಸಲಾಗುತ್ತಿದೆ. ರಾಜ್ಯದಲ್ಲಿ ಮರುಬಳಕೆ ವಿದ್ಯುತ್‌ನ್ನು ಬಳಸಲು ಸರಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ಅವರು ಹೇಳಿದರು. ಹೊಸದಾಗಿ ನಿರ್ಮಿಸಲಾಗುವ ಮನೆಗಳಲ್ಲಿ ಸೌರ ವಿದ್ಯುತ್ ಸಂಪರ್ಕ ಸ್ಥಾಪಿಸಿದರೆ ವಿದ್ಯುತ್ ಉಳಿತಾಯವಾಗಬಹುದು ಎಂದು ಅವರು ಹೇಳಿದರು. ನವೀಕರಿಸಬಹುದಾದ ವಿದ್ಯುತ್ ಶಕ್ತಿ ಪೂರೈಕೆಯಲ್ಲಿ ಸಮರ್ಥವಾಗಿ ಉಪಯೋಗಿಸಲು ಸರಕಾರವು ಉತ್ಸುಕವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಸೀತಾಂಗೋಳಿಯಲ್ಲಿ ನಿರ್ಮಾಣ ಗೊಂಡ ವಿದ್ಯುತ್ ಸಬ್ ಸ್ಟೇಶನ್ ಮೂಲಕ ನಾಲ್ಕು ಗ್ರಾ. ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕರಾದ ಪಿ.ಬಿ. ಅಬ್ದುಲ್ ರಜಾಕ್, ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಮಧೂರು ಗ್ರಾ.ಪಂ. ಅಧ್ಯಕ್ಷೆ ಮಾಲತಿ ಸುರೇಶ್ ಉಪಸ್ಥಿತರಿದ್ದರು.