Advertisement

ಹಿಂಗಾರಿನಲ್ಲೇ ಲೋಡ್‌ ಶೆಡ್ಡಿಂಗ್‌ ಭೀತಿ

06:00 AM Oct 24, 2018 | Team Udayavani |

ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಉಷ್ಣ ವಿದ್ಯುತ್‌ ಉತ್ಪಾದನೆ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಹಿಂಗಾರಿನ ಆರಂಭದ ಹೊತ್ತಿನಲ್ಲೇ ಲೋಡ್‌ ಶೆಡ್ಡಿಂಗ್‌ ಶುರುವಾಗುವ ಭೀತಿ ಎದುರಾಗಿದೆ.

Advertisement

ರಾಜ್ಯದ ಉಷ್ಣ ಸ್ಥಾವರಗಳಲ್ಲಿ ಗರಿಷ್ಠ 4,220 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥಯವಿದ್ದರೂ ಕಲ್ಲಿದ್ದಲು ಕೊರತೆಯಿಂದಾಗಿ ಒಟ್ಟು ವಿದ್ಯುತ್‌ ಉತ್ಪಾದನೆ ಪ್ರಮಾಣ 1,500 ಮೆಗಾವ್ಯಾಟ್‌ ಮೀರುತ್ತಿಲ್ಲ. ಸುಮಾರು 1,500 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಖೋತಾ ಉಂಟಾಗಿರುವುದರಿಂದ ಬೇಡಿಕೆಯಷ್ಟು ವಿದ್ಯುತ್‌ ಪೂರೈಸಲು ಇಂಧನ ಇಲಾಖೆ ಹರಸಾಹಸಪಡುತ್ತಿದೆ. ಹಾಗಾಗಿ, ಲೋಡ್‌ ಶೆಡ್ಡಿಂಗ್‌ ಮೂಲಕ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಚಿಂತಿಸಿದೆ.

ರಾಜ್ಯದಲ್ಲಿ ಸದ್ಯ ನಿತ್ಯ ವಿದ್ಯುತ್‌ ಬೇಡಿಕೆ ಸರಾಸರಿ 10,000 ಮೆಗಾವ್ಯಾಟ್‌ನಿಂದ 10,500 ಮೆಗಾವ್ಯಾಟ್‌ ನಷ್ಟಿದೆ. ಬೇಡಿಕೆಯಷ್ಟು ವಿದ್ಯುತ್‌ ಸದ್ಯ ಪೂರೈಕೆಯಾಗುತ್ತಿದ್ದರೂ ಕೇಂದ್ರದಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗದ ಕಾರಣ ಉಷ್ಣ ವಿದ್ಯುತ್‌ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ರಾಯಚೂರಿನ ಬಿಟಿಪಿಎಸ್‌ ಘಟಕದಲ್ಲಿ ಕಲ್ಲಿದ್ದಲು  ದಾಸ್ತಾನು ಶೂನ್ಯಕ್ಕಿಳಿದಿದ್ದು, ಆಯಾ ದಿನ ಪೂರೈಕೆ  ಯಾಗುವ ಕಲ್ಲಿದ್ದಲು ಬಳಸಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಹಾಗಾಗಿ, ಸದ್ಯಕ್ಕೆ ಎಂಟು ಘಟಕಗಳ ಪೈಕಿ ನಾಲ್ಕು ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದು, ನಾಲ್ಕು ಸ್ಥಗಿತಗೊಂಡಿವೆ. ನಾಲ್ಕು ಘಟಕಗಳಿಂದ 700 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.  ಇನ್ನೊಂದೆಡೆ, ಬಳ್ಳಾರಿಯ ಬಿಟಿಪಿಎಸ್‌ ಸ್ಥಾವರದಲ್ಲಿನ ಮೂರು ಘಟಕಗಳ ಪೈಕಿ ಒಂದು ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದು, 300 ಮೆಗಾವ್ಯಾಟ್‌ ಉತ್ಪಾದನೆಯಾಗುತ್ತಿದೆ. ಬಳ್ಳಾರಿಯ ವೈಟಿಪಿಎಸ್‌ ಸ್ಥಾವರದ ಎರಡು ಘಟಕಗಳಲ್ಲಿ ಒಂದು ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 350 ಮೆಗಾವ್ಯಾಟ್‌ ಉತ್ಪಾದನೆಯಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next