Advertisement

Load Shedding:ಮಳೆಗಾಲದಲ್ಲೂ ಲೋಡ್‌ ಶೆಡ್ಡಿಂಗ್‌; ರಾತ್ರಿ ಒಂದೊಂದು ಗಂಟೆ ವಿದ್ಯುತ್‌ ಕಡಿತ

11:40 AM Aug 13, 2023 | Team Udayavani |

ಮಂಗಳೂರು: ಮಳೆಗಾಲ ಆಗಿದ್ದರೂ ಮೆಸ್ಕಾಂ ವ್ಯಾಪ್ತಿಯಲ್ಲಿ ರಾತ್ರಿ ಅನಿಯಮಿತವಾಗಿ ವಿದ್ಯುತ್‌ ಕಡಿತ ಆರಂಭಗೊಂಡಿದ್ದು ಜನರು ಕಳವಳ ವ್ಯಕ್ತಪಡಿಸತೊಡಗಿದ್ದಾರೆ.

Advertisement

ಕಳೆದ ಒಂದು ವಾರದಿಂದ ರಾತ್ರಿ ಯಾವುದೇ ಪೂರ್ವ ಸೂಚನೆ ಇಲ್ಲದೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂದು ನಗರದ ವಿವಿಧ ಕಡೆಗಳಿಂದ ನಾಗರಿಕರು ದೂರುತ್ತಿದ್ದಾರೆ.

ಸಾಮಾನ್ಯವಾಗಿ ವಿದ್ಯುತ್‌ ಕಡಿತ ಇರುವಾಗ ಮೆಸ್ಕಾಂ ಸಕಾರಣ ಸಹಿತ ಪೂರ್ವ ಪ್ರಕಟನೆ ನೀಡುತ್ತದೆ. ಆದರೆ ಪ್ರಸ್ತುತ ಅನಿಯಮಿತವಾಗಿ ಅದರಲ್ಲೂ ರಾತ್ರಿ ಹೊತ್ತು ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ನಗರದಲ್ಲಿ ಬಹುತೇಕ ಎಲ್ಲ ಪ್ರದೇಶಗಳಲ್ಲೂ ವಿದ್ಯುತ್‌ ಕಡಿತ ಕಳೆದ ವಾರವೊಂದರಿಂದ ಆಗುತ್ತಿದೆ, ಕೈಗಾರಿಕಾ ಪ್ರದೇಶದಲ್ಲೂ ವಿದ್ಯುತ್‌ ಕಡಿತವಾಗುತ್ತಿದೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಗರ ಭಾಗದಲ್ಲಿ ಸಮಸ್ಯೆ ಇಲ್ಲದಿದ್ದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯ ಹೆಚ್ಚಿದೆ.

ಕೆಪಿಟಿಸಿಎಲ್‌ ಸೂಚನೆ

Advertisement

ಮೆಸ್ಕಾಂ ಅಧಿಕಾರಿಗಳ ಪ್ರಕಾರ ಪವರ್‌ ಜನರೇಶನ್‌ನಲ್ಲಿ ಕೆಲವು ದಿನಗಳಿಂದ ಸಮಸ್ಯೆ ಇದೆ. ರಾಯಚೂರು ಹಾಗೂ ಬಳ್ಳಾರಿಯ ಉಷ್ಣ ವಿದ್ಯುತ್‌ ಸ್ಥಾವರಗಳ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ಕುಸಿದಿದೆ. ಆದ್ದರಿಂದ ಲೋಡ್‌ ಹೆಚ್ಚಿರುವ ಅವಧಿಗಳಲ್ಲಿ ಪವರ್‌ ಕಟ್‌ ಮಾಡುವಂತೆ ಕೆಪಿಟಿಸಿಎಲ್‌ನ ಬೆಂಗಳೂರಿನ ಲೋಡ್‌ ಡಿಸ್ಪಾಚ್‌ ಸೆಂಟರ್‌ ನಿಂದಲೇ ಸೂಚನೆ ಬರುತ್ತಿದೆ.

ಮಳೆ ಕೊರತೆಯೂ ಕಾರಣ

ಇನ್ನೊಂದೆಡೆ ಮಳೆ ಕೊರತೆಯಿಂದಾಗಿ ಪೀಕ್‌ ಅವಧಿಗಳಲ್ಲಿ ಲೋಡ್‌ ಹೆಚ್ಚಿರುತ್ತದೆ. ಸಾಮಾನ್ಯವಾಗಿ ವರ್ಷದ ಈ ಮಳೆಯ ತಿಂಗಳುಗಳಲ್ಲಿ ಲೋಡ್‌ ಕಡಿಮೆ ಎಂದರೆ 700 ಮೆಗಾವ್ಯಾಟ್‌ ಆಸುಪಾಸಿನಲ್ಲಿರುತ್ತದೆ. ಈ ವರ್ಷ ಲೋಡ್‌ ಮೆಸ್ಕಾಂ ವ್ಯಾಪ್ತಿಯಲ್ಲಿ 1,000 ಮೆಗಾ ವ್ಯಾಟ್‌ ಇದೆ. ಹಾಗಾಗಿ ಲೋಡ್‌ ನಿರ್ವಹಣೆಗಾಗಿ ಪೀಕ್‌ ಅವಧಿಯಲ್ಲಿ ಕಡಿತ ಅನಿವಾರ್ಯ ಎನ್ನುವುದು ಅಧಿಕಾರಿಗಳು ನೀಡುವ ಕಾರಣ.

ಶೀಘ್ರ ಸರಿಯಾಗುವ ನಿರೀಕ್ಷೆ

ರಾಜ್ಯದಲ್ಲಿ 4 ವರ್ಷಗಳಿಂದ ಲೋಡ್‌ ಶೆಡ್ಡಿಂಗ್‌ ಇರಲಿಲ್ಲ, ವಿದ್ಯುತ್‌ ಉತ್ಪಾದನೆ ಹೆಚ್ಚಿರುವುದು, ಮುಖ್ಯವಾಗಿ ಕಲ್ಲಿದ್ದಲು ಆಧರಿತ ಹಾಗೂ ಸೌರ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಈ ಬಾರಿ ತಾಂತ್ರಿಕ ಸಮಸ್ಯೆಯಿಂದಾಗಿ ಅಡಚಣೆಯಾಗಿದೆ. ಶೀಘ್ರ ಪರಿಹಾರ ಆದೀತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರು, ಬಳ್ಳಾರಿ ಮತ್ತು ಕೂಡಗಿ ವಿದ್ಯುತ್‌ ಸ್ಥಾವರಗಳಲ್ಲಿ ತಾಂತ್ರಿಕ ಸಮಸ್ಯೆಯಾಗಿರುವುದರಿಂದ ಬೆಂಗಳೂರು ರಾಜ್ಯದ ಲೋಡ್‌ ಡಿಸ್ಪಾಚ್‌ ಸೆಂಟರ್‌ನಿಂದಲೇ ಅವರ ಸೂಚನೆ ಮೇರೆಗೆ ಎಲ್ಲ ಜಿಲ್ಲೆಗಳಲ್ಲೂ ಲೋಡ್‌ ಶೆಡ್ಡಿಂಗ್‌ ಆಗುತ್ತಿದೆ. ಇನ್ನೂ ಕೆಲವು ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾದ ಬಳಿಕ ಪರಿಸ್ಥಿತಿ ಸುಧಾರಿಸಬಹುದು. – ಪದ್ಮಾವತಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next