Advertisement

ಪ್ರಯಾಣಿಕರಿಗೆ ಹೊರೆ ಮೆಟ್ರೋಗೆ ವರ!

09:32 AM Apr 24, 2019 | Team Udayavani |

ಬೆಂಗಳೂರು: ಮೆಟ್ರೋ ನಿಗಮ ಮಾ.27ರಿಂದ ಜಾರಿಗೆ ತಂದಿರುವ ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಕನಿಷ್ಠ 50 ರೂ ಇರಲೇ ಬೇಕು ಎನ್ನುವ ನಿಯಮ ಸಾಮಾನ್ಯ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಈ ಆದೇಶದಿಂದ ಮೆಟ್ರೋ ನಿಗಮಕ್ಕೆ ಲಕ್ಷಾಂತರ ರೂಗಳು ಆದಾಯ ಏರಿಕೆಯಾಗಿದೆ.

Advertisement

ಸಾರ್ವಜನಿಕರ ತೀವ್ರ ವಿರೋಧ ನಡುವೆಯೂ ಮೆಟ್ರೋ ನಿಗಮ ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಕಡ್ಡಾಯವಾಗಿ 50ರೂ ಇರಬೇಕು ಎನ್ನುವ ಹೊಸ ನಿಯಮವನ್ನು ಜಾರಿ ಮಾಡಿತ್ತು. ನಿಗಮದ ಈ ನಿಲುವನ್ನು ಸಾಮಾಜಿಕ ಜಾಲತಾಣಗಳಲ್ಲೂ ಸಾರ್ವಜನಿಕರು ವಿರೋಧಿಸಿದ್ದರು. ವಿರೋಧಗಳಿಗೆ ಕಿವಿಗೊಡದ ಮೆಟ್ರೋ ನಿಗಮ ದರವನ್ನು ಮತ್ತೆ ಪರಿಷ್ಕರಿಸುವ ಗೋಜಿಗೇ ಹೋಗಿಲ್ಲ.

ಪ್ರತಿದಿನ ಮೆಟ್ರೋದಲ್ಲಿ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಸ್ಮಾರ್ಟ್‌ ಕಾರ್ಡ್‌ಗಳಲ್ಲಿ 50ರೂಗಳಿಗಿಂತ ಕಡಿಮೆ ಇದ್ದರೆ, ದ್ವಾರಗಳ ಬಾಗಿಲು ತಗೆದುಕೊಳ್ಳುವುದೇ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರಯಾಣಿಕರು ಈ ಮೊತ್ತವನ್ನು ಕಾರ್ಡ್‌ನಲ್ಲಿ ಇರಿಸಿಕೊಳ್ಳಬೇಕಾಗಿದೆ.

ಇದು ನಿಗಮಕ್ಕೆ ವರವಾಗಿ ಪರಿಣಮಿಸಿದ್ದು, ಲಕ್ಷಾಂತರೂಗಳ ಲಾಭವಾಗಿದೆ. ಸ್ಮಾರ್ಟ್‌ ಕಾರ್ಡ್‌ ಪರಿಚಯಿಸಿದ ಮುಖ್ಯ ಉದ್ದೇಶವೇ ಸಾರ್ವಜನಿಕರು ಸಾಲು ನಿಲ್ಲುವುದನ್ನು ತಪ್ಪಿಸುವುದಾಗಿತ್ತು. ಆದರೆ, ಈಗ ಮತ್ತೆ ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರು ಸಾಲು ನಿಲ್ಲುವುದು ಸಾಮಾನ್ಯವಾಗಿದೆ.

ಮೆಟ್ರೋದಲ್ಲಿ ಪ್ರತಿದಿನ ಪ್ರಯಾಣಿಸುವ ಉದ್ಯೋಗಿಗಳು ಎರಡ ರಿಂದ ಮೂರು ಸಾವಿರ ರಿಚಾರ್ಜ್‌ ಮಾಡಿಸಿಕೊಳ್ಳುತ್ತಾರೆ. ಇಂತಹ ಪ್ರಯಾಣಿಕರಿಗೆ ಹೊಸ ನಿಯಮದಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, 100 ಅಥವಾ 50 ರಿಚಾರ್ಜ್‌ ಮಾಡಿಸಿಕೊಂಡು ಪ್ರಯಾಣಿಸುವ ಸಾಮಾನ್ಯ ಪ್ರಯಾಣಿಕರ ಮೇಲೆ ಇದು ನೇರ ಪರಿಣಾಮ ಬೀರಿದೆ.

Advertisement

ಮೆಟ್ರೋ ಗೋಡೆಗಳಿಗೆ ಐತಿಹಾಸಿಕ ಸೊಗಡು: ಮೆಟ್ರೋ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ ಎನ್ನುವ ಆರೋಪಗಳು ಪದೇ ಪದೇ ಕೇಳಿ ಬಂದ ಹಿನ್ನೆಲೆಯಲ್ಲಿ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನ ಮಾಡುತ್ತಿದೆ.

ಮೆಟ್ರೋ ರೈಲುಗಳ ಡಿಸ್‌ಪ್ಲೆಗಳಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಚಿತ್ರಸಹಿತವಾಗಿ ವಿವರಣೆ ನೀಡುವುದು, ಕನ್ನಡ ಸಾಹಿತ್ಯದ ಹಾಡುಗಳನ್ನು ಪ್ರಸಾರ ಮಾಡುವುದು ಮತ್ತು ಮೆಟ್ರೋದ ನಿಲ್ದಾಣಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಕಲಾವಿದರಿಂದ ಬರೆಸುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಕನ್ನಡಿಗರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದೆ.

ಆರ್ಥಿಕ ಹೊರೆ ತಪ್ಪಿಸುವ ಉದ್ದೇಶ: ಮೆಟ್ರೋ ನಿಗಮಕ್ಕೆ ಉಂಟಾಗಿರುವ ಆರ್ಥಿಕ ಸಂಕಷ್ಟ ಮತ್ತು ಪ್ರಯಾಣಿಕ ದರವನ್ನು ಹೆಚ್ಚಿಸುವ ಎರಡನ್ನು ಏಕಕಾಲಕ್ಕೆ ತಪ್ಪಿಸುವ ಉದ್ದೇಶದಿಂದ ಸ್ಮಾರ್ಟ್‌ಕಾರ್ಡ್‌ಗಳಲ್ಲಿ 50ರೂ ಕಡ್ಡಾಯ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next