Advertisement

ಎಲ್ಲ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ

12:33 AM Sep 04, 2020 | mahesh |

ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ ಕೆಜಿ-ಯುಕೆಜಿ)ಗಳ ಆರಂಭಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲ ಸರಕಾರಿ ಶಾಲೆಗಳಲ್ಲೂ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಬೇಕು ಎಂಬ ಬಗ್ಗೆ ಚರ್ಚೆ ನಡೆದು, ಒಮ್ಮತ ಮೂಡಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಈ ಬಗ್ಗೆ ಘಟನೋತ್ತರ ಅನುಮತಿ ನೀಡಿ ಅಗತ್ಯ ಮೂಲ ಸೌಕರ್ಯ ಮತ್ತು ಸಿಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿತು ಎಂದು ಸಚಿವ ಮಾಧುಸ್ವಾಮಿ ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಜಲ ಸಮೃದ್ಧಿ ಕಾರ್ಯಕ್ರಮಕ್ಕೆ ಒಪ್ಪಿಗೆ
ಜಲಾನಯನ ಅಭಿವೃದ್ಧಿ ಯೋಜನೆಯಡಿ ವಿಶ್ವಬ್ಯಾಂಕ್‌ ನೆರವಿನೊಂದಿಗೆ 600 ಕೋಟಿ ರೂ. ವೆಚ್ಚದಲ್ಲಿ 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜಲ ಸಮೃದ್ಧಿ ಕಾರ್ಯಕ್ರಮಕ್ಕೆ ಸಂಪುಟ ಅನುಮೋದನೆ ನೀಡಿತು. ಕರ್ನಾಟಕ ಕೃಷಿ ಬೆಲೆ ಆಯೋಗದ ಅವಧಿಯನ್ನು 2023ರ ವರೆಗೆ ವಿಸ್ತರಿಸಲು ಸಂಪುಟ ಒಪ್ಪಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಅನುಷ್ಠಾನ ಸಂಬಂಧ ಕ್ಲಸ್ಟರ್‌ವಾರು ವಿಮಾ ಕಂಪೆನಿಗಳ ನಿಗದಿಗೆ ಅನುಮೋದನೆ ನೀಡಲಾಗಿದೆ.

ಅತ್ಯಾಧುನಿಕ ತಂತ್ರಾಂಶ ಒಳಗೊಂಡ 108 ಆರೋಗ್ಯ ಸೇವೆಯನ್ನು 7 ವರ್ಷ ಮುಂದುವರಿಸಲು ಅರ್ಹ ಸೇವಾದಾರರ ಆಯ್ಕೆಗಾಗಿ ಟೆಂಡರ್‌ಗೆ ಅನುಮತಿ ನೀಡಲಾಗಿದೆ. ಈ ಹಿಂದಿನ ವ್ಯವಸ್ಥೆಯಡಿ ಇದ್ದ ಲೋಪ ಸರಿಪಡಿಸಲಾಗಿದ್ದು, ಇಂತಿಷ್ಟೇ ಕಿ.ಮೀ. ಎಂಬ ಷರತ್ತು ಇರುವುದಿಲ್ಲ.

ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಧೇಯಕವನ್ನು ಮಂಡಿಸಲಾಗುವುದು. ಸಾರ್ವ ಜನಿಕ ಆಸ್ತಿಪಾಸ್ತಿ ನಷ್ಟ ಉಂಟುಮಾಡಿದವರಿಗೆ ಮಾರುಕಟ್ಟೆ ದರದ ದುಪ್ಪಟ್ಟು ದಂಡ ವಿಧಿಸುವುದು ಇದರಲ್ಲಿ ಸೇರಿದೆ. ಅಧ್ಯಾದೇಶ ಮೂಲಕ ಜಾರಿಗೊಳಿಸಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಸಹಿತ ಹಲವು ತಿದ್ದುಪಡಿಗಳಿಗೆ ಸಂಬಂಧಿಸಿ ವಿಧೇಯಕ ಮಂಡಿಸಲು ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ ಎಂದು ಮಾಧುಸ್ವಾಮಿ ಹೇಳಿದರು.

ಡಿಜಿಟಲ್‌ ಲರ್ನಿಂಗ್‌ ಯೋಜನೆ
2020-21ನೇ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರ. ದರ್ಜೆ ಕಾಲೇಜು , ಸರಕಾರಿ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಡಿಜಿಟಲ್‌ ಲರ್ನಿಂಗ್‌ ಯೋಜನೆಯನ್ನು ಈ ವರ್ಷದಿಂದ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. 430 ಪ್ರ. ದರ್ಜೆ ಕಾಲೇಜು, 87 ಸರಕಾರಿ ಪಾಲಿಟೆಕ್ನಿಕ್‌ ಮತ್ತು 14 ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 35 ಕೋ.ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next