ಟೇಕಲ್: ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಲು ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್ಕೆಜಿ, ಯುಕೆಜಿ) ಇಲ್ಲದಿರುವುದೇ ಕಾರಣ. ಸರ್ಕಾರಿ ಶಾಲೆಗೆ ಸೇರಿಸಬೇಕೆಂದರೆ ಐದೂವರೆ ವರ್ಷ ಪೂರೈಸಿರಬೇಕು, ಅದೂ ಕೂಡ ಒಂದನೇ ತರಗತಿಗೆ ಮಾತ್ರ. ಪೂರ್ವ ಪ್ರಾಥಮಿಕ ಶಿಕ್ಷಣ ಬೇಕೆಂದರೆ ಖಾಸಗಿ ಶಾಲೆಗೆ ಹೋಗಬೇಕು. ಅಲ್ಲಿಗೆ ಒಮ್ಮೆ ದಾಖಲಾದ್ರೆ ಸರ್ಕಾರಿ ಶಾಲೆಗಳತ್ತ ಮಕ್ಕಳು ಹಾಗೂ ಪೋಷಕರು ತಿರುಗಿಯೂ ನೋಡಲ್ಲ.
ಹೀಗಾಗಿ ಹುಳದೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಗ್ರಾಮದ ಯುವಕರು, ಪೋಷಕರು ಎಲ್ಕೆಜಿ ತರಗತಿ ಆರಂಭಿಸಿದ್ದಾರೆ. ಮಕ್ಕಳು ಅಕ್ಷರ ಕಲಿಯುವುದರ ಜೊತೆಗೆ ಕೊಠಡಿಯಲ್ಲಿ ನಿದ್ರೆಗೂ ಅವಕಾಶ ಕಲ್ಪಿಸಲಾಗಿದೆ.
ಇಂಗ್ಲಿಷ್ ಕಲಿಸುವ ಹಂಬಲ: ಗ್ರಾಮದ ಶಾಲೆಯಲ್ಲಿ 1ರಿಂದ 6ನೇ ತರಗತಿವರೆಗೂ ಮಾತ್ರ ಇದ್ದು, ಈ ಗ್ರಾಮದಲ್ಲಿ ಯಾವುದೇ ಖಾಸಗಿ ಶಾಲೆಗಳು ಇಲ್ಲ. ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕೆಂಬ ಆಸಕ್ತಿಯಿಂದ ಗ್ರಾಮಸ್ಥರು ಹಾಗೂ ಯುವಕರು ಒಂದುಗೂಡಿ ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಿದ್ದಾರೆ.
ಪೋಷಕರಿಂದ ಮೆಚ್ಚುಗೆ: ಇದಕ್ಕೆ ಅನುಮತಿ ನೀಡುವಂತೆ ಶಿಕ್ಷಣ ಇಲಾಖೆಗೆ ಈ ಹಿಂದೆಯೇ ಗ್ರಾಮಸ್ಥರು ಮನವಿ ಮಾಡಿದ್ದರು. ಅದರಂತೆ, ಇಂಗ್ಲಿಷ್ ಬೋಧನೆ ಮಾಡಲು ಗ್ರಾಮಸ್ಥರೇ ಒಬ್ಬ ಶಿಕ್ಷಕಿಯನ್ನು ಗೌರವಧನದ ಮೇಲೆ ನೇಮಿಸಿದ್ದಾರೆ. ಈಗ ತರಗತಿಗಳು ಸುಸೂತ್ರವಾಗಿ ನಡೆಯುತ್ತಿದ್ದು, ಪೋಷಕರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತರಗತಿ ಪ್ರಾರಂಭಿಸಲು ಚಿಂತನೆ: ಈ ಗ್ರಾಮದ ಮಾರ್ಗದಲ್ಲಿ ಮಾಲೂರು ಮುಂತಾದ ಗ್ರಾಮಗಳಲ್ಲಿರುವ ಖಾಸಗಿ ಶಾಲೆಗಳ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಮಕ್ಕಳನ್ನು ನಮ್ಮ ಶಾಲೆಗೆ ಕಳುಹಿಸಿ ಎಂದು ಶಾಲೆಯವರು ಒತ್ತಾಯಿಸಿದ್ದರು. ಆದರೆ, ಅವರು ನಿಗದಿಪಡಿಸಿರುವ ಶಾಲಾ ಖರ್ಚುಗಳು ದುಬಾರಿಯಾಗಿದ್ದ ಕಾರಣ, ಗ್ರಾಮಸ್ಥರು ನಮ್ಮ ಗ್ರಾಮದಲ್ಲಿಯೇ ತರಗತಿ ಪ್ರಾರಂಭಿಸಲು ಚಿಂತನೆ ನಡೆಸಿ, ಈಗ ಪ್ರಗತಿ ಕಂಡಿದ್ದಾರೆ.
ಪೀಠೊಪಕರಣ: 15 ರಿಂದ 20 ಪುಟಾಣಿ ಮಕ್ಕಳು ಈಗ ಎಲ್ಕೆಜಿ ತರಗತಿಗೆ ಬರುತ್ತಿದ್ದು, ಕಲಿಯುವ ಆಸಕ್ತಿಯ ಹೆಚ್ಚಾಗಿದೆ. ಮಕ್ಕಳಿಗೆ ಶಾಲೆಯಲ್ಲಿ ಕುಳಿತು ಬರೆಯಲು ಉತ್ತಮ ಪೀಠೊಪಕರಣ, ಆಟಿಕೆಗಳನ್ನು ಗ್ರಾಮಸ್ಥರು ವ್ಯವಸ್ಥೆ ಮಾಡಿದ್ದು, ಮಕ್ಕಳು ಅದನ್ನು ಬಳಸಿಕೊಳ್ಳುತ್ತಿದ್ದಾರೆ.
ಎಲ್ಲಾ ಸರ್ಕಾರಿ ಶಾಲೆಯಲ್ಲೂ ಆರಂಭಿಸಿ: ಇದೇ ರೀತಿ ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕರು, ಪೋಷಕರು ಮುಂದೆ ಬಂದು ಪೂರ್ವಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಿದರೆ, ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂ. ಡೊನೆಷನ್ ಕಟ್ಟುವುದು ತಪ್ಪುತ್ತದೆ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಅನುಕೂಲವಾಗುತ್ತದೆ.