Advertisement

ಪ್ರಣಬ್‌ಗೆ ಅಡ್ವಾಣಿ ಶ್ಲಾಘನೆ

06:00 AM Jun 09, 2018 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕೇಂದ್ರ ಕಚೇರಿಗೆ ಮಾಜಿ ರಾಷ್ಟ್ರಪತಿ ಭೇಟಿ ನೀಡಿದ್ದು, “ಸಂಘ ಶಿಕ್ಷಾ ವರ್ಗ’ದಲ್ಲಿ ಭಾರತದ ಏಕತೆಯ ಆದರ್ಶಗಳನ್ನು ತೆರೆದಿಟ್ಟಿದ್ದು, ಸಮಕಾಲೀನ ಚರಿತ್ರೆಯಲ್ಲಿ ಮಹತ್ವದ ಘಟ್ಟ ಎಂದು ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಧುರೀಣ ಎಲ್‌.ಕೆ. ಅಡ್ವಾಣಿ ಬಣ್ಣಿಸಿದ್ದಾರೆ. 

Advertisement

ಸಮಾರಂಭದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಪ್ರಣಬ್‌ ಇಬ್ಬರ ಭಾಷಣಗಳು ಭಾರತದ ಅಖಂಡತೆ ಯನ್ನು ಪ್ರತಿನಿಧಿಸಿದವು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಾಗೂ ಸೈದ್ಧಾಂತಿಕ ಒಗ್ಗೂಡುವಿಕೆಗೆ ಈ ಇಬ್ಬರ ಭಾಷಣಗಳು ಅತ್ಯುತ್ತಮ ಉದಾಹರಣೆ ಎಂದು ಅಡ್ವಾಣಿ ಹೇಳಿದ್ದಾರೆ. 

ಆರೆಸ್ಸೆಸ್‌ ಶ್ಲಾಘನೆ: ಸಂಘ ಶಿಕ್ಷಾ ವರ್ಗದ ಸಮಾರೋಪದಲ್ಲಿ ಪ್ರಣವ್‌ ಮುಖರ್ಜಿ, ಭಾರತದ 5,000 ವರ್ಷಗಳ ವೈಭವಯುತ ಇತಿಹಾಸ, ಸಂಸ್ಕೃತಿಯನ್ನು ಮೆಲುಕು ಹಾಕಿ , ಬಹುತ್ವ, ಏಕತೆಗಳು ಹೇಗೆ ಭಾರತದ ಭದ್ರ ಬುನಾದಿ ಎಂಬುದನ್ನು ತಿಳಿಸಿ ಹೇಳಿದರು ಎಂದು ಆರ್‌ಎಸ್‌ಎಸ್‌ ಶ್ಲಾಘಿಸಿದೆ. 

ತೊಗಾಡಿಯಾ ಅಸಮಾಧಾನ: ಪ್ರಣಬ್‌ ಅವರು ತಮ್ಮ ಭಾಷಣದಲ್ಲಿ ಗಾಂಧಿ, ನೆಹರೂರವರ ರಾಷ್ಟ್ರೀಯತೆಯನ್ನು ಹೇಳಿದರೇ ಹೊರತು, ಆರ್‌ಎಸ್‌ಎಸ್‌ ಸಂಸ್ಥಾಪಕರಾದ ಕೇಶವ್‌ ಬಾಲಿರಾಮ್‌ ಹೆಡಗೇವಾರ್‌ ಹಾಗೂ ವೀರ ಸಾವರ್ಕರ್‌ರ ರಾಷ್ಟ್ರೀಯತೆ ಬಗ್ಗೆ ಮಾತನಾಡಲಿಲ್ಲ ಎಂದು ವಿಷಾದಿಸಿದ್ದಾರೆ. 

ಕಾಂಗ್ರೆಸ್ಸಿಗರ ಮೆಚ್ಚುಗೆ
ಕಾಂಗ್ರೆಸ್‌ನ ಮೂಲ ಸಿದ್ಧಾಂತವೇನೆಂಬುದನ್ನು ಆರೆಸ್ಸೆಸ್‌ಗೆ ಪ್ರಣವ್‌ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದರೆ, ಆರೆಸ್ಸೆಸ್‌ಗೆ ತಿಳಿ ಹೇಳಿದ ಮೊದಲ ಮಾಜಿ ಕಾಂಗ್ರೆಸ್ಸಿಗ ಪ್ರಣವ್‌ಮುಖರ್ಜಿ ಎಂದು ಕಾಂಗ್ರೆಸ್‌ ನಾಯಕ ಅಭಿ ಷೇಕ್‌ ಸಿಂಘ್ವಿ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ, ಮತ್ತೂಬ್ಬ ನಾಯಕ ಆನಂದ್‌ ಶರ್ಮಾ, ಪ್ರಣವ್‌ ನೀಡಿದ ಸಂದೇಶವನ್ನು ಆರ್‌ಎಸ್‌ಎಸ್‌ ಅಳವಡಿಸಿಕೊಂಡರೆ ಸಾಕು ಎಂದಿದ್ದಾರೆ.

Advertisement

ಶರ್ಮಿಷ್ಠಾ ಮುಖರ್ಜಿ ಗರಂ 
ನಾಗ್ಪುರದಲ್ಲಿ ಪ್ರಣವ್‌ ಅವರು ಆರೆಸ್ಸೆಸ್‌ನ ಟೋಪಿ ಧರಿಸಿ, ಆರೆಸ್ಸೆಸ್‌ ಮಾದರಿಯಲ್ಲೇ ನಮನ ಸಲ್ಲಿಸುತ್ತಿರುವಂತೆ ತಿರುಚಿದ ಫೋಟೋ ಟ್ವಿಟರ್‌ನಲ್ಲಿ ಹರಿದಾಡಿದ್ದು, ಈ ಫೋಟೋ ಬಗ್ಗೆ ಪ್ರಣವ್‌ ಪುತ್ರಿ ಶರ್ಮಿಷ್ಠಾ ಮುಖರ್ಜಿ ಕಿಡಿಕಾರಿದ್ದಾರೆ. “”ನೋಡಿ. ಇದೇ ಕಾರಣಕ್ಕಾಗಿಯೇ ನೀವು (ಪ್ರಣಬ್‌) ನಾಗ್ಪುರಕ್ಕೆ ಹೋಗುವುದು ಬೇಡವೆಂದು ಹೇಳಿದ್ದು” ಎಂದು ಪ್ರಣಬ್‌ಗ ಹೇಳಿದ್ದಾರೆ. ಜತೆಗೆ, ನಮ್ಮದು ಪ್ರಜಾಸತ್ತಾತ್ಮಕ, ವಾದ ಮಂಡಿಸಲು ಅವಕಾಶವುಳ್ಳ ಕುಟುಂಬವಾಗಿದ್ದು, ನನ್ನ ತಂದೆಯ ಎದುರೇ ಭಿನ್ನ ಅಭಿಪ್ರಾಯ ಮಂಡಿಸಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ. ಈ ಫೋಟೋ ಬಗ್ಗೆ ಸ್ಪಷ್ಟನೆ ನೀಡಿರುವ ಆರೆಸ್ಸೆಸ್‌, “”ಈ ನಕಲಿ ಫೋಟೋಕ್ಕೂ, ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ. ದುರುದ್ದೇಶ ಹೊಂದಿರುವ ಕೆಲ ರಾಜಕೀಯ ಶಕ್ತಿಗಳು ಇಂಥ ಫೋಟೋ ಹರಿಬಿಟ್ಟು ನಮ್ಮ ಘನತೆಗೆ ಕುಂದು ತರುವ ಪ್ರಯತ್ನ ಮಾಡಿವೆ” ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next