Advertisement

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

03:15 PM Apr 28, 2024 | Team Udayavani |

ಫೈಬ್ರೊಮಯಾಲ್ಜಿಯಾ ಒಂದು ಸಂಕೀರ್ಣ ಮತ್ತು ತಪ್ಪಾಗಿ ರೋಗಪತ್ತೆಯಾಗುವ ಆರೋಗ್ಯ ಸಮಸ್ಯೆ ಎಂಬುದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಪರಿಗಣಿತವಾಗಿದೆ. ಜನಸಾಮಾನ್ಯರಲ್ಲಿ ಫೈಬ್ರೊಮಯಾಲ್ಜಿಯಾ ಬಗ್ಗೆ ಅರಿವು ಮತ್ತು ಮಾಹಿತಿಯ ಕೊರತೆ ಇದೆ. ಈ ಅನಾರೋಗ್ಯ, ಅದರ ಲಕ್ಷಣಗಳು ಮತ್ತು ನಿರ್ವಹಣೆಯ ಕಾರ್ಯತಂತ್ರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನದಲ್ಲಿದೆ. ಫೈಬ್ರೊಮಯಾಲ್ಜಿಯಾ ಎಂಬುದು ವ್ಯಾಪಕವಾದ ಸ್ನಾಯು-ಮೂಳೆ ನೋವಿನ ಜತೆಗೆ ದಣಿವು, ನಿದ್ದೆಗೆ ಅಡಚಣೆ, ಸ್ಮರಣೆಯ ಸಮಸ್ಯೆ ಮತ್ತು ಮನೋಭಾವ ಏರುಪೇರುಗಳನ್ನು ಹೊಂದಿರುವ ದೀರ್ಘ‌ಕಾಲೀನ ನೋವಿನ ಅನಾರೋಗ್ಯವಾಗಿದೆ. ಫೈಬ್ರೊಮಯಾಲ್ಜಿಯಾ ಉಂಟಾಗಲು ನಿಖರವಾದ ಕಾರಣ ತಿಳಿದಿಲ್ಲವಾದರೂ ವಂಶವಾಹಿ, ಪಾರಿಸರಿಕ ಮತ್ತು ಮನಶ್ಶಾಸ್ತ್ರೀಯ ಅಂಶಗಳು ಸಂಯೋಜನೆಗೊಂಡು ಇದಕ್ಕೆ ಕಾರಣವಾಗುತ್ತವೆ ಎನ್ನಲಾಗುತ್ತದೆ.

Advertisement

ಯಾಕೆ ಉಂಟಾಗುತ್ತದೆ?

ಒತ್ತಡ, ವಂಶವಾಹಿ ಅಂಶಗಳು, ಶ್ರಮದಂತಹ ವಿವಿಧ ಅಂಶಗಳಿಂದಾಗಿ ಫೈಬ್ರೊಮಯಾಲ್ಜಿಯಾ ರೋಗಿಯ ಮೆದುಳಿನಲ್ಲಿ ನೋವಿನ ಗ್ರಹಿಕೆ ಪರಿವರ್ತನೆಗೊಳ್ಳುತ್ತದೆ. ಇದರಿಂದಾಗಿ ಈ ರೋಗಿಗಳಲ್ಲಿ ಒಂದು ಸಹಜ, ಸಾಮಾನ್ಯ ಸ್ಪರ್ಶದ ಅನುಭವವೂ ನೋವಿನ ಅನುಭವವಾಗಿ ಗ್ರಹಿಸಲ್ಪಡುತ್ತದೆ.

ಫೈಬ್ರೊಮಯಾಲ್ಜಿಯಾಕ್ಕೆ ಅಪಾಯ ಅಂಶಗಳು ಯಾವುವು?

  1. ವಯಸ್ಸು: ಫೈಬ್ರೊಮಯಾಲ್ಜಿಯಾ ಯಾವುದೇ ವಯಸ್ಸಿನವರನ್ನು ಬಾಧಿಸಬಹುದಾಗಿದೆ. ಆದರೆ ಇದು ಮಧ್ಯ ವಯಸ್ಕರಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತದೆ.
  2. ಈಗಾಗಲೇ ಆರ್ಥೈಟಿಸ್‌ ಇರುವುದು.
  3. ಲಿಂಗ: ಪುರುಷರಿಗಿಂತ ಮಹಿಳೆಯರು ಫೈಬ್ರೊಮಯಾಲ್ಜಿಯಾಕ್ಕೆ ತುತ್ತಾಗುವ ಸಾಧ್ಯತೆ 2 ಪಟ್ಟು ಅಧಿಕ.
  4. ಬಾಲ್ಯದಲ್ಲಿ ಅಹಿತಕರ ಅನುಭವ, ವಾಹನ ಅಪಘಾತದಂತಹ ಒತ್ತಡಯುಕ್ತ ಘಟನೆಗಳು ಅಥವಾ ಅಪಘಾತಗಳು ಹಾಗೂ ಗಾಯಕ್ಕೀಡಾದ ಬಳಿಕದ ಒತ್ತಡ ಅನಾರೋಗ್ಯ (ಪಿಟಿಎಸ್‌ಡಿ).
  5. ಪುನರಾವರ್ತಿತ ಗಾಯಗಳು: ಪದೇಪದೆ ಮೊಣಕಾಲು ಬಾಗಿಸುವಂತಹ ಸಂಧಿಯ ಮೇಲೆ ಪುನರಾವರ್ತಿತ ಒತ್ತಡದಿಂದ ಉಂಟಾದ ಗಾಯಗಳು.
  6. ಬೊಜ್ಜು

ಲಕ್ಷಣಗಳು

Advertisement

1. ದೀರ್ಘ‌ಕಾಲೀನ ನೋವು: ಫೈಬ್ರೊಮಯಾಲ್ಜಿಯಾದ ಪ್ರಧಾನ ಲಕ್ಷಣ ಎಂದರೆ ದೇಹದ ಸಂಧಿಗಳಲ್ಲಿ ಮಾತ್ರವಲ್ಲದೆ ಸ್ನಾಯುಗಳು, ಮೃದ್ವಸ್ಥಿಗಳು (ಲಿಗಮೆಂಟ್‌) ಮತ್ತು ಸ್ನಾಯುರಜ್ಜು (ಟೆಂಡನ್‌)ಗಳಲ್ಲಿ ದೇಹಪೂರ್ತಿ ವ್ಯಾಪಕ ನೋವು. 2. ದಣಿವು: ರೋಗಿಗಳು ಆಗಾಗ ಇಡೀ ರಾತ್ರಿಯ ನಿದ್ದೆಯ ಬಳಿಕವೂ ತೀವ್ರವಾದ ದಣಿವು, ಬಳಲಿಕೆಯನ್ನು ಅನುಭವಿಸುತ್ತಾರೆ. ಇದರಿಂದ ಅವರಲ್ಲಿ ಶಕ್ತಿ ಸಾಮರ್ಥ್ಯದ ಮಟ್ಟ ಕುಸಿಯುತ್ತದೆ ಮತ್ತು ಆಲಸ್ಯ ಮನೆ ಮಾಡುತ್ತದೆ.

3. ನಿದ್ದೆಗೆ ಅಡಚಣೆ: ಫೈಬ್ರೊಮಯಾಲ್ಜಿಯಾ ಹೊಂದಿರುವ ರೋಗಿಗಳು ಸಾಮಾನ್ಯವಾಗಿ ನಿದ್ದೆ ಬರದೆ ಇರುವ ಸಮಸ್ಯೆ, ರಾತ್ರಿ ಆಗಾಗ ಎಚ್ಚರವಾಗುವುದರ ಸಹಿತ ನಿದ್ದೆಗೆ ತೊಂದರೆ ಅನುಭವಿಸುತ್ತಾರೆ.

4. ಇಂದ್ರಿಯ ಗ್ರಹಣ ಶಕ್ತಿಯ ವೈಫ‌ಲ್ಯ: “ಫೈಬ್ರೊ ಫಾಗ್‌’ ಎಂದು ಇದನ್ನು ಕರೆಯಲಾಗುತ್ತಿದ್ದು, ಇದು ಏಕಾಗ್ರತೆ ಹೊಂದಲು ಅಡ್ಡಿ, ಸ್ಮರಣ ಶಕ್ತಿಯ ತೊಂದರೆ ಮತ್ತು ಇಂದ್ರಿಯ ಗ್ರಹಣ ಪ್ರಕ್ರಿಯೆಯಲ್ಲಿ ತೊಡಕಿನ ಲಕ್ಷಣಗಳನ್ನು ಹೊಂದಿರುತ್ತದೆ. 5. ಮನೋಭಾವ ಏರುಪೇರು: ಖನ್ನತೆ, ಆತಂಕ ಮತ್ತು ಒತ್ತಡಗಳು ಫೈಬ್ರೊಮಯಾಲ್ಜಿಯಾ ಜತೆಗೂಡಿರುತ್ತವೆ. ಇದರಿಂದ ಈ ಅನಾರೋಗ್ಯದ ಒಟ್ಟಾರೆ ಹೊರೆ ಇನ್ನಷ್ಟು ಹೆಚ್ಚುತ್ತದೆ.

ರೋಗಪತ್ತೆ

ಫೈಬ್ರೊಮಯಾಲ್ಜಿಯಾ ರೋಗ ನಿರ್ಣಯ ಮಾಡಲು ಯಾವುದೇ ಪ್ರಯೋಗಾಲಯ ಪರೀಕ್ಷೆಗಳಿಲ್ಲ. ರುಮಟಾಲಜಿಸ್ಟ್‌ ವಿವರವಾದ ರೋಗಿ ಮಾಹಿತಿ ಸಂಗ್ರಹ ಮತ್ತು ವೈದ್ಯಕೀಯ ತಪಾಸಣೆಗಳ ಮೂಲಕ ರೋಗ ನಿರ್ಣಯ ಮಾಡುವರು. ರೋಗಿಯ ದೇಹದಲ್ಲಿ ಮೃದುಬಿಂದುಗಳ ಇರುವಿಕೆಯನ್ನು ಪರೀಕ್ಷಿಸಲಾಗುತ್ತದೆ, ಇದು ರೋಗ ನಿರ್ಣಯಕ್ಕೆ ಪೂರಕವಾಗಿರುತ್ತದೆ.

ಚಿಕಿತ್ಸೆ ಹೇಗೆ?

ಫೈಬ್ರೊಮಯಾಲ್ಜಿಯಾಕ್ಕೆ ಚಿಕಿತ್ಸೆಯನ್ನು ಸಾಮಾನ್ಯವಾಗಿ ರುಮಟಾಲಜಿಸ್ಟ್‌ಗಳು ಮತ್ತು ಪಿಎಂಆರ್‌ ತಜ್ಞರು (ದೈಹಿಕ ಔಷಧೋಪಚಾರ ಮತ್ತು ಪುನರ್ವಸತಿ) ಸಂಯೋಜಿತವಾಗಿ ಒದಗಿಸುತ್ತಾರೆ. ಫೈಬ್ರೊಮಯಾಲ್ಜಿಯಾದ ಲಕ್ಷಣಗಳನ್ನು ನಿಭಾಯಿಸುವ ಮೂಲಕ ರೋಗಿಯ ಜೀವನ ಗುಣಮಟ್ಟವನ್ನು ಉತ್ತಮಪಡಿಸಲು ಅನೇಕ ಚಿಕಿತ್ಸಾ ವಿಧಾನಗಳು ಸಹಾಯ ಮಾಡುತ್ತವೆ:

  1. ಔಷಧೋಪಚಾರ: ನೋವನ್ನು ಕಡಿಮೆ ಮಾಡಲು, ನಿದ್ದೆಯನ್ನು ಉತ್ತಮಪಡಿಸಲು ಮತ್ತು ಮನೋಭಾವ ಏರಿಳಿತಗಳನ್ನು ನಿಭಾಯಿಸಲು ಔಷಧಗಳನ್ನು ಶಿಫಾರಸು ಮಾಡಬಹುದಾಗಿದೆ.
  2. ಜೀವನ ವಿಧಾನ ಬದಲಾವಣೆಗಳು: ನಿಯಮಿತವಾದ ವ್ಯಾಯಾಮ, ಒತ್ತಡ ನಿರ್ವಹಣೆಯ ತಂತ್ರಗಳು (ಯೋಗ ಮತ್ತು ಧ್ಯಾನ ಇತ್ಯಾದಿ) ಮತ್ತು ಆರೋಗ್ಯಪೂರ್ಣ ಆಹಾರ ಕ್ರಮದ ಪಾಲನೆಗಳು ಫೈಬ್ರೊಮಯಾಲ್ಜಿಯಾ ಲಕ್ಷಣಗಳನ್ನು ನಿಭಾಯಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
  3. ಪಿಎಂಆರ್‌ ನಿರ್ದಿಷ್ಟ ವಿಧಾನಗಳು: ನೀಡ್ಲಿಂಗ್‌, ಅಲ್ಟ್ರಾಸೌಂಡ್‌ ಥೆರಪಿ, ಟಿಇಎನ್‌ಎಸ್‌ ಥೆರಪಿಗಳು ಈ ರೋಗಿಗಳಿಗೆ ಮನೆಯಲ್ಲಿಯೇ ಸಾಕಷ್ಟು ನೋವು ನಿವಾರಣೆಗೆ ಸಹಾಯ ಮಾಡುತ್ತವೆ.
  4.  ರೋಗಿ ಶಿಕ್ಷಣ ಮತ್ತು ಬೆಂಬಲ: ಫೈಬ್ರೊಮಯಾಲ್ಜಿಯಾ ಅನಾರೋಗ್ಯದ ಬಗ್ಗೆ ಅರಿವು, ಮಾಹಿತಿ ಒದಗಿಸುವುದು ಹಾಗೂ ಬೆಂಬಲ ಸಮೂಹಗಳ ಜತೆಗೆ ಸಂಪರ್ಕ ಒದಗಿಸುವ ಮೂಲಕ ಫೈಬ್ರೊಮಯಾಲ್ಜಿಯಾ ರೋಗಿಗಳನ್ನು ಸಶಕ್ತೀಕರಣಗೊಳಿಸಬಹುದಾಗಿದ್ದು, ಇದರಿಂದ ಅವರಿಗೆ ಲಕ್ಷಣಗಳನ್ನು ಹೆಚ್ಚು ಚೆನ್ನಾಗಿ ನಿಭಾಯಿಸುವುದು, ಫೈಬ್ರೊಮಯಾಲ್ಜಿಯಾ ರೋಗ ಸ್ಥಿತಿಯ ಜತೆಗಿನ ಸವಾಲುಗಳನ್ನು ಎದುರಿಸುವುದಕ್ಕೆ ಸಹಾಯವಾಗುತ್ತದೆ.

ಸಾರಾಂಶ

ಫೈಬ್ರೊಮಯಾಲ್ಜಿಯಾ ರೋಗಸ್ಥಿತಿಯು ಇದರಿಂದ ಬಾಧಿತರಾದವರಿಗೆ ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ. ಇದರಿಂದ ಅವರ ದೈನಿಕ ಜೀವನದ ವಿವಿಧ ಆಯಾಮಗಳು ತೊಂದರೆಗೀಡಾಗುತ್ತವೆ. ಆದರೆ ಸೂಕ್ತ ನೆರವು, ಬೆಂಬಲ, ಅರ್ಥ ಮಾಡಿಕೊಳ್ಳುವಿಕೆ ಮತ್ತು ನಿರ್ವ ಹಣ ಕಾರ್ಯತಂತ್ರಗಳ ಮೂಲಕ ಫೈಬ್ರೊಮ ಯಾಲ್ಜಿಯಾ ಹೊಂದಿರುವವರು ಸಂತೃಪ್ತಿಯ ಉತ್ತಮ ಜೀವನವನ್ನು ಮುನ್ನಡೆಸಬಹುದಾಗಿದೆ.

-ಡಾ| ಪ್ರತ್ಯೂಷಾ ಮಣಿಕುಪ್ಪಮ್‌

ಅಸಿಸ್ಟೆಂಟ್‌ ಪ್ರೊಫೆಸರ್‌

-ಡಾ| ಶಿವರಾಜ್‌ ಪಡಿಯಾರ್‌

ಅಸೋಸಿಯೇಟ್‌ ಪ್ರೊಫೆಸರ್‌

ರುಮಟಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ,

ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ,ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next