Advertisement

ಜೀವ ಜಲ ಪೋಲು: ಎಚ್ಚೆತ್ತಿಕೊಳ್ಳದ ನಗರಸಭೆ

09:13 PM Feb 26, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಸ್ಥಳೀಯ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲಾ ಕೇಂದ್ರದಲ್ಲಿ ಜೀವ ಜಲದ ಸಂರಕ್ಷಣೆ ಇಲ್ಲದಂತಾಗಿದ್ದು, ಪದೇ ಪದೆ ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದು ಅಪಾರವಾದ ಕುಡಿವ ನೀರು ಚರಂಡಿ ಪಾಲಾಗುತ್ತಿದೆ.

Advertisement

ಜಿಲ್ಲಾ ಕೇಂದ್ರದಲ್ಲಿ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಕುಡಿಯುವ ಸಮಸ್ಯೆ ಕಾಣಿಸಿಕೊಂಡಿದ್ದು, ಇಡೀ ನಗರಕ್ಕೆ ಜಕ್ಕಲಮಡಗು ಜಲಾಶಯ ಕುಡಿವ ನೀರಿನ ಅಶ್ರಯವಾಗಿದ್ದು ಸದ್ಯ ಜಲಾಶಯದಿಂದ 10, 15 ದಿನಕ್ಕೊಮ್ಮೆ ವಾರ್ಡ್‌ಗಳಿಗೆ ಬಿಡಲಾಗುತ್ತಿದೆ. ಸದ್ಯದ ಕುಡಿಯುವ ನೀರಿನ ಸಂಕಷ್ಟ ಅರಿತಿರುವ ಸಾರ್ವಜನಿಕರು ಬರುವ ಮಾರ್ಚ್‌, ಏಪ್ರಿಲ್‌ ತಿಂಗಳ ಬೇಸಿಗೆಯಲ್ಲಿ ಕಾಣಸಿಕೊಳ್ಳಲಿರುವ ನೀರಿನ ಸಂಕಷ್ಟವನ್ನು ಈಗಲೇ ಊಹಿಸಿಕೊಂಡು ಜನ ಆತಂಕ ಪಡುತ್ತಿದ್ದಾರೆ.

ಪದೇ ಪದೆ ಚರಂಡಿಗೆ ಹರಿಯುವ ನೀರು: ಜಿಲ್ಲೆಯಲ್ಲಿ ಬೇಸಿಗೆ ಬಂತು ಅಂದರೆ ಹನಿ ಹನಿ ನೀರಿಗೂ ಪರದಾಟ ತಪ್ಪಿಲ್ಲ. ಮೊದಲೇ ಜಿಲ್ಲೆಯಲ್ಲಿ ಬರದಿಂದ ಮಳೆ ಬೆಳೆ ಆಗದೇ ನೀರಿಗೆ ತೀವ್ರ ಸಮಸ್ಯೆ ಇದೆ. ಕೊಳವೆ ಬಾವಿಗಳು ಸಹ ಅಂತರ್ಜಲ ಕುಸಿತದಿಂದ ಬೇಸಿಗೆಯಲ್ಲಿ ಬತ್ತಿ ಹೋಗುವುದು ಸರ್ವೆ ಸಾಮಾನ್ಯ. ಆದರೆ ಎಲ್ಲವನ್ನು ಅರಿತಿರುವ ನಗರಸಭೆ ಮಾತ್ರ ನಗರದ ಮುಖ್ಯ ರಸ್ತೆಗಳಲ್ಲಿ ಪದೇ ಪದೆ ಪೈಪ್‌ಗ್ಳು ಒಡೆದು ನೀರು ಚರಂಡಿಗಳಿಗೆ ಹರಿಯುತ್ತಿರುವ ದೃಶ್ಯಗಳು ಸಾಮಾನ್ಯ ಸಂಗತಿಗಳಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಸ್ಥಳೀಯ ನಗರಸಭೆಗೆ ಜೀವ ಜಲ ಸದ್ಬಳಕೆ ಮೇಲಿನ ಆಸಕ್ತಿಯನ್ನು ಎತ್ತಿ ತೋರಿಸುತ್ತಿದೆ. ಮೊದಲೇ ಒಳ ಚರಂಡಿ ಅವ್ಯವಸ್ಥೆಯಿಂದ ನಗರದಲ್ಲಿ ಕೊಳಚೆ ನೀರಿನ ದರ್ಶನ ಆಗುತ್ತಲೇ ಇರುತ್ತದೆ. ಆದರೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕಾದ ನಗರಸಭೆ ಕೆಲವು ಕಡೆಗಳಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೋರಿರುವ ನಿರ್ಲಕ್ಷ್ಯದಿಂದ ರಸ್ತೆ ಬದಿಗಳಲ್ಲಿ ಹಾದು ಹೋಗಿರುವ ಕುಡಿಯುವ ನೀರು ಸರಬರಾಜು ಪೈಪ್‌ಗ್ಳು ಒಡೆದು ನೀರು ರಸ್ತೆಗಳಿಗೆ ಹರಿಯುವಂತಾಗಿದೆ.

ರಸ್ತೆ, ಚರಂಡಿ ಕಾಮಗಾರಿ ಕಿರಿಕಿರಿ: ನಗರದಲ್ಲಿ ಇತ್ತೀಚೆಗೆ ನಗರೋತ್ಥಾನ ಯೋಜನೆಯಡಿ ಅನೇಕ ವಾರ್ಡ್‌ಗಳಲ್ಲಿ ಚರಂಡಿ, ಸಿ.ಸಿ. ರಸ್ತೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ನಡೆಯುವ ಸ್ಥಳದಲ್ಲಿ ನಗರಸಭೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸದ ಪರಿಣಾಮ ಜೀವ ಜಲ ಪೋಲಾಗುವಂತಾಗಿದೆ. ಕೆಲವು ವಾರ್ಡ್‌ಗಳಲ್ಲಿ ಚರಂಡಿಗಳ ಪಕ್ಕದಲ್ಲಿಯೆ ಪೈಪ್‌ಲೈನ್‌ ಒಡೆದು ಅಪಾರ ಪ್ರಮಾಣದಲ್ಲಿ ಕುಡಿಯುವ ನೀರು ಚರಂಡಿಗಳಿಗೆ ಸೇರುತ್ತಿದ್ದರೂ ನಗರಸಭೆ ಅಧಿಕಾರಿಗಳಿಗೆ ತಿಳಿಯುತ್ತಿಲ್ಲ. ಹೀಗಾಗಿ ನಗರದಲ್ಲಿ ಸಂರಕ್ಷಣೆ ಗೊಳ್ಳಬೇಕಿದ್ದ ಜೀವ ಜಲಕ್ಕೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಕ್ಷಣೆ ಇಲ್ಲದಂತಾಗಿ ನಗರ ನಿವಾಸಿಗಳ ದಾಹ ತೀರಿಸಬೇಕಿದ್ದ ನೀರು ಚರಂಡಿಗಳಿಗೆ ಹರಿಯುವಂತಾಗಿದೆ.

Advertisement

ಡೀಸಿ, ಎಸ್ಪಿ ನಿವಾಸದ ರಸ್ತೆಯಲ್ಲಿ ನೀರು ಪೋಲು: ನಗರದ ವಾಪಸಂದ್ರದ ಮುಖ್ಯ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ವಾಸ ಇರುವ ಸರ್ಕಾರಿ ಅತಿಥಿ ಗೃಹಗಳು ಇರುವ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ಅಪಾರ ಪ್ರಮಾಣದಲ್ಲಿ ನೀರು ಚರಂಡಿ ಸೇರಿದಂತೆ ರಸ್ತೆಗೆ ಹರಿಯುತ್ತಿದ್ದ ದೃಶ್ಯಗಳು ಕಂಡು ಬಂದವು. ಇತ್ತೀಚೆಗೆ ರಸ್ತೆ ಬದಿಯಲ್ಲಿ ಖಾಸಗಿ ಕಂಪನಿಯೊಂದು ಕೇಬಲ್‌ ಅಳವಡಿಕೆಗೆ ಕಾಲುವೆ ಆಗೆದಿದ್ದು, ಈ ವೇಳೆ ಕುಡಿಯುವ ನೀರಿನ ಪೈಪ್‌ ತುಂಡಾಗಿ ಅಪಾರ ಪ್ರಮಾಣದ ಜೀವ ಜಲ ಚರಂಡಿ ಸೇರಿತು.

ಆಯುಕ್ತರಿಗೆ ನೀರು ಪೋಲಾಗುವುದು ಸಾಮಾನ್ಯವಂತೆ!: ಚಿಕ್ಕಬಳ್ಳಾಪುರ ನಗರದಲ್ಲಿ ಅಮೂಲ್ಯವಾದ ಕುಡಿಯುವ ನೀರು ವಿವಿಧ ಕಡೆಗಳಲ್ಲಿ ಪೈಪ್‌ಲೈನ್‌ ಒಡೆದು ನೀರು ಪೋಲಾಗುವ ಬಗ್ಗೆ ಸ್ಥಳೀಯ ನಗರಸಭೆ ಆಯುಕ್ತ ಡಿ.ಲೋಹಿತ್‌ ಕುಮಾರ್‌ರನ್ನು ಪ್ರಶ್ನಿಸಿದರೆ, ನಗರದಲ್ಲಿ ವಾಹನ ಸಂಚಾರ ದಟ್ಟಣೆ ಇರುತ್ತದೆ. ಕೆಲವರಿಗೆ ಪೈಪ್‌ಲೈನ್‌ ಎಲ್ಲಿ ಹೋಗಿರುತ್ತದೆ ಅಂತ ಗೊತ್ತಿರುವುದಿಲ್ಲ. ಆದ್ದರಿಂದ ಪೈಪ್‌ ಒಡೆದು ನೀರು ಲೀಕ್‌ ಆಗುವುದು ಸರ್ವೆ ಸಾಮಾನ್ಯ. ಅದಕ್ಕಾಗಿಯೇ ನಗರಸಭೆಯಲ್ಲಿ ವಾಟರ್‌ವೆುನ್‌ಗಳು ಇದ್ದಾರೆ ರಿಪೇರಿ ಮಾಡುತ್ತಾರೆ ಎಂದರು.

ಬೇಸಿಗೆ ಆರಂಭಗೊಳ್ಳುವುದರಿಂದ ನಗರಸಭೆ ಅಧಿಕಾರಿಗಳು ಪೈಪ್‌ಲೈನ್‌ಗಳು ಒಡೆದು ನೀರು ಪೋಲಾಗುವುದನ್ನು ತಡೆಯಬೇಕು. ಇಲ್ಲದೇ ಹೋದರೆ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ತುಂಬ ಕಷ್ಟವಾಗಲಿದೆ. ನಗರಸಭೆ ಅಧಿಕಾರಿಗಳು ಕುಡಿಯುವ ನೀರಿನ ಸರಬರಾಜು ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ನೀರು ಸಂರಕ್ಷಣೆಗೆ ಒತ್ತು ಕೊಡಬೇಕು.
-ಸುಬ್ರಮಣಿ, ಪ್ರಶಾಂತ ನಗರದ ನಿವಾಸಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next