Advertisement

ರಸ್ತೆ ಬದಿಯಲ್ಲೇ ಗುಡಿಸಲು ಕಟ್ಟಿ ಜೀವನ!

11:42 AM Mar 19, 2022 | Team Udayavani |

ಚಿಕ್ಕಮಗಳೂರು: ಗುಡಿಸಲು ಮುಕ್ತ ಮಾಡಬೇಕೆನ್ನುವುದು ಸರ್ಕಾರದ ಆಶಯ. ಆದರೆ, ಇಲ್ಲೊಂದು ಕುಟುಂಬ ಸೂರಿಗಾಗಿ ಸರ್ಕಾರಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿ ದಿಕ್ಕು ಕಾಣದೇ ರಸ್ತೆ ಜಾಗದಲ್ಲೇ ಗುಡಿಸಲು ಕಟ್ಟಿಕೊಂಡು ಬದುಕಿನ ಬಂಡಿ ಸಾಗಿಸುತ್ತಿರುವ ಕಡು ಬಡತನದ ಕೂಲಿ ಕಾರ್ಮಿಕ ಕುಟುಂಬದ ಕರುಣಾಜನಕ ಕತೆ…. ಇದು ಚಿಕ್ಕಮಗಳೂರು ಜಿಲ್ಲಾಕೇಂದ್ರದಿಂದ 30ಕಿ. ಮೀ.ದೂರದಲ್ಲಿರುವ ಬೆಳವಾಡಿ ಗ್ರಾಮದಲ್ಲಿರುವ ಅಣ್ಣಯ್ಯ ಮತ್ತು ಕಾಂತಮಣಿ ಬಡ ಕುಟುಂಬದ ದಾರುಣ ಸ್ಥಿತಿ ಇದು.

Advertisement

ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗ ಬುದ್ಧಿಮಾಂಧ್ಯ, ಮಗಳು ವಿಕಲಚೇತನರಾಗಿದ್ದು ವಿವಾಹವಾಗಿದೆ. ಅಣ್ಣಯ್ಯ ಅವರಿಗೆ ಪಾರ್ಶ್ವವಾಯು ಪೀಡಿತರಾಗಿ 14 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಪತ್ನಿ ಕಾಂತಮಣಿ ಕೂಲಿ ಕೆಲಸ ಮಾಡಿ ಕುಟುಂಬವನ್ನು ತೂಗಿಸುತ್ತಿದ್ದಾರೆ. ಕಾಂತಮಣಿ ಕೂಲಿಗೆ ಹೋದಾಗ ನೆರೆಹೊರೆ ಮನೆಯವರು ಅಣ್ಣಯ್ಯ ಅವರಿಗೆ ನೀರು, ಒಂದಿಷ್ಟು ಊಟದ ಸಹಾಯಹಸ್ತವನ್ನು ಚಾಚುತ್ತಿದ್ದಾರೆ. ಬೆಳವಾಡಿಯಲ್ಲೇ ಹುಟ್ಟಿ ಬೆಳೆದ ಇವರು ಸೂರಿನಿಂದ ವಂಚಿತರಾಗಿದ್ದಾರೆ. ಎರಡು ದಶಕಗಳಿಂದ ಗ್ರಾಪಂ ಸೇರಿದಂತೆ ಜಿಲ್ಲಾ ಕೇಂದ್ರದ ಬಹುತೇಕ ಕಚೇರಿಗಳಿಗೆ ಸೂರಿಗಾಗಿ ಅರ್ಜಿ ಸಲ್ಲಿಸಿ ಅಲೆದು ಅಲೆದು ಬೇಸತ್ತು ಹೋಗಿದ್ದಾರೆ.

ಅಣ್ಣಯ್ಯ ಅವರಿಗೆ ಈ ಹಿಂದೆ ಸೂರು ಇರಲಿಲ್ಲವೇ ಎಂದರೆ ಇತ್ತು. ಆದರೆ, ಆ ಸೂರಿಗೆ ದೇವಾಲಯ ಕಂಟಕವಾಯ್ತು. ಹಿಂದೆ ಇವರು ವಾಸವಿದ್ದ ಮನೆಯ ಸಮೀಪದಲ್ಲಿ ಹೊಯ್ಸಳರ ಕಾಲದ ವೀರನಾರಾಯಣಸ್ವಾಮಿ ದೇವಸ್ಥಾನವಿದ್ದು, ಜಗತ್ ಪ್ರಸಿದ್ಧಿ ಪಡೆದಿದೆ. ಶೃಂಗೇರಿ ಶಾರದಾ ಮಠದ ಅಧಿಧೀನದಲ್ಲಿರುವ ಈ ದೇವಾಲಯ ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ.

ದೇವಾಲಯದ ನೂರು ಮೀಟರ್‌ ವ್ಯಾಪ್ತಿಯೊಳಗಿರುವ ಯಾವುದೇ ಮನೆಗಳ ಮರು ನಿರ್ಮಾಣ ಅಥವಾ ಹೊಸದಾಗಿ ನಿರ್ಮಾಣ ಮಾಡಲು ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರಿಂದ ಹಳೆಯದಾಗಿದ್ದ ಅಣ್ಣಯ್ಯ ಅವರ ಮನೆ ದೇವಾಲಯ ಸಮೀಪವೇ ಇತ್ತು. ದುರಸ್ತಿಗೆ ಅವಕಾಶ ಇಲ್ಲದ ಕಾರಣದಿಂದ ಮಳೆ- ಗಾಳಿಗೆ ಮನೆ ನೆಲ ಕಚ್ಚಿ ಕುಂಟುಬ ಬೀದಿಗೆ ಬಿದ್ದಿದೆ. ಅಣ್ಣಯ್ಯ ಆರೋಗ್ಯವಂತರಾಗಿದ್ದಾಗ ಎಲ್ಲರಂತೆ ದುಡಿದು ಚೆನ್ನಾಗಿಯೇ ಬದುಕುತ್ತಿದ್ದರು. ಮನೆ ನೆಲಸಮಗೊಂಡ ನಂತರ ಸೂರಿಲ್ಲದೆ ಗ್ರಾಪಂ ಹಿಂಭಾಗದಲ್ಲಿ ರಸ್ತೆಗೆ ಮೀಸಲಿಟ್ಟಿರುವ ಜಾಗದಲ್ಲಿ ತೆಂಗಿನ ಸೋಗೆ ಗುಡಿಸಲು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ.

Advertisement

ಗುಡಿಸಲಿಗೆ ವಿದ್ಯುತ್‌ ದೀಪವಿಲ್ಲದೇ ಮೂರು ದಶಕಗಳಿಂದ ಮೊಂಬತ್ತಿಯೇ ಈ ಗುಡಿಸಲಿಗೆ ಬೆಳಕಾಗಿದೆ. ಮನೆಯ ಯಜಮಾನ ಅಣ್ಣಯ್ಯ ಹಾಸಿಗೆ ಹಿಡಿದ ಮೇಲೆ ಪತ್ನಿ ಕಾಂತಮಣಿ ಕೂಲಿ ಮಾಡಿ ಅನಾರೋಗ್ಯಪೀಡಿತ ಪತಿ, ಬುದ್ಧಿಮಾಂದ್ಯ ಮಗನನ್ನು ಆರೈಕೆ ಮಾಡುತ್ತಾ ಕುಟುಂಬ ನಿರ್ವಹಿಸುತ್ತಿದ್ದಾರೆ. ಕೂತಲ್ಲಿಯೇ ಕೂತಿರುವ, ಮಲಗಿದಲ್ಲಿಯೇ ಮಲಗಿರುವ ಅಣ್ಣಯ್ಯ ಅವರು ಹಿಂದೆ ಮುಂದೆ ಚಲಿಸುವಾಗ ತುಂಬಿದ ಚೀಲ ಉರುಳುವಂತೆ ಉರುಳಿಕೊಂಡು ಹೋಗುತ್ತಾರೆ. ಈ ದೃಶ್ಯ ಕರುಳು ಕಿತ್ತು ಬರುವಂತಿದ್ದು, ಅಣ್ಣಯ್ಯನಿಗೆ ಬರುವ ವಿಕಲಚೇತನ ವೇತನ ಔಷಧ ಮಾತ್ರೆಗೂ ಸಾಕಾಗದೆ ಪರಿತಪಿಸುವಂತಾಗಿದೆ.

ಸದ್ಯ ಗುಡಿಸಲು ಇರುವ ಜಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭವಾದರೆ, ಮತ್ತೆ ಜಾಗ ಹುಡುಕಬೇಕು. ಮಳೆ ಬಂದರೆ ಗುಡಿಸಲು ಸೋರುತ್ತದೆ. ಪ್ರಾಚ್ಯವಸ್ತು ಇಲಾಖೆ, ಗ್ರಾಪಂ, ಜಿಲ್ಲಾಡಳಿತ ಸಂಘ- ಸಂಸ್ಥೆಗಳು ಈವರೆಗೂ ಇವರ ನೆರವಿಗೆ ಬಂದಿಲ್ಲ, ಗ್ರಾಪಂ ಕೇಳಿದರೆ ನಿವೇಶನ ಕೊಡಲು ಜಮೀನು ಇಲ್ಲ ಎಂದು ಸಬೂಬು ಹೇಳುತ್ತಾರೆ. ಇನ್ನಾದರೂ ಈ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮುಂದಾಗಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next