Advertisement

ಡೇರೆ ಬಿಟ್ಟರೆ ಬೇರೇನೂ ಇಲ್ಲ !

10:06 PM Apr 08, 2019 | mahesh |

ಅಜ್ಜಾವರ: ದೇಶದ ಅಭಿವೃದ್ಧಿಯನ್ನು ಗ್ರಾಮಗಳ ಅಭಿವೃದ್ಧಿಯೊಂದಿಗೆ ಹೋಲಿಸಲಾಗುತ್ತದೆ. ಮೂಲ ಸೌಕರ್ಯ ಪ್ರತಿಯೊಬ್ಬ ಪ್ರಜೆಯ ಹಕ್ಕು. ಅಜ್ಜಾವರ ಮಾವಿನಪಳ್ಳದ ಕುಟುಂಬವೊಂದು ಅರ್ಹವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ.

Advertisement

ಅಜ್ಜಾವರ ಗ್ರಾಮ ವ್ಯಾಪ್ತಿಯ ಪೇರಾಲು ಮಾವಿನಪಳ್ಳ ಪ್ರದೇಶದ ರಸ್ತೆ ಬದಿಯಲ್ಲಿ ಟೆಂಟ್‌ (ಡೇರೆ) ಹಾಕಿಕೊಂಡು ವಾಸಿಸುತ್ತಿರುವ ಕುಟುಂಬವೊಂದನ್ನು ಕಾಣಬಹುದು. ವಾಸಿಸಲು ಸ್ವಂತ ಮನೆಯಿಲ್ಲದೆ 16 ವರ್ಷಗಳಿಂದ ಅದೇ ಡೇರೆಯಡಿ ಈ ಕುಟುಂಬ ಜೀವನ ನಡೆಸುತ್ತಿದೆ.
ವ್ಯವಸ್ಥಿತ ಸೌಕರ್ಯವಿಲ್ಲದೆ ಮಳೆ, ಚಳಿ, ಬಿಸಿಲಲ್ಲೂ ಈ ಕುಟುಂಬಕ್ಕೆ ಟಾರ್ಪಾಲು ಹಾಕಿದ ಹತ್ತಡಿ ಜಾಗವೇ ಆಸರೆ. ಕುಟುಂಬದ ಯಜಮಾನ ರಾಮಣ್ಣ ಕೂಲಿ ಕೆಲಸ ಮಾಡುತ್ತಾರೆ. ಪತ್ನಿ ಲಲಿತಾ ಗೃಹಿಣಿ. ಮಗಳು ಮಾಲಿನಿ 9ನೇ ತರಗತಿ ಓದುತ್ತಿದ್ದಾಳೆ.

ನಿವೇಶನ ಅರ್ಜಿಗೆ ಸ್ಪಂದನೆಯಿಲ್ಲ
ಸ್ವಂತ ಮನೆ ಇಲ್ಲದವರಿಗೆ ವಸತಿ ಕಲ್ಪಿಸುವ ಹಲವು ಯೋಜನೆಗಳಿದ್ದರೂ ಈ ದಂಪತಿಗೆ ಯಾವುದೇ ಸೌಲಭ್ಯ ಲಭಿಸಿಲ್ಲ. ಬಸವ ವಸತಿ ಯೋಜನೆ, ಡಾ| ಅಂಬೇಡ್ಕರ್‌ ವಸತಿ ಯೋಜನೆ ಮುಂತಾದವುಗಳಿದ್ದರೂ ನಿವೇಶನ ಹಾಗೂ ಮನೆ ಇನ್ನೂ ಮರೀಚಿಕೆಯಾಗಿವೆ. 16 ವರ್ಷಗಳಿಂದ ಈ ಡೇರೆಯಲ್ಲೇ ವಾಸಿಸುತ್ತಿದ್ದೇವೆ. ನಿವೇಶನಕ್ಕಾಗಿ ಪ್ರತಿವರ್ಷ ಗ್ರಾ.ಪಂ.ಗೆ ಅರ್ಜಿ ಕೊಡುತ್ತಿದ್ದೇವೆ. ಗ್ರಾಮ ಸಭೆಯಲ್ಲೂ ಪ್ರಸ್ತಾವಿಸಲಾಗಿದೆ. ಆದರೆ ಯಾವ ಪ್ರಯೋಜನವೂ ಆಗಲಿಲ್ಲ ಎಂದು ಹೇಳುತ್ತಾರೆ ರಾಮಣ್ಣ ದಂಪತಿ.

ಮನೆ ಹೇಗೂ ಇಲ್ಲ. ಡೇರೆಯೊಳಗೆ ವಿದ್ಯುತ್‌ ಬೆಳಕೂ ಇಲ್ಲದೆ ಕತ್ತಲೆಯಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಪಡಿತರ ಸೀಮೆ ಎಣ್ಣೆ ಸಿಗದೆ, ಡೀಸೆಲ್‌ನಿಂದ ದೀಪ ಉರಿಸುತ್ತಿದ್ದಾರೆ. ಕುಟುಂಬದಲ್ಲಿ ರಾಮಣ್ಣ ಒಬ್ಬರೇ ದುಡಿಯುತ್ತಿರುವ ಕಾರಣ ಎಲ್ಲದರ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಮಗಳು ಶಾಲೆಗೆ ಹೋಗುತ್ತಾಳೆ. ಆದರೆ, ದೀಪದ ಬೆಳಕು, ಇತರ ಸೌಲಭ್ಯಗಳಿಲ್ಲದೆ ಅವಳಿಗೆ ಓದಲು ಕಷ್ಟವಾಗುತ್ತಿದೆ ಎಂದು ಲಲಿತಾ ಅಳಲು ತೋಡಿಕೊಂಡರು.

ಚೀಟಿಯಿದ್ದರೂ ಪಡಿತರವಿಲ್ಲ!
ರಾಮಣ್ಣ ಅವರ ಪತ್ನಿ ಲಲಿತಾ ಅವರ ಹೆಸರಿನಲ್ಲಿ ಪಡಿತರ ಚೀಟಿ ಇದೆ. ಪತಿ ರಾಮಣ್ಣ ಹಾಗೂ ಪುತ್ರಿ ಮಾಲಿನಿಯ ಹೆಸರೂ ಇದೆ. ಆದರೆ, ನ್ಯಾಯಬೆಲೆ ಅಂಗಡಿಯಿಂದ ರೇಶನ್‌ ಸಿಗದೆ ಆರು ತಿಂಗಳೇ ಕಳೆದಿವೆ. ವಿಚಾರಿಸಿದರೆ, “ನಿಮ್ಮ ಕಾರ್ಡಿಗೆ ರೇಶನ್‌ ಇಲ್ಲ’ ಎಂದು ಹೇಳುತ್ತಾರೆ. ಕಾರಣ ಏನು ಅಂತ ಗೊತ್ತಾಗುತ್ತಿಲ್ಲ, ಮನೆಗೆ ಬೇಕಾದ ಅಕ್ಕಿ ಹಾಗೂ ಇತರ ಸಾಮಗ್ರಿಗಳನ್ನು ಹಣ ಕೊಟ್ಟು ಖರೀದಿಸಬೇಕಾಗಿದೆ. ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳುತ್ತಾರೆ ರಾಮಣ್ಣ ದಂಪತಿ.

Advertisement

ಈ ಕುಟುಂಬಕ್ಕೆ ಮೂಲಸೌಕರ್ಯ ಒದಗಿಸಿ, ಶಾಶ್ವತ ಸೂರು ಕಲ್ಪಿಸಲು ಚುನಾವಣೆಯ ಗಡಿಬಿಡಿಯಲ್ಲಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗುತ್ತಾರೋ ಎಂಬ ಪ್ರಶ್ನೆ ಗ್ರಾಮಸ್ಥರದು.

ನಿವೇಶನ ವ್ಯವಸ್ಥೆ
ರಾಮಣ್ಣ ಕುಟುಂಬಕ್ಕೆ ಬೇಲ್ಯದಲ್ಲಿ ನಿವೇಶನ ವ್ಯವಸ್ಥೆ ಮಾಡಲಾಗಿದೆ. ಸದ್ಯದಲ್ಲೇ ವಸತಿಯನ್ನು ಮಾಡಿ ಕೊಡಲಾಗುವುದು. ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸದ ಕಾರಣ ರೇಶನ್‌ ರದ್ದಾಗಿರಬಹುದು. ಚುನಾವಣೆ ಮುಗಿದ ಕೂಡಲೇ ಇದರ ಬಗ್ಗೆ ಗಮನ ಹರಿಸಲಾಗುವುದು.
ಜಯಮಾಲಾ, ಪಿಡಿಒ ಅಜ್ಜಾವರ ಗ್ರಾ.ಪಂ.

ಮನೆ, ರೇಶನ್‌ ಸಿಗಲಿ
16 ವರ್ಷಗಳಿಂದ ನಿವೇಶನ ಕ್ಕಾಗಿ ಬೇಡಿಕೆಯಿಟ್ಟಿದ್ದೇವೆ. ನಮಗೆ ಆಶ್ವಾಸನೆ ಬೇಡ. ಆದಷ್ಟು ಬೇಗ ವಾಸಿಸಲು ಒಂದು ಮನೆ ಮತ್ತು ರೇಶನ್‌ ಸಿಗವಂತಾಗಬೇಕು.
ರಾಮಣ್ಣ ಸೌಲಭ್ಯ ವಂಚಿತರು

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next