ಹಾಸನ: ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದ ಜಾನುವಾರುಗಳ ಎಳೆಗರುಗಳನ್ನು ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.
ಹಾಸನದಲ್ಲಿ ಮಂಗಳವಾರ ನಡೆಯದ ಸಂತೆಯ ಸಮೀಪದ ಸಂತೇಪೇಟೆ ವೃತ್ತದ ಬಳಿ ಹತ್ತಾರು ಕರುಗಳು ಅನಾಥವಾಗಿ ಪತ್ತೆಯಾದವು. ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಕಾರ್ಯಕರ್ತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರ ರಕ್ಷಣೆಯಲ್ಲಿ ಕರುಗಳನ್ನು ಗೋ ಶಾಲೆಗೆ ಸಾಗಿಸಿದರು.
ಗೋ ಶಾಲೆಗೆ ರವಾನೆ: ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಸೋಮು ಮಾತನಾಡಿ, ಮಂಗಳವಾರ ಬೆಳಗ್ಗೆ 25 ಹಸುಗಳು ಮತ್ತು ನೂರಾರು ಕರುಗಳನ್ನು ಲಾರಿಯಲ್ಲಿ ಹಾಸನಕ್ಕೆ ತಂದಿರುವ ಮಾಹಿತಿ ಲಭ್ಯವಾಯಿತು. ಆದರೆ, ಅವರು ಯಾವ ಕಡೆಯಿಂದ ಇಲ್ಲಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಹಾಸನದ ಟಿಪ್ಪು ನಗರದಲ್ಲಿ 11 ಗೋವುಗಳನ್ನು ತಂದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ನಂತರ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ರಕ್ಷಣೆ ಮಾಡಿ ಗೋಶಾಲೆಗೆ ರವಾನಿಸಿದ್ದಾರೆ ಎಂದರು.
ಸಂತೇಪೇಟೆಯಲ್ಲಿ ನೂರಾರು ಕರುಗಳು ನಮಗೆ ಸಿಕ್ಕಿದ್ದು, ಮಂಗಳವಾರದಂದು ಬೆಳಗ್ಗೆ ಎರಡು ಮಿನಿ ಲಾರಿಯಲ್ಲಿ ಕರುಗಳನ್ನು ತುಂಬಿಕೊಂಡು ಬರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮಾಡಿ, ಕರುಗಳ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಪೊಲೀಸರಿಂದ 11 ಗೋವುಗಳ ರಕ್ಷಣೆ: ಟಿಪ್ಪು ನಗರದಲ್ಲಿ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಡಿವೈಎಸ್‌ಪಿ ಉದಯ ಭಾಸ್ಕರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 11 ಗೋವುಗಳ ರಕ್ಷಣೆ ಮಾಡಿ ಗೋ ಶಾಲೆಗೆ ರವಾನಿಸಿದರು.
ಟಿಪ್ಪು ನಗರದ ಮಸೀದಿ ಒಂದು ಶೆಡ್‌ನಲ್ಲಿ ಜಾನುವಾರುಗಳನ್ನು ಕೂಡಿ ಹಾಕಿ ಪ್ರತಿದಿನವು ಗೋವುಗಳನ್ನು ಹತ್ಯೆ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿದ ಡಿವೈಎಸ್ಪಿ ಉದಯಭಾಸ್ಕರ್ ನೇತೃತ್ವದಲ್ಲಿ ಪೆನ್ಸನ್ ಮೊಹಲ್ಲಾ ಪೊಲೀಸರು, ದಾಳಿ ನಡೆಸಿದರು.
ಈ ವೇಳೆ 11 ಗೋವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಸುಮಾರು ಮೂರು ತಿಂಗಳ ಮೂರು ಕರುಗಳು ಇದ್ದವು. ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು, ಲಾರಿಯಲ್ಲಿ ಅರಸೀಕೆರೆ ತಾಲೂಕಿನಲ್ಲಿರುವ ಗೋಶಾಲೆಗೆ ಕಳುಹಿಸಿದರು. ಈ ಸಂಬಂಧ ಪೊಲೀಸರು ಪ್ರಕರಣವನ್ನೂ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.