ಕುಷ್ಟಗಿ: ಪ್ರಕೃತಿ ಮುನಿಸಿನಿಂದ ಎದುರಾದ ಬರಗಾಲಕ್ಕೆ ತತ್ತರಿಸಿರುವ ರೈತರು ಜಾನುವಾರುಗಳನ್ನು ಸಾಕಲಾಗದೇ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ಬರಗಾಲದಲ್ಲೂ ಜಾನುವಾರುಗಳನ್ನು ರೈತರು ಉತ್ಸಾಹದಿಂದ ಖರೀದಿಸುತ್ತಿದ್ದ ದೃಶ್ಯ ಪಟ್ಟಣದಲ್ಲಿ ನಡೆದ ಜಾನುವಾರು ಸಂತೆಯಲ್ಲಿ ಕಂಡುಬಂತು.
ಈ ಕುರಿತ ಕಂದಕೂರ ಗ್ರಾಮದ ರೈತ ಅಂದಾನಗೌಡ ಪಾಟೀಲ ಪ್ರತಿಕ್ರಿಯಿಸಿ, ಮಳೆ ಇಲ್ಲ, ಹೊಟ್ಟು, ಮೇವು ಇಲ್ಲ ಮುಂದಿನ ದಿನಗಳಲ್ಲಿ ಮಳೆಯಾಗುವ ವಿಶ್ವಾಸದಿಂದ ಎತ್ತು ಖರೀದಿಸುತ್ತಿದ್ದಾರೆ. ಹೂಡುವ ಎತ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಮುಂದೆ ಎತ್ತುಗಳು ದುಬಾರಿಯಾಗುತ್ತವೆ ಎಂದು ಧೈರ್ಯ ಮಾಡಿ ಖರೀದಿಸುತ್ತಿದ್ದಾರೆ. ಮಳೆಯಾಗದಿದ್ದಲ್ಲಿ ಮಾರಾಟ ಮಾಡಿ ಗುಳೆ ಹೋಗುವುದು ಅನಿವಾರ್ಯವಾಗಲಿದೆ ಎಂದರು.
ನೀರಿನ ವ್ಯವಸ್ಥೆ ಇಲ್ಲ: ಪಟ್ಟಣದ ಹೊರವಲಯದಲ್ಲಿ ನಡೆಯುವ ಜಾನುವಾರು ಸಂತೆಯಲ್ಲಿ ಎರಡು ವಾರದಿಂದ ಜಾನುವಾರುಗಳ ಸಂಖ್ಯೆ ಹೆಚ್ಚಿದ್ದು, ಪುರಸಭೆ ಹಾಗೂ ಸ್ಥಳೀಯ ಎಪಿಎಎಂಸಿ ಕರ ವಸೂಲಿ ಮಾಡಿಕೊಳ್ಳುತ್ತಿದ್ದರೂ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ಇಟ್ಟಿದ್ದು ಅದರಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ಪ್ರತಿ ದನಕ್ಕೆ 10 ರೂ. ಕರ ನಿಗದಿ ಮಾಡಿದ್ದು, ಕುಡಿಯುವ ನೀರಿನ ವ್ಯವಸ್ಥೆ ಕೇಳಿದರೆ ಗುತ್ತಿಗೆದಾರರು, ಪುರಸಭೆಯವರನ್ನೇ ಕೇಳಿ ಎಂದು ಗದರಿಸಿ ವಸೂಲಿ ಮಾಡುತ್ತಿದ್ದಾರೆ ಎಂದು ಸಂತೆಗೆ ಆಗಮಿಸುವ ರೈತರು ಆರೋಪಿಸಿದರು.
ಸ್ವಂತ ಜಾಗೆ ಇಲ್ಲ: ಒಂದೂವರೆ ದಶಕದಿಂದ ಕುಷ್ಟಗಿ ಪಟ್ಟಣದಲ್ಲಿ ಜಾನುವಾರು ಸಂತೆ ಶುರುವಾಗಿದ್ದು, ಪ್ರತಿವಾರ ಸಾವಿರಾರು ರೈತರು ಆಗಮಿಸುತ್ತಿದ್ದು ಈಗಿರುವ ಎಪಿಎಂಸಿ ಜಾಗೆ ಸಾಲುತ್ತಿಲ್ಲ. ಪ್ರತ್ಯೇಕ ಜಾಗೆ ಖರೀದಿಸುವ ಪ್ರಸ್ತಾಪವಿದ್ದು ಅನುಷ್ಠಾನಕ್ಕೆ ಬಂದಿಲ್ಲ. ಸಂತೆ ನಡೆಯುವ ಕೃಷಿ ಇಲಾಖೆ ಹಾಗೂ ಟಿಎಪಿಸಿಎಂಎಸ್ ಜಾಗೆಯ ಮಧ್ಯದ ಖಾಲಿ ನಿವೇಶನ ಇಕ್ಕಟ್ಟಾಗಿದೆ.
Advertisement
ಕುಷ್ಟಗಿ ಪಟ್ಟಣದಲ್ಲಿ ನಡೆದ ವಾರದ ಜಾನುವಾರು ಸಂತೆಯಲ್ಲಿ ಕಳೆದೆರಡು ವಾರಗಳಿಂದ ಮಾರಾಟ, ಖರೀದಿ ಹೆಚ್ಚಾಗಿದೆ. ಮಳೆ ನಿರೀಕ್ಷೆಯಲ್ಲಿಯೂ ಕೆಲವು ರೈತರು ಬೇಸಾಯಕ್ಕೆ ಅಗತ್ಯವಾದ ಎತ್ತುಗಳನ್ನು ಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ. ರೈತರು ಬರಗಾಲದಲ್ಲಿ ಮೇವು, ಹೊಟ್ಟಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಯ ನಡುವೆಯೂ ಧೈರ್ಯ ಮಾಡಿ ಎತ್ತುಗಳನ್ನು ಖರೀದಿಸಲು ಮುಂದಾಗಿರುವುದರಿಂದ ಜಾನುವಾರು ವ್ಯಾಪಾರ ಜೋರಾಗಿತ್ತು. ಕೆಲವು ರೈತರು ಮೇವು, ಹೊಟ್ಟು ಖರೀಸಿ ಹೆಚ್ಚುವರಿ ಖರ್ಚಿಗೆ ಹೆದರಿ ಸಿಕ್ಕಷ್ಟೇ ಬೆಲೆ ಜಾನುವಾರು ಮಾರಾಟ ಮಾಡುತ್ತಿರುವುದೂ ಕಂಡುಬಂತು. ಮಾರುಕಟ್ಟೆಯಲ್ಲಿ ಹೂಡುವ ಎತ್ತುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಜೋಡೆತ್ತುಗಳಿಗೆ 50 ಸಾವಿರದಿಂದ 1.20 ಲಕ್ಷ ರೂ.ವರೆಗೆ ಬೆಲೆ ಕಟ್ಟಲಾಗುತ್ತಿದೆ. ಕುಷ್ಟಗಿಯ ರೈತ ಹನುಮಂತ ಗಿಡ್ಡೇರ್ ಅವರು 60 ಸಾವಿರಕ್ಕೆ ಜೋಡೆತ್ತು ಮಾರಾಟ ಮಾಡಿ 54 ಸಾವಿರ ರೂ. ಗಳಿಗೆ ಜೋಡೆತ್ತು ಖರೀಸಿದರು. ರ್ಯಾವಣಕಿ ನಾಗಪ್ಪ ಬನ್ನಿಗಿಡ ಅವರು 1.20 ಲಕ್ಷ ರೂ. ಬೆಲೆ ಕಟ್ಟಿದ್ದ ಜೋಡೆತ್ತಿಗೆ 90 ಸಾವಿರ ರೂ. ಕೇಳಿದ್ದರಿಂದ ಮಾರಾಟ ಮಾಡಲಿಲ್ಲ.
Related Articles
Advertisement