Advertisement

ಗೋಗರೆಯುತ್ತಿವೆ ಜಾನುವಾರು

03:12 PM Apr 27, 2019 | pallavi |

ಯಲಬುರ್ಗಾ: ತಾಲೂಕಿನ ಚಿಕ್ಕೊಪ್ಪ ತಾಂಡಾದಲ್ಲಿ ತಾಲೂಕಾಡಳಿತ ತೆರೆದಿರುವ ಗೋ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಅಸಮರ್ಪಕ ನಿರ್ವಹಣೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ತಾಂಡವಾಡುತ್ತಿದೆ.

Advertisement

ನೆರಳು, ಮೇವಿನ ಕೊರತೆ, ಶೆಡ್‌ ಕೊರತೆ, ವಿದ್ಯುತ್‌ ಸ್ವಚ್ಛತೆ ಸೇರಿದಂತೆ ನಾನಾ ಮೂಲಭೂತ ಸಮಸ್ಯೆಗಳಿಂದ ಗೋ ಶಾಲೆ ಬಳಲುತ್ತಿದ್ದರೂ ಕ್ರಮಕ್ಕೆ ಮುಂದಾಗಬೇಕಾದ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ಜಾನುವಾರುಗಳನ್ನು ಬಿಸಿಲಿನಲ್ಲೇ ಕಟ್ಟಲಾಗಿದೆ. ಕೆಲ ಜಾನುವಾರುಗಳು ಗೋ ಶಾಲೆ ಪಕ್ಕದ ಜಾಲಿ ಬೇಲಿಯ ನೆರಳಿನ ಆಶ್ರಯ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಗೋಶಾಲೆ ಆರಂಭದ ನಂತರ ಯಾವುದೇ ಜನಪ್ರತಿನಿಧಿಗಳು ಹಾಗೂ ಜವಾಬ್ದಾರಿ ಹೊತ್ತ ಪಶು ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. ತಾಲೂಕಿನಲ್ಲಿ ಭೀಕರ ಬರ ಆವರಿಸಿದ್ದು, ರೈತರು ತಮ್ಮ ಜಾನುವಾರುಗಳ ರಕ್ಷಣೆಗೆ ಕಷ್ಟ ಪಡುತ್ತಿದ್ದಾರೆ.

ತಾಲೂಕು ವ್ಯಾಪ್ತಿಯ ತುಮ್ಮರಗುದ್ದಿ, ಬಳೂಟಗಿ, ಹೊಸಳ್ಳಿ, ಬೂನಕೊಪ್ಪ, ದಮ್ಮೂರು, ಚಕ್ಕೊಪ್ಪ, ಮುಧೋಳ, ಯಲಬುರ್ಗಾ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಗ್ರಾಮಗಳ ರೈತರು ತಮ್ಮ ಜಾನುವಾರುಗಳನ್ನು ಗೋ ಶಾಲೆಗೆ ಬಿಟ್ಟಿದ್ದಾರೆ. ಆದರೇ ಕೇಂದ್ರದಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದ ಜಾನುವಾರುಗಳ ಪರಿಸ್ಥಿತಿ ಅಧೋಗತಿಗೆ ಸಾಗಿದೆ.

270ಕ್ಕೂ ಹೆಚ್ಚು ರೈತರ ಜಾನುವಾರುಗಳಿವೆ. ಕೇವಲ 3 ಶೆಡ್‌ಗಳನ್ನು ನಿರ್ಮಿಸಿದ್ದು, ಶೆಡ್‌ ಸಮಸ್ಯೆಯಿಂದ ಜಾನುವಾರುಗಳಿಗೆ ತೊಂದರೆಯಾಗಿದೆ. ಗೋ ಶಾಲೆಯಲ್ಲಿ ಎತ್ತು, ಎಮ್ಮೆ, ಆಕಳು ಸೇರಿದಂತೆ ಹಲವು ಜಾನುವಾರುಗಳಿವೆ. ಜಾನುವಾರುಗಳ ಪ್ರಮಾಣ ಹೆಚ್ಚಾಗುತ್ತಿದೆ. 270 ಜಾನುವಾರುಗಳು ಶೆಡ್‌ನ‌ಲ್ಲಿವೆ. ಇನ್ನುಳಿದ 70 ಜಾನುವಾರುಗಳು ಶೆಡ್‌ ನೆರಳಿಲ್ಲದೇ ಹೊರಗಡೆ ಬಿಸಿಲಿಗೆ ಬಸವಳಿಯುತ್ತಿವೆ. ಗೋಶಾಲೆಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ ಅಸ್ವಚ್ಛತೆಯಿಂದ ವಿಷ ಜಂತುಗಳ ಕಾಟ ಹೆಚ್ಚಾಗಿದೆ ಎಂಬುದು ರೈತರ ಅಳಲು.

Advertisement

ಉಡಾಫೆ ಉತ್ತರ: ಗೋ ಶಾಲೆಗೆ ಸೌಲಭ್ಯ ಕಲ್ಪಿಸುವಂತೆ ಪಶು ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ರೈತರಿಗೆ ಉಡಾಫೆ ಮಾತುಗಳನ್ನಾಡುತ್ತಾರೆ. ಅಧಿಕಾರಿಗಳು ಬರೀ ಎಲೆಕ್ಷನ್‌ ಕೆಲಸದಲ್ಲಿ ಇದ್ದೇವೆ. ಪದೇ ಪದೆ ನಮಗೆ ಹೇಳಬೇಡಿ, ಬೇಕಾದರೇ ಬಿಡಿ ಇರದೇ ಇದ್ದರೆ ನಿಮ್ಮ ಜಾನುವಾರುಗಳನ್ನು ಹೊಡೆದುಕೊಂಡು ಹೋಗಿ ಎಂದು ಗದರಿಸುತ್ತಾರೆ ಎಂದು ತುಮರಗುದ್ದಿಯ ರೈತ ರಾಮಪ್ಪ ಅಳಲನ್ನು ತೋಡಿಕೊಳ್ಳುತ್ತಾರೆ.

ಕಾಯಿಲೆ ಭೀತಿ: ಗೋಶಾಲೆಯಲ್ಲಿ ನೆರಳಿನ ಕೊರತೆಯಿಂದ ಜಾನುವಾರುಗಳು ಅನಾರೋಗ್ಯಕ್ಕೆ ಈಡಾಗುತ್ತಿವೆ. ಜ್ವರ ಕಾಣಿಸಿಕೊಂಡು ಅಸ್ವಸ್ಥಗೊಳುತ್ತಿವೆ. ಚಿಕಿತ್ಸೆ ನೀಡಬೇಕಾದ ವೈದ್ಯರು ಇತ್ತ ಸುಳಿಯುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ. ಗೋ ಶಾಲೆಯ ಸಮಸ್ಯೆಗಳ ಕುರಿತು ಕಂದಾಯ ಇಲಾಖೆಯ ತಹಶೀಲ್ದಾರ್‌ ವೈ.ಬಿ. ನಾಗಠಾಣ ಅವರನ್ನು ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ಬರಗಾಲ ಸಂದರ್ಭದಲ್ಲೂ ನಿಡಶೇಸಿ ಕೆರೆ ಅಭಿವೃದ್ಧಿಗೆ 1 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಗವಿಶ್ರೀಗಳ ಪ್ರೇರಣೆಯಿಂದ ಸುದೀರ್ಘ‌ 76 ದಿನಗಳ ಕಾಲ ಕೆರೆ ಅಭಿವೃದ್ಧಿ ಕಾರ್ಯ ನಡೆದಿದೆ. ಸಮಿತಿಯವರಲ್ಲಿ ಆಸಕ್ತಿ ಕುಂದಿಲ್ಲ ನನ್ನ ಸೇವಾ ಅವಧಿಯಲ್ಲಿ ನಿಡಶೇಸಿ ಕೆರೆ ಅಭಿವೃದ್ಧಿಯ ದಿನಗಳನ್ನು ಇಲ್ಲಿನ ಜನರನ್ನು ಮರೆಯುವುದಿಲ್ಲ.

•ಸುರೇಶ ತಳವಾರ, ಪೊಲೀಸ್‌ ಸರ್ಕಲ್ ಇನ್ಸಪೆಕ್ಟರ್‌ ಕುಷ್ಟಗಿ

ಚಿಕ್ಕೊಪ್ಪ ತಾಂಡಾದಲ್ಲಿ ಕಾಟಾಚಾರಕ್ಕೆ ಗೋ ಶಾಲೆ ತೆರೆಯಲಾಗಿದೆ. ಜಾನುವಾರುಗಳು ನೆರಳಿಲ್ಲದೇ ಬಿಸಿಲಿನ ತಾಪಮಾನದಿಂದ ತೊಂದರೆ ಎದುರಿಸುತ್ತಿವೆ. ಜಾನುವಾರುಗಳಿಗೆ ಹಸಿಮೇವು ವಿತರಿಸಿಬೇಕು. ಅಧಿಕಾರಿಗಳು ನಿರ್ಲಕ್ಷ ್ಯ ವಹಿಸಿದ್ದಾರೆ. ಶೀಘ್ರದಲ್ಲಿ ಗೋಶಾಲೆಗೆ ಸೌಲಭ್ಯ ಕಲ್ಪಿಸಬೇಕು.

•ಶಿವಪ್ಪ ಬಳೂಟಗಿ, ರೈತ

ಚಿಕ್ಕೊಪ್ಪ ಗೋ ಶಾಲೆಗೆ ಶೆಡ್‌ ಅವಶ್ಯಕತೆ ಇದೆ. ಶೆಡ್‌ ನಿರ್ಮಾಣಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಕಂದಾಯ ಇಲಾಖೆಯವರು ಎಲ್ಲಾ ಉಸ್ತುವಾರಿ ವಹಿಸಿರುತ್ತಾರೆ. ಜಾನುವಾರು ತಪಾಸಣೆಗೆ ವೈದ್ಯರನ್ನು ನೇಮಿಸಲಾಗಿದೆ. ರೈತರು ಈಗಾಗಲೇ ದೂರು ನೀಡಿದ್ದಾರೆ. ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಮುಂದಾಗಲಾವುದು. ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತೇನೆ.

•ಡಾ| ರವಿಕುಮಾರ, ತಾಲೂಕು ಪಶು ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next