ತುಮಕೂರು: ಸೀಮೆ ಹಸುಗಳ ಭರಾಟೆ ನಡುವೆ ದೇಸಿ ತಳಿಯ ಹಸುಗಳು, ಎತ್ತುಗಳು ಕಡಿಮೆಯಾಗುತ್ತಿರುವ ಸಂದರ್ಭ ಒಂದೇ ಬಾರಿ ಸಾವಿರಾರು ದೇಸಿ ತಳಿಯ ಹಸು, ಎತ್ತುಗಳ ಜಾತ್ರೆ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಆರಂಭವಾಗಿದೆ.
ಮಹಾಶಿವರಾತ್ರಿ ಅಂಗವಾಗಿ 10 ದಿನ ನಡೆಯುವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯಲ್ಲಿ ಎತ್ತುಗಳ ಪರಿಷೆ ವಿಶೇಷ. ರಾಜ್ಯ ಸೇರಿ ನೆರೆಯ ರಾಜ್ಯಗಳ ರೈತರು ರಾಸುಗಳನ್ನು ಮಾರುವ ಹಾಗೂ ಕೊಳ್ಳುವ ಪ್ರಕ್ರಿಯೆಯಲ್ಲಿ ತಲ್ಲೀನರಾಗಿದ್ದಾರೆ. 1905ರಲ್ಲಿ ಶ್ರೀ ಕ್ಷೇತ್ರದ ಶ್ರೀ ಉದ್ಧಾನ ಶಿವಯೋಗಿಗಳು ಜಾನುವಾರು ಜಾತ್ರೆ ಆರಂಭಿಸಿದ್ದು, ಅಂದಿನಿಂದ ಪ್ರತಿವರ್ಷ ಜಾತ್ರೆ ತನ್ನದೆ
ಆದ ವೈಶಿಷ್ಟ್ಯದೊಂದಿಗೆ ಪ್ರಸಿದ್ಧಿ ಪಡೆದಿದೆ. ಜಾತ್ರೆಗೆ ಬರುವ ರೈತರು, ರಾಸುಗಳಿಗೆ ಕ್ಷೇತ್ರದ ಆಡಳಿತ ಮಂಡಳಿ ಸಕಲ ವ್ಯವಸ್ಥೆ ಕಲ್ಪಿಸಿದೆ. ಜಾತ್ರೆಗೆ ಮೊದಲೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ರೈತರು ಜಾನುವಾರುಗಳ ಸಮೇತ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಬಂದು ರಾಸುಗಳ ಮಾರಾಟ ಹಾಗೂ ಕೊಳ್ಳುತ್ತಿದ್ದಾರೆ. 50 ಸಾವಿರದಿಂದ 10 ಲಕ್ಷ ಬೆಲೆ ಬಾಳುವ ರಾಸುಗಳು ಬಂದಿವೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಗದಗ, ಹರಿಹರ, ಬಿಜಾಪುರ, ಬಳ್ಳಾರಿ, ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ,ತಮಿಳುನಾಡು ಮೊದಲಾದ ಕಡೆಗಳಿಂದ ರೈತರು ಆಗಮಿಸಿದ್ದು, ಮಠದ ಸುತ್ತಮುತ್ತ ಎಲ್ಲಿ ನೋಡಿದರೂ ಜಾನುವಾರುಗಳ ದಂಡೇ ಕಾಣುತ್ತಿವೆ. ಜಾನುವಾರುಗಳಿಗೆ ನೆರಳು, ವಿದ್ಯುತ್, ಕುಡಿಯುವ ನೀರು, ಆರೋಗ್ಯ ತಪಾಸಣೆ ಹಾಗೂ ಸಂಜೆ ಮನರಂಜನೆ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಜಾತ್ರೆಗೆ ಬರುವ ಎಲ್ಲರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
ಒಂದೊಂದು ಜೋಡಿ ರಾಸು ಕೊಳ್ಳಲು ರೈತರು ಬಹುದೂರದಿಂದ ಬರುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನ ವ್ಯವಸ್ಥೆಯೂ ಇದೆ. ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿರುವುದರಿಂದ ದನಗಳ ಜಾತ್ರೆ ಮೆರುಗು ಪಡೆದಿದೆ.
ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಜಾತ್ರೆ ಅಂಗವಾಗಿ ದನಗಳ ಪರಿಷೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮಾರ್ಗದರ್ಶನ ದಂತೆ ಸಿದ್ಧಲಿಂಗ ಶ್ರೀಗಳು ಮುಂದುವರೆಸಿದ್ದಾರೆ. ಈ ವರ್ಷವೂ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರಾಸುಗಳು ಬಂದಿವೆ. 8 ಲಕ್ಷ ಬೆಲೆಬಾಳುವ ರಾಸುಗಳು ಈಗಾಗಲೇ ಬಂದಿವೆ. ಕಳೆದ 3ದಿನಗಳಿಂದ ಹಲವು ರಾಸುಗಳು ಬರುತ್ತಿವೆ. ಉತ್ತರ ಕರ್ನಾಟಕ ಭಾಗದ ಭೂಮಿ ಉಳುಮೆ ಮಾಡಲು ಹಳ್ಳಿಕಾರ್ ತಳಿ ಎತ್ತುಗಳು ಉತ್ತಮವೆಂದು ಖರೀದಿಸಲು ಗುಲ್ಬರ್ಗಾ, ರಾಯಚೂರು ಭಾಗದಿಂದಲೂ ರೈತರು ಬರುತ್ತಿದ್ದಾರೆ. ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿವೆ.
–ಎಂ.ರೇಣುಕಾರಾದ್ಯ, ಸಿದ್ಧಗಂಗಾ ಮಠ