Advertisement

Smartphone; ಮೊದಲ ಬಾರಿಗೆ “ಆ್ಯಪ್‌’ ಆಧರಿಸಿ ಜಾನುವಾರು ಗಣತಿ

01:11 AM Aug 19, 2024 | Team Udayavani |

ಮಂಗಳೂರು: ದೇಶದಲ್ಲಿ 21ನೇ ಜಾನುವಾರು ಗಣತಿ ಸೆಪ್ಟಂಬರ್‌ 1ಕ್ಕೆ ದೇಶಾದ್ಯಂತ ಆರಂಭಗೊಳ್ಳುತ್ತಿದೆ. ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸುತ್ತಿದ್ದ ಗಣತಿಕಾರರು ಈ ಬಾರಿ ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ ಬಳಸಿ ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Advertisement

ಕೇಂದ್ರ ಪಶುಸಂಗೋಪನ ಇಲಾಖೆಯಿಂದಲೇ “21ಸ್ಟ್‌ ಲೈವ್‌ಸ್ಟಾಕ್‌ ಸೆನ್ಸಸ್‌’ ಎನ್ನುವ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದ್ದು, ಬಳಸುವ ಬಗ್ಗೆಯೂ ತರಬೇತಿ ನೀಡಲಾಗಿದೆ.

ಹಿಂದೆ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಿದ್ದರೆ, ಈ ಬಾರಿ ಚುಟುಕಾಗಿ ಆ್ಯಪ್‌ ಮೂಲಕ ಮಾಹಿತಿ ನಮೂದಿಸಬಹುದು. ನೆಟ್‌ವರ್ಕ್‌ ಇಲ್ಲದಿದ್ದರೂ ಈ ಆ್ಯಪ್‌ ನೆಟ್‌ವರ್ಕ್‌ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್‌ ಜತೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ವಿನ್ಯಾಸ ಪಡಿಸಲಾಗಿದೆ.

ರಾಜ್ಯದ ಪಶುಸಂಗೋಪನ ಇಲಾಖೆಯೂ 4 ತಿಂಗಳ ಕಾಲ ನಡೆಯುವ ಈ ಬೃಹತ್‌ ಸಮೀಕ್ಷಾ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಮಾಸ್ಟರ್‌ ಟ್ರೇನರ್‌ಗಳ ತರಬೇತಿ ಪೂರ್ಣಗೊಂಡಿದ್ದು, ಗಣತಿದಾರರಿಗೆ ತರಬೇತಿ ವಿವಿಧ ಹಂತಗಳಲ್ಲಿ ನಡೆಯುತ್ತಿದೆ.

5 ವರ್ಷಗಳಿಗೊಮ್ಮೆ ಸಮೀಕ್ಷೆ
1919ರಿಂದ ಜಾನುವಾರು ಗಣತಿ ನಡೆಯುತ್ತಾ ಬಂದಿದ್ದು, ಕಳೆದ 100 ವರ್ಷಗಳಲ್ಲಿ 20 ಗಣತಿ ನಡೆದಿದೆ. ಇದು 21ನೇ ಜಾನುವಾರು ಗಣತಿಯಾಗಿರುತ್ತದೆ.

Advertisement

ಕರ್ನಾಟಕದಲ್ಲಿ 1,46,00,000 ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವರು. ಅದಕ್ಕಾಗಿ 3357 ಗಣತಿದಾರರು, 730 ಮೇಲ್ವಿಚಾರಕರು ಇರುತ್ತಾರೆ. ಗಣತಿದಾರರು ಮನೆ ಮನೆಗೆ ತೆರಳಿದರೆ, ಮೇಲ್ವಿಚಾರಕರು ಹಾಗೂ ನೋಡಲ್‌ ಅಧಿಕಾರಿಗಳು ಉಸ್ತುವಾರಿ ವಹಿಸಿಕೊಳ್ಳುವರು.

ಗಣತಿ ಹೇಗಿರುತ್ತದೆ?
ಯಾವ ತಳಿಯ ಜಾನುವಾರುಗಳು? ಯಾವ ವಯಸ್ಸು, ಎಷ್ಟು ರೈತರು, ಯಾವ ವರ್ಗದ ರೈತರು, ಎಷ್ಟು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಈ ಮೂಲಕ ಸರಕಾರಗಳು ತಮ್ಮ ಮುಂದಿನ ಯೋಜನೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ, ಕಾರ್ಯಕ್ರಮ ನಿರೂಪಿಸುವುದಕ್ಕಾಗಿ ಗಣತಿಯ ಅಂಶಗಳು ಬಳಕೆಯಾಗುತ್ತವೆ.

ಯಾವೆಲ್ಲಾ ಜಾನುವಾರು? ಮನೆಗಳಲ್ಲಿ ಸಾಕಲಾಗುವ ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟ್ರಿಚ್‌ ಹಕ್ಕಿಗಳ ಮಾಹಿತಿ ಪಡೆಯಲಾಗುತ್ತದೆ. ಬೀಡಾಡಿ ದನ, ನಾಯಿಗಳ ಮಾಹಿತಿಯನ್ನೂ ಸೇರಿಸಲಾಗುತ್ತದೆ. ದೇವಸ್ಥಾನದಲ್ಲಿ ಆನೆ, ದನ ಸಾಕುವುದಿದ್ದರೆ, ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ.

10ಕ್ಕಿಂತ ಜಾಸ್ತಿ ದನಗಳಿದ್ದರೆ, 1,000ಕ್ಕಿಂತ ಜಾಸ್ತಿ ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆಯಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಮನೆಗೆ ಜಾನುವಾರು ಗಣತಿದಾರರು ಬರಲಿದ್ದಾರೆ. ಇದು ರೈತರ, ಜಾನುವಾರು ಸಾಕಣಿಕೆ ದಾರರಿಗೆ ಬೇಕಾದ ಯೋಜನೆಗಳನ್ನು ರೂಪಿಸಲು ಸಹಾಯಕವಾಗುತ್ತದೆ, ಹಾಗಾಗಿ ಸೂಕ್ತ ಮಾಹಿತಿಗಳನ್ನು ಗಣತಿದಾರರಿಗೆ ಸಾರ್ವಜನಿಕರು ನೀಡಿ ಸಹಕರಿಸಬೇಕು.
– ಡಾ| ಅರುಣ್‌ ಕುಮಾರ್‌ ಶೆಟ್ಟಿ, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ ಮಂಗಳೂರು

ದ.ಕ. ಜಿಲ್ಲೆ
ಮನೆಗಳು : 4,54,000
ಗಣತಿದಾರರು : 215
ಮೇಲ್ವಿಚಾರಕರು : 28
ಉಡುಪಿ
ಮನೆಗಳು : 2,61,000
ಗಣತಿದಾರರು : 3,357
ಮೇಲ್ವಿಚಾರಕರು : 730

ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next