Advertisement

ಬರ ಪ್ರದೇಶದ‌ಲ್ಲಿ ಜಾನುವಾರು ಶಿಬಿರ

01:09 AM Nov 29, 2019 | mahesh |

ಬೆಂಗಳೂರು: ಬರಪೀಡಿತ ಪ್ರದೇಶಗಳಲ್ಲಿ ಈಗಾಗಲೇ ತೆರೆಯಲಾಗಿರುವ ಜಾನುವಾರು ಶಿಬಿರಗಳನ್ನು ಮುಚ್ಚುವ ಮತ್ತು ಈಗ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ಎಂದು ಘೋಷಿಸಲಾಗಿರುವ ತಾಲೂಕುಗಳಲ್ಲಿ ಜಾನುವಾರು ಶಿಬಿರಗಳನ್ನು ತೆರೆಯುವ ಬಗ್ಗೆ ಪ್ರಕೃತಿ ವಿಕೋಪ ಪರಿಸ್ಥಿತಿ ನಿರ್ವಹಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಯೇ ತೀರ್ಮಾನ ಕೈಗೊಳ್ಳಲಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಸಲಹೆ ನೀಡಿದೆ.

Advertisement

ಹೈಕೋರ್ಟ್‌ನ ಕಾನೂನು ಸೇವೆಗಳ ಸಮಿತಿ ಮತ್ತು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ, ಈ ಸಲಹೆ ನೀಡಿತು. ಅದಕ್ಕೆ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಸಮ್ಮತಿ ವ್ಯಕ್ತಪಡಿಸಿದರು.

ಹೈಕೋರ್ಟ್‌ ಸಲಹೆ
ವಿಚಾರಣೆ ವೇಳೆ, ಜಾನುವಾರು ಶಿಬಿರಗಳ ಸ್ಥಿತಿಗತಿ ಬಗ್ಗೆ ನ್ಯಾಯಪೀಠ ಪ್ರಶ್ನಿಸಿತು. ಆಗ ಕೆಲವು ಕಡೆ ಜಿಲ್ಲಾಧಿಕಾರಿಗಳ ವರದಿಯಂತೆ ಜಾನುವಾರು ಶಿಬಿರಗಳನ್ನು ಮುಚ್ಚಲಾಗಿದೆ ಎಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಉತ್ತರಿಸಿದರು. ಅದಕ್ಕೆ ಜಿಲ್ಲಾಧಿಕಾರಿಗಳಿಗೆ ಆ ಅಧಿಕಾರ ಕೊಟ್ಟವರು ಯಾರು? ಒಂದೊಮ್ಮೆ ಜಾನುವಾರು ಶಿಬಿರ ತೆರೆಯುವ ಮತ್ತು ಮುಚ್ಚುವ ತೀರ್ಮಾನ ರಾಜ್ಯ ಕಾರ್ಯಕಾರಿ ಸಮಿತಿ ಕೈಗೊಂಡರೆ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಕಾರ್ಯಕಾರಿ ಸಮಿತಿ ಈ ತೀರ್ಮಾನ ಕೈಗೊಳ್ಳಲು “ವಿಪತ್ತು ನಿರ್ವಹಣಾ ಕಾಯ್ದೆ-2005’ಯಲ್ಲೂ ಅವಕಾಶವಿದೆಯಲ್ಲ ಎಂದು ನ್ಯಾಯಪೀಠ ಹೇಳಿತು.

ಮುಂದಿನ ದಿನಗಳಲ್ಲಿ ಇದ ರಂತೆಯೇ ನಡೆದುಕೊಳ್ಳಲಾಗುವುದು ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಭರವಸೆ ನೀಡಿದರು. ಉಳಿ ದಂತೆ, ಮುಂಗಾರು ಹಂಗಾಮಿ ನಲ್ಲಿ 49 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದರು.

ಬರಪೀಡಿತ ಪ್ರದೇಶಗಳಲ್ಲಿ ತೆರೆಯಲಾಗಿದ್ದ ಜಾನುವಾರು ಶಿಬಿರಗಳನ್ನು ಮುಚ್ಚಿದ್ದರೆ, ಅವುಗಳ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು, ಒಂದು ವೇಳೆ ಜಾನುವಾರು ಶಿಬಿರಗಳನ್ನು ಮುಚ್ಚಿರುವುದಕ್ಕೆ ಸಮರ್ಪಕ ಕಾರಣಗಳು ಇಲ್ಲದಿದ್ದರೆ, ಅಂಥ ಕಡೆ ಶಿಬಿರಗಳನ್ನು ಪುನರ್‌ ಸ್ಥಾಪಿಸುವ ಬಗ್ಗೆಯೂ ಕಾರ್ಯಕಾರಿ ಸಮಿತಿ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿತು.

Advertisement

ಅನುಪಾಲನ ವರದಿ ಸಲ್ಲಿಕೆಗೆ ಸೂಚನೆ
ವಿಪತ್ತು ನಿರ್ವಹಣ ಕಾಯ್ದೆ-2005ರ ಅನುಷ್ಠಾನ, ಕಾಯ್ದೆಗೆ ಪೂರಕವಾಗಿ ನಿಯಮಗಳನ್ನು ರೂಪಿಸಿರುವ ಬಗ್ಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣ ಪ್ರಾಧಿಕಾರಗಳ ಕಾರ್ಯಚರಣೆ, ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಮತ್ತು ವಿಪತ್ತು ಉಪಶಮನ ನಿಧಿ ಸ್ಥಾಪನೆ, ನಿಧಿಯಲ್ಲಿರುವ ಹಣ, ಈವರೆಗೆ ಎಷ್ಟು ಖರ್ಚಾಗಿದೆ ಸೇರಿಕೊಂಡಂತೆ ವಿಪತ್ತು ನಿರ್ವಹಣ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೋರ್ಟ್‌ ನೀಡಿರುವ ಆದೇಶಗಳ ಅನುಪಾಲನಾ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next