ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸಂಚಾರಿ ಪಶು ಚಿಕಿತ್ಸಾಲಯ(ಆ್ಯಂಬುಲೆನ್ಸ್)ಸೇವೆ ಮೇ 7ರಂದು ಉದ್ಘಾಟನೆಗೊಳ್ಳಲಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7ರಂದು ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಪಶು ಸಂಗೋಪನೆ ಸಚಿವ ಪರುಷೋತ್ತಮ್ ರೂಪಾಲ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ರಾಜ್ಯದ ಸಚಿವರ ಸಮ್ಮುಖದಲ್ಲಿ ಈ ಸೇವೆಗೆ ಚಾಲನೆ ನೀಡಲಿರುವರು ಎಂದರು.
ನಾಡಿನ ಜಾನುವಾರುಗಳ ಆರೋಗ್ಯ ಸೇವೆಗಾಗಿ 275 ಆ್ಯಂಬುಲೆನ್ಸ್‌ಗಳ ಪೈಕಿ 70 ಆ್ಯಂಬುಲೆನ್ಸ್‌ಗಳಿಗೆ ಮೊದಲ ಹಂತದಲ್ಲಿ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಸೇರಿದಂತೆ 2.90 ಕೋಟಿ ಜಾನುವಾರುಗಳಿದ್ದು, ಪ್ರತೀ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಚಿಕಿತ್ಸಾ ವಾಹನದಂತೆ 275 ವಾಹನ ಒದಗಿಸಲಾಗುತ್ತಿದೆ ಎಂದವರು ವಿವರಿಸಿದರು.
ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿಗಾ ವ್ಯವಸ್ಥೆಗಾಗಿ ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪಿಸಲಾಗಿದ್ದು, ರೈತರಿಂದ ಟ್ರೋಲ್ ಪ್ರೀ ಸಂಖ್ಯೆ 1962ಕ್ಕೆ ಕರೆ ಬಂದ ತತ್‌ಕ್ಷಣ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಾಗುವುದು. ಪ್ರತೀ ಚಿಕಿತ್ಸಾ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕ ಮತ್ತು ವಾಹನ ಚಾಲಕ ಕಂ ಡಿ. ದರ್ಜೆ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಭು ಚವ್ಹಾಣ್ ಹೇಳಿದರು.
ರೈತರಿಗೆ, ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾನುವಾರುಗಳ ಸಂರಕ್ಷಣೆ, ಪಾಲನೆ ಮತ್ತು ಆರೋಗ್ಯ ರಕ್ಷಣೆಗಾಗಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಾಹನಗಳ ಮೂಲಕ ಪಶು ಸಂಜೀವಿನಿ ಯೋಜನೆ ಜಾರಿಗೆ ತರಲಾಗಿತ್ತು. ಇದರ ಮುಂದುವರಿದ ಭಾಗವೇ ಸಂಚಾರಿ ಪಶು ಚಿಕಿತ್ಸಾ ವಾಹನವಾಗಿದೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.
ಪಶು ಸಂಗೋಪನೆ ಇಲಾಖೆಯಿಂದ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಷ್ಟಾನಗೊಳಿಸಲಾಗಿದೆ. ದೇಶದ ಮೊದಲ ಪ್ರಾಣಿ ಕಲ್ಯಾಣ ಸಹಾಯ ವಾಣಿ ಕೇಂದ್ರ(ವಾರ್ ರೂಮ್ )ಸ್ಥಾಪನೆ, ಜಿಲ್ಲೆಗೊಂದು ಸರಕಾರಿ ಗೋಶಾಲೆ ನಿರ್ಮಾಣ, ಪಶುಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲು ಲಸಿಕಾ ಅಭಿಯಾನ, ಪಶುವೈದ್ಯರು ಮತ್ತು ಸಿಬಂದಿ ನೇಮಕಾತಿ ಮಾಡಲಾಗಿದೆ. ಪ್ರತೀ ಲೀಟರ್ ಹಾಲಿಗೆ 5ರೂ. ಪ್ರೋತ್ಸಾಹಧನ, ಆಕಸ್ಮಿಕ ಮರಣ ಹೊಂದಿದ ಕುರಿ ಮತ್ತು ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರಧನ ವಿತರಿಸಲಾಗಿದೆ ಎಂದು ತಿಳಿಸಿದರು.