Advertisement
ಶಿಕ್ಷಣ- ವೃತ್ತಿ ಒಂದು ಧ್ರುವ, ಪ್ರವೃತ್ತಿ ಇನ್ನೊಂದು ಧ್ರುವ ಎಂಬ ಹಾಗೆ ಕಾಣಿಸಬಹುದು ಇದು. ಆದರೆ ಹಾಗಲ್ಲ. ಸಂಗೀತವೋ ಯಕ್ಷಗಾನವೋ ಕಥಕಳಿಯೋ ಫೊಟೋಗ್ರಫಿಯೋ – ಆ ಇನ್ನೊಂದು ಅವರ ಪ್ಯಾಶನ್ ಆಗಿರುತ್ತದೆ. ವೃತ್ತಿ ಬದುಕಿನ ಉನ್ನತ ಸಾಧನೆಯ ಜತೆಗೆ ಈ ಪ್ಯಾಶನ್ ಉಗ್ರವಾಗಿ ಅವರನ್ನು ಇನ್ನೊಂದು ಆಯಾಮದ ಪರಿಣತಿಯತ್ತ ಸೆಳೆಯುತ್ತದೆ. ಅದು ಅವರ ಹೃದಯಕ್ಕೆ ಹತ್ತಿರವಾದದ್ದು, ಅದು ಲೋಕಮುಖಕ್ಕೆ ಬಹಿರಂಗವಾಗಿರುವುದಕ್ಕೆ ಅಲ್ಲ; ಆತ್ಮ ಸಂತೋಷಕ್ಕೆ.ನಮಗೂ ಹೃದಯಕ್ಕೆ ಹತ್ತಿರವಾದುದ ನ್ನು ಕಂಡುಕೊಳ್ಳುವುದು ಕಷ್ಟವೇನಲ್ಲ. ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಅದನ್ನು ಕಂಡುಕೊಳ್ಳಬಹುದು. ಇಲ್ಲೊಂದಿಷ್ಟು ಪ್ರಶ್ನೆಗಳಿವೆ. ಅಚ್ಚುಕಟ್ಟಾಗಿ ಅವುಗಳಿಗೆ ಉತ್ತರ ಹುಡುಕುತ್ತ, ಲಭಿಸಿದ ಉತ್ತರಗಳನ್ನು ಚೊಕ್ಕವಾಗಿ ನೋಟ್ ಮಾಡಿ.
ಶಾಲೆಗೆ ಹೋಗುತ್ತಿದ್ದಾಗ, ಕಾಲೇಜಿನಲ್ಲಿದ್ದಾಗ ಏನೆಲ್ಲ ಮಾಡುತ್ತಿದ್ದಿರಿ? ಚಿತ್ರ ಬಿಡಿಸುತ್ತಿದ್ದಿರಾ? ಹಾಡುತ್ತಿದ್ದಿರಾ? ಅಪ್ಪನ ಜತೆಗೆ ತೋಟದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಾ ಇದ್ದಿರಾ? ಸ್ಪೆಶಲ್ ಅಡುಗೆ ಮಾಡಿ ಮನೆಯ ಎಲ್ಲರಿಗೂ ಉಣಬಡಿಸುವುದರಲ್ಲಿ ಖುಷಿ ಕಾಣುತ್ತಿದ್ದಿರಾ? ಅದನ್ನು ನೆನಪು ಮಾಡಿಕೊಂಡು ಯಾವುದು ನಿಮ್ಮ ಬೆಸ್ಟ್ ಎಂಬುದನ್ನು ಮರಳಿ ಕಂಡುಕೊಳ್ಳಿ. ಯಾವುದು ನಿಮ್ಮನ್ನು ಉಲ್ಲಾಸಗೊಳಿಸುತ್ತದೆ?
ವೃತ್ತಿಯಲ್ಲಾಗಿರಬಹುದು- ಅದರ ಒಂದು ಭಾಗ ನಿಮ್ಮನ್ನು ಉಲ್ಲಾಸಗೊಳಿಸುತ್ತದೆ. ಅದ್ಯಾವುದು ಅಂತ ಕಂಡುಕೊಳ್ಳಿ. ಒಂದು ಉಪವೃತ್ತಿ, ಒಂದು ಹವ್ಯಾಸ, ಸಮಾರಂಭಗಳಲ್ಲಿ ಅನ್ನ-ಸಾಂಬಾರು ಬಡಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು- ಹೀಗೆ ಯಾವುದೋ ಒಂದು ನಿಮಗೆ ಇನ್ನೆಲ್ಲದಕ್ಕಿಂತ ಹೆಚ್ಚು ಉಲ್ಲಾಸ ಕೊಡುತ್ತದೆ. ಅದನ್ನು ಕಂಡುಕೊಳ್ಳಿ.
Related Articles
ಇಂಟರ್‌ನೆಟ್‌ನಲ್ಲಿ ಆಗಾಗ ಯಾವುದರ ಬಗ್ಗೆ ಶೋಧಿಸುತ್ತೀರಿ ಅಥವಾ ದಿನಪತ್ರಿಕೆ, ಪುಸ್ತಕ ಗಳಲ್ಲಿ ಹೆಚ್ಚು ಇಷ್ಟಪಟ್ಟು ಆರಿಸಿಕೊಂಡು ಓದುವ ವಿಷಯ ಯಾವುದು? ಇದನ್ನೂ ಲಿಸ್ಟ್‌ಗೆ ಸೇರಿಸಿ.
Advertisement
ಕನಸು ಕಾಣುವುದು ಯಾವುದರ ಬಗ್ಗೆ?ನಾನು ಅದು ಮಾಡಬೇಕು, ಇದು ಮಾಡಬೇಕು ಅಂತ ನಿಮ್ಮಷ್ಟಕ್ಕೆ ನೀವು ಕನಸು ಕಾಣುವುದು ಯಾವುದರ ಬಗ್ಗೆ? ಬರಹಗಾರನಾಗುವುದು, ಅತ್ಯುತ್ತಮ ಬ್ಯಾಟ್ಸ್‌ಮನ್ ಆಗುವುದು..ಇನ್ನೇನೇನೋ! ಇದನ್ನೂ ಬರೆದಿಟ್ಟುಕೊಳ್ಳಿ. ಲಿಸ್ಟ್ ತಯಾರಾದ ಮೇಲೆ ಅದರಲ್ಲಿ ತೊಡಗಿಸಿಕೊಳ್ಳುವುದು. ಇದಕ್ಕೆ ಸ್ವಲ್ಪ ಕಲಿಕೆ, ಪರಿಶ್ರಮ ಬೇಕಾಗುತ್ತದೆ. ನಿಮ್ಮ ಪಟ್ಟಿಯಲ್ಲಿ ನಾಲ್ಕೈದು ಐಟಂ ಇದ್ದರೆ ಪ್ರಯೋಗ ಮಾಡಿನೋಡಬೇಕಾಗುತ್ತದೆ. ನಿಮ್ಮ ಪಟ್ಟಿಯಿಂದ ಅತ್ಯಂತ ಪ್ರಿಯವಾದದ್ದನ್ನು ಆರಿಸಿಕೊಳ್ಳಿ. ಅದರ ಬಗ್ಗೆ ಹೆಚ್ಚು ಓದಿ, ಅಧ್ಯಯನ ಮಾಡಿ. ಪರಿಣಿತರಾಗಿರುವವರ ಜತೆಗೆ ಚರ್ಚಿಸಿ, ಮಾರ್ಗದರ್ಶನ ಪಡೆಯಿರಿ. ನಿಮ್ಮಲ್ಲಿ ಈಗಾಗಲೇ ಇರುವ ಆಸಕ್ತಿ, ಕೌಶಲಗಳನ್ನು ಹರಿತಗೊಳಿಸಲು ಬೇಕಾದ ಎಲ್ಲವನ್ನೂ ಪಟ್ಟುಬಿಡದೆ ನಡೆಸಿ. ಎರಡೂ¾ರು ವಿಷಯಗಳು ನಿಮ್ಮ ಪಟ್ಟಿಯಲ್ಲಿದ್ದರೆ ಒಂದೆರಡು ತಿಂಗಳು ಒಂದು ವಿಷಯದ ಹಾಗೆ ತೊಡಗಿ ಕೊಂಡು ನಿಮ್ಮನ್ನೇ ನೀವು ಪ್ರಯೋಗಕ್ಕೆ ಒಡ್ಡಿಕೊಳ್ಳಿ. ಕೊನೆಯಲ್ಲಿ ಯಾವುದು ಅತ್ಯಂತ ಇಷ್ಟ, ಎಂಬುದು ತಿಳಿಯುತ್ತದೆ. ಇನ್ನೊಂದು ಪ್ರಾಮುಖ್ಯವಾದ ಸಂಗತಿ- ಭಯ, ಅಂಜಿಕೆ, ಹಿಂಜರಿಕೆ ಬಿಡಿ. ಯಾರೇನೋ ಅಂದುಕೊಳ್ಳುತ್ತಾರೆ ಎಂಬ ಮುಜುಗರ ಬೇಡ. ನಿಮ್ಮ ಪ್ಯಾಶನ್ ಅನ್ನು ಹುಡುಕಿ ತೊಡಗಿಕೊಳ್ಳಲು ವಯಸ್ಸಿನ ಅಭ್ಯಂತರವೂ ಇಲ್ಲ. ಸಮಯ ಹೊಂದಿಸಿಕೊಳ್ಳುವುದು ಇನ್ನೊಂದು ವಿಚಾರ. ನಿಮಗಿಷ್ಟವಾದ ಹವ್ಯಾಸವನ್ನು ಒಂದು ವೃತ್ತಿಯಾಗಿಸಿ. ಇದು ರಾತ್ರಿ ಬೆಳಗಾಗುವುದರೊಳಗೆ ಆಗುವುದಿಲ್ಲ; ವರ್ಷಗಳು ಬೇಕಾಗಬಹುದು. ಆದರೆ ಅಂತಹ ಒಂದು ಸಾಧ್ಯತೆಯೂ ಇದೆ ಎನ್ನುವುದನ್ನು ಮರೆಯಬೇಡಿ. ಕೊನೆಯದಾಗಿ, ಇದೆಲ್ಲವೂ ಬಾಳೆಹಣ್ಣು ಸುಲಿದು ತಿಂದಷ್ಟು ಸುಲಭವಲ್ಲ. ನಿಮ್ಮ ಈಗಿನ ವೃತ್ತಿಯೋ ಕಲಿಕೆಯೋ – ಅದಕ್ಕೆ ನೀವು ಎಷ್ಟು ಪರಿಶ್ರಮ ಹಾಕುತ್ತಿರೋ ಅಷ್ಟೇ ಶ್ರಮ ಇಲ್ಲೂ ಬೇಕಾಗುತ್ತದೆ. ಏಕಾಗ್ರತೆ, ಆತ್ಮಾವಲೋಕನ, ತಾಲೀಮು, ಒಂದಿಷ್ಟು ಹಣ ಎಲ್ಲವೂ ಅಗತ್ಯ. ಈ ಎಲ್ಲ ಸಾಧನೆಗಳಿಂದ ನಿಮಗೆ ಬೇಕಾದ ಬದುಕು ನಿಮಗೆ ಸಿಗುತ್ತದೆ ಎಂಬುದು ನಿಮ್ಮ ನೆನಪಿನಲ್ಲಿರಲಿ. ನೀವು ಪ್ರೀತಿಸುವ ವೃತ್ತಿಯನ್ನೇ ಆರಿಸಿಕೊಳ್ಳಿ; ಆಗ ನಿಮ್ಮ ಬದುಕಿನಲ್ಲಿ ಒಂದೇ ಒಂದು ದಿನವೂ ನೀವು “ಕೆಲಸ’ ಮಾಡಬೇಕಾಗಿ ಬರುವುದಿಲ್ಲ
– ಕನ್‌ಫ್ಯೂಶಿಯಸ್ –ಚಾರು