ಮಂಗಳೂರು: ಮೇರಿಹಿಲ್ ವಿಕಾಸ ಪ.ಪೂ. ಕಾಲೇಜು ವತಿಯಿಂದ 5,000 ಗಿಡಗಳನ್ನು ನೆಡುವ “ವೃಕ್ಷ ವಿಕಾಸ’ ಕಾರ್ಯಕ್ರಮಕ್ಕೆ ಕಾಲೇಜಿನ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಮತ್ತು ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಮಕ್ಕಳು ಪರಿಸರ ಪ್ರೀತಿ ಬೆಳೆಸಿಕೊಳ್ಳುವುದರೊಂದಿಗೆ ದೇಶಕ್ಕೆ ಮಾದರಿಯಾಗಿ ಬಾಳಬೇಕು ಎಂದು ಶುಭ ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ನಿಸರ್ಗವನ್ನು ನಿರ್ಲಕ್ಷ್ಯ ಮಾಡಿ ಮರ ಕಡಿದ ಪರಿಣಾಮ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಪ್ರಕೃತಿ ಉಳಿದರೆ ಸಂಸ್ಕೃತಿ, ಪರಂಪರೆ ಉಳಿಯುತ್ತದೆ. ವಿಕಾಸ್ ಕಾಲೇಜು ಪರಿಸರಸ್ನೇಹಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಶ್ಲಾಘನೀಯ ಎಂದರು.
ತಿಂಗಳಿಗೊಮ್ಮೆ ಪರಿಸರ ಪಾಠ
ಸಂಸ್ಥೆಯ ಮುಖ್ಯಸ್ಥ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಮಕ್ಕಳು ನಿತ್ಯದ ಪಾಠದೊಂದಿಗೆ ಪರಿಸರ ಪ್ರೀತಿಯನ್ನೂ ಬೆಳೆಸಿಕೊಳ್ಳಬೇಕು. ಅಧ್ಯಾಪಕರು ತಿಂಗಳಲ್ಲಿ ಒಂದು ದಿನ ವಿದ್ಯಾರ್ಥಿಗಳಿಗೆ ಪರಿಸರ ಪಾಠ ಮಾಡಬೇಕು ಎಂದರು.
ಶಾಸಕ ಡಾ| ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ಮುಖ್ಯ ಅತಿಥಿಯಾಗಿದ್ದರು. ವಿಕಾಸ ಸಮೂಹ ಸಂಸ್ಥೆಯ ಟ್ರಸ್ಟಿ ಜೆ. ಕೊರಗಪ್ಪ, ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್ ಉಪಸ್ಥಿತರಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ರಶ್ಮಿತ್ ಅವರ ಶೈಕ್ಷಣಿಕ ಸಾಧನೆಗಾಗಿ ಮತ್ತು ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಕಾಲೇಜಿನ ಡೀನ್ ಮಂಜುಳಾ ಅನಿತಾ ರಾವ್ ಸ್ವಾಗತಿಸಿದರು. ಲಕ್ಷ್ಮೀಶ ಭಟ್ ವಂದಿಸಿದರು.