Advertisement

“ಲೈವ್‌’ಈಸ್‌ ಬ್ಯೂಟಿಫ‌ುಲ್‌

01:12 PM Oct 03, 2017 | |

ಸೆಲೆಬ್ರಿಟಿಯಾಗೋಕೆ ಯಾರಿಗೆ ತಾನೇ ಆಸೆ ಇರೋಲ್ಲ. ಹಿಂದೆಲ್ಲಾ ಅದಕ್ಕೆ ನಾನಾ ಥರದ ಪಡಿಪಾಟಲುಗಳನ್ನು ಪಡಬೇಕಾಗಿತ್ತು. ಆದರೀಗ ಸೆಲೆಬ್ರಿಟಿಯಾಗೋದು ಹಿಂದೆಂದಿಗಿಂತಲೂ ಸುಲಭ. ಪ್ರತಿಭೆಯಿದ್ದರೂ ಅವಕಾಶ ಸಿಕ್ಕದೆ ಜೀವನಪರ್ಯಂತ ಹಲುಬಬೇಕಾಗಿದ್ದ ಪರಿಸ್ಥಿತಿ ಇಂದಿಲ್ಲ. ಇದು ಸಾಧ್ಯವಾಗಿರುವುದು ಇಂಟರ್‌ನೆಟ್‌ ಎಂಬ ಮಾಯಾಜಾಲದಿಂದ.

Advertisement

ಇಂಟರ್‌ನೆಟ್ಟಿಗೊಂದು ಘೋಷ ವಾಕ್ಯ ನೀಡುವುದಾದರೆ- “ಮೋರ್‌ ಪವರ್‌ ಟು ದ ಯೂಸರ್‌’. ಇಂದು ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಅಕೌಂಟ್‌ ಹೊಂದಿರುವ ಪ್ರತಿಯೊಬ್ಬರೂ ಒಂದು ರೀತಿಯಲ್ಲಿ ಸೆಲೆಬ್ರಿಟಿಗಳೇ. ಏಕೆಂದರೆ ಸಾಮಾಜಿಕ ಜಾಲತಾಣಗಳು ಇಂದು ಪ್ರತಿಭಾ ವೇದಿಕೆಯಾಗಿಯೂ, ಟ್ಯಾಲೆಂಟ್‌ ಹಂಟರ್‌ಆಗಿಯೂ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪ್ರತಿಭೆಗೆ ಯಾವುದೇ ಮಿತಿಯಿಲ್ಲ.

ಎಣ್ಣೆಯಿಲ್ಲದೆ ಅಡುಗೆ ಮಾಡುವುದರಿಂದ ಹಿಡಿದು, ರಸ್ತೆಗುಂಡಿಗಳನ್ನು ಲೈವ್‌ಶೂಟ್‌ ಮಾಡುವುದು, ಹಾಡುಗಾರಿಕೆ, ಪ್ರತಿಭಟನೆ, ವಾಕ್ಸಮರ ಎಲ್ಲವಕ್ಕೂ ಇಂಟರ್‌ನೆಟ್‌ನಲ್ಲಿ ಜಾಗವಿದೆ. ಈ ರೀತಿ ಪ್ರಖ್ಯಾತರಾದವರು ಯಾವ ಸ್ಟಾರ್‌ಗಳಿಗೂ ಕಮ್ಮಿಯಿಲ್ಲ ಅನ್ನೋದು ಅವರ ಲಕ್ಷಾಂತರ ಸಂಖ್ಯೆಯ ಫಾಲೋವರ್ಅನ್ನು ನೋಡಿದರೇ ತಿಳಿಯುತ್ತೆ. ನೇರಪ್ರಸಾರದ ವಿಡಿಯೋಗಳನ್ನು ಹಾಕುತ್ತಾ, ಹೀರೋ ಆಗಿ ಬೆಳೆದವರ ಕುರಿತು ಇಲ್ಲೊಂದು ಇಣುಕು ನೋಟ…

ಕನ್ನಡಿಗರಿಗೆ ಟೆಕ್‌ ಪಾಠ!
ಇಂಟರ್‌ನೆಟ್‌ನಲ್ಲಿ ಯಾವುದೇ ತಂತ್ರಜ್ಞಾನ ಸಂಬಂಧಿತ ವಿವರಗಳು ಹೆಚ್ಚಾಗಿ ಇಂಗ್ಲಿಷಿನಲ್ಲಿಯೇ ಇರುತ್ತವೆ. ವರ್ಷಗಳಿಂದೀಚೆಗೆ ಹಿಂದಿ, ತಮಿಳು, ಮಲಯಾಳಂ ಮುಂತಾದ ಪ್ರಾದೇಶಿಕ ಭಾಷೆಗಳಲ್ಲಿಯೂ ಈ ತಂತ್ರಜ್ಞಾನ ಸಂಬಂಧಿ ಜಾಲತಾಣಗಳು, ಫೇಸ್‌ಬುಕ್‌ ಪೇಜುಗಳು ಶುರುವಾಗತೊಡಗಿವೆ. ಕನ್ನಡದಲ್ಲಿ ಮಾತ್ರ ಈ ತನಕ ಬಂದಿರಲಿಲ್ಲ. ಈ ಕೊರತೆಯನ್ನು ನೀಗಿಸಿದ್ದು “ಟೆಕ್‌ ಇನ್‌ ಕನ್ನಡ’ ತಂಡ. ಫೇಸ್‌ಬುಕ್‌ ಪೇಜ್‌ ಮೂಲಕ ಶುರುವಾದ ಅವರ ಪಯಣ ಅಂದು ಯೂಟ್ಯೂಬ್‌ ಚಾನೆಲ್‌ ಮತ್ತು ಪ್ರತ್ಯೇಕ ವೆಬ್‌ಸೈಟ್‌ ತನಕ ಬಂದು ತಲುಪಿದೆ.

ಲೇಟೆಸ್ಟ್‌ ಟೆಕ್ನಾಲಜಿ, ಮಾರ್ಕೆಟ್‌ಗೆ ಬಂದಿರುವ ಹೊಸ ಮೊಬೈಲ್‌, ಅದರ ವೈಶಿಷ್ಟéಗಳನ್ನು ಕನ್ನಡಿಗ ಜನಸಾಮಾನ್ಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಶುರುವಾಗಿದ್ದು “ಟೆಕ್‌ ಇನ್‌ ಕನ್ನಡ’. ಇದನ್ನು ಪ್ರಾರಂಭಿಸಿದ್ದು ಸಂದೀಪ್‌ ಎಂಬ ಚತುರ. ಮೂಲತಃ ಹಾಸನದವರಾದ ಸಂದೀಪ್‌ ಮಲಾ°ಡ್‌, ಮೆಕಾನಿಕಲ್‌ ಎಂಜಿನಿಯರಿಂಗ್‌ ಡಿಗ್ರೀ ಮುಗಿಸಿದ್ದಾರೆ. ವಿಡಿಯೊ ಎಡಿಟಿಂಗ್‌, ಫೋಟೊಶಾಪ್‌ ಬಗ್ಗೆ ಆಸಕ್ತಿಯಿದ್ದ ಅವರ ಹೊಸ ಕಲ್ಪನೆ ಮೂರು ವರ್ಷಗಳ ಹಿಂದೆ “ಟೆಕ್‌ ಇನ್‌ ಕನ್ನಡ’ ಎಂಬ ಎಫ್ಬಿ ಪೇಜ್‌ ಮೂಲಕ ರೂಪು ತಾಳಿತು.

Advertisement

ಶುರುವಿನಲ್ಲಿ ಅಲ್ಲಿನ ಪೋಸ್ಟುಗಳಿಗೆ ಒಂದು ಅಥವಾ ಎರಡು ಲೈಕುಗಳು ಬಿದ್ದರೆ ಅದೇ ಹೆಚ್ಚು. ಆಗ ಯಾರೂ ಈ ಪೇಜ್‌ನತ್ತ ದೃಷ್ಟಿಯನ್ನೂ ಹರಿಸುತ್ತಿರಲಿಲ್ಲ. ಈ ಸಮಯದಲ್ಲಿ ನಿರಾಶೆಯಾದರೂ ಧೈರ್ಯಗುಂದದೆ ಸಂದೀಪ್‌ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋದರು. ಇಂದು ಅವರ ಫೇಸ್‌ಬುಕ್‌ ಪೇಜನ್ನು 68,000 ಮಂದಿ ಲೈಕ್‌ ಮಾಡಿದ್ದಾರೆ. 71,000 ಮಂದಿ ಫಾಲೋವರ್ ಇದ್ದಾರೆ. ಅವರ ಯೂಟ್ಯೂಬ್‌ ಚಾನೆಲ್‌ಗೆ 1 ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರೆ. ಅಂದ ಹಾಗೆ 1 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಪಡೆದ ಕನ್ನಡ ಯೂಟ್ಯೂಬ್‌ ಚಾನೆಲ್‌ ಎಂಬ ಹೆಗ್ಗಳಿಕೆ ಇದರದ್ದು.

ವಿಜ್ಞಾನ, ತಂತ್ರಜ್ಞಾನ, ಹೊಸ ಮೊಬೈಲ್‌ ಫೋನ್‌, ಹೊಸ ಆ್ಯಪ್‌, ಮೊಬೈಲ್‌ ಡಾಟಾ ಮುಂತಾದ ಟೆಕ್ನಿಕಲ್‌ ಸಂಗತಿಗಳ ಬಗ್ಗೆ ಮಾಹಿತಿ ಈ ಪೇಜ್‌ನಲ್ಲಿ ಲಭ್ಯ. ಟೆಕ್‌ ಇನ್‌ ಕನ್ನಡ ಈಗೆಷ್ಟು ಪ್ರಖ್ಯಾತಿ ಪಡೆದಿದೆಯೆಂದರೆ, ಜನರೇ ಮೆಸೇಜ್‌ ಮಾಡಿ ತಮಗೆ ಬೇಕಾದ ಮಾಹಿತಿಯನ್ನು ಕೇಳಿ ಪಡೆದುಕೊಳ್ಳುತ್ತಿದ್ದಾರೆ. ಬೇರೆ ಬೇರೆ ಕಂಪನಿಗಳು ತಮ್ಮ ಪ್ರಾಡಕ್ಟ್ ರಿವ್ಯೂ, ಜಾಹೀರಾತಿಗಾಗಿ ಟೆಕ್‌ ಇನ್‌ ಕನ್ನಡ ಪೇಜ್‌ನ ಮೊರೆ ಹೋಗುತ್ತಿದ್ದಾರೆ. ಪೇಜ್‌ಗೆ ಸ್ಪಾನ್ಸರ್‌ ಮಾಡಲೂ ತುಂಬಾ ಜನ ಮುಂದಾಗುತ್ತಿದ್ದಾರೆ. ಇದನ್ನೇ ಫ‌ುಲ್‌ಟೈಮ್‌ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಸಂದೀಪ್‌.

ಕನ್ನಡದ ಮನೆ ಮನಗಳಿಗೆ ತಂತ್ರಜ್ಞಾನವನ್ನು ಮುಟ್ಟಿಸುವ ಜೀವನೋದ್ದೇಶ ನನ್ನದು. ಆದಾಯವನ್ನು ನಂಬಿಕೊಂಡು ಇಂಥ ಕೆಲಸ ಮಾಡುವವರಿಗೆ ಬಹಳಷ್ಟು ತಾಳ್ಮೆ ಇರಬೇಕು. ನಾನೂ ಅಂಥ ತಾಳ್ಮೆಪರೀಕ್ಷೆಯಿಂದಲೇ ಗೆದ್ದಿರುವೆ.
-ಸಂದೀಪ್‌, ಟೆಕ್‌ ಇನ್‌ ಕನ್ನಡ

ಫಾಲೋವರ್ಸ್‌: 71,000
ಯೂಟ್ಯೂಬ್‌ ಚಂದಾದಾರರು: 1,53,887 

******

ಇವರ ಜತೆ ಫೇಸ್‌ಬುಕ್ಕೂ ಸ್ಟೆಪ್‌ ಹಾಕುತ್ತೆ!
ನೀವು ಫೇಸ್‌ಬುಕ್‌ನಲ್ಲಿ ಆ್ಯಕ್ಟಿವ್‌ ಇರುವವರಾಗಿದ್ದರೆ ಅಲ್ಲು ರಾಘು ಮತ್ತು ಸುಶ್ಮಿತಾ ಯಾರೆಂದು ಚೆನ್ನಾಗಿ ಗೊತ್ತಿರಲೇಬೇಕು. ಕನ್ನಡದಲ್ಲಿ ಡಬ್‌ಸ್ಮ್ಯಾಶ್‌ ಎಂದಾಗ ಮೊದಲು ನೆನಪಾಗುವ ಹೆಸರು ಇವರಿಬ್ಬರದ್ದು. ನೋಡಲು ತೆಲುಗು ನಟ ಅಲ್ಲು ಅರ್ಜುನ್‌ ಥರ ಇರುವ ಇವರ ಹೆಸರು ರಾಘವೇಂದ್ರ. ಮೂಲತಃ ಬಳ್ಳಾರಿಯ ಹೊಸಪೇಟೆಯವರು. ತೆಲುಗು ಸಿನಿಮಾಗಳನ್ನು ಜಾಸ್ತಿ ನೋಡುತ್ತಿದ್ದ ಇವರು ಅಲ್ಲು ಅರ್ಜುನ್‌ ಅವರ ದೊಡ್ಡ ಫ್ಯಾನ್‌ ಆಗಿದ್ದರಿಂದ ಜನರು ಇವರನ್ನು ಅಲ್ಲು ರಾಘು ಎಂದೇ ಕರೆಯುತ್ತಾರೆ.

ಪರಭಾಷೆಯ ಡಬ್‌ಸ್ಮ್ಯಾಶ್‌ ವಿಡಿಯೋಗಳು ರಾರಾಜಿಸುತ್ತಿದ್ದ ಹೊತ್ತಿನಲ್ಲಿ ಕನ್ನಡದಲ್ಲಿ ಒಂದೂ ಜನಪ್ರಿಯ ಡಬ್‌ಸ್ಮ್ಯಾಶ್‌ ವಿಡಿಯೋ ಇರಲಿಲ್ಲ. ಅಂಥ ಸಮಯದಲ್ಲಿ ಕನ್ನಡಿಗರನ್ನು ಡಬ್‌ಸ್ಮ್ಯಾಶ್‌ ಮೂಲಕ ಹಿಡಿದಿಟ್ಟಿದ್ದು ರಾಘು. ಇದು 2 ವರ್ಷಗಳ ಹಿಂದಿನ ಕತೆ. ತಮ್ಮ ಮೊಬೈಲ್‌ನಲ್ಲಿ ಕನ್ನಡದಲ್ಲಿ ಡಬ್‌ಸ್ಮ್ಯಾಶ್‌ ವಿಡಿಯೋ ಮಾಡಿ ಫೇಸ್‌ಬುಕ್‌ಗೆ ಅಪ್ಲೋಡ್‌ ಮಾಡುತ್ತಿದ್ದರು. ಜನರೂ ಅದನ್ನು ನೋಡಿ ಎಂಜಾಯ್‌ ಮಾಡುತ್ತಿದ್ದರು. ಹೀಗೆ ಫ್ಯಾನ್‌ ಫಾಲೋಯಿಂಗ್‌ ಬೆಳೆಯಿತು. ಈ ಹೊತ್ತಿನಲ್ಲಿ ಅವರಿಗೆ ಜೊತೆಯಾದವರು ಸುಶ್ಮಿತಾ.

ನಟನೆಯಲ್ಲಿ ಆಸಕ್ತಿಯಿದ್ದ ಬೆಂಗಳೂರಿನ ಹುಡುಗಿ ಸುಶ್ಮಿತಾ ಕೂಡಾ ಡಬ್‌ಸ್ಮ್ಯಾಶ್‌ ವಿಡಿಯೋ ಅಪ್ಲೋಡ್‌ ಮಾಡಿ ಜನರನ್ನು ರಂಜಿಸುತ್ತಿದ್ದರು. ರಾಘು ಮತ್ತು ಸುಶ್ಮಿತಾಗೆ ಅದು ಹೇಗೋ ಪರಿಚಯ ಬೆಳೆದು ಜೊತೆಯಾಗಿ ಡಬ್‌ಸ್ಮ್ಯಾಶ್‌ ವಿಡಿಯೋ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಕ್ಲಿಕ್ಕಾಯಿತು. ಮೊದಲ ವಿಡಿಯೊ “ಕುಶಲವೇ ಕ್ಷೇಮವೇ’ ಅನ್ನು ಅಲ್ಲು ರಾಘು ಕಾರಿನಲ್ಲಿ, ಸುಶ್ಮಿತಾ ಮನೆಯಲ್ಲಿ ರೆಕಾರ್ಡ್‌ ಮಾಡಿ, ನಂತರ ಕೊಲಾಜ್‌ ಮಾಡಿ ಶೇರ್‌ ಮಾಡಿದರು.

ಅದು ಲಕ್ಷಾಂತರ ಜನರನ್ನು ತಲುಪಿತು. ಆ ವಿಡಿಯೋದಿಂದ ರಾಘು- ಸುಶ್ಮಿತಾ ಜೋಡಿ ಎಷ್ಟು ಫೇಮಸ್‌ ಆಯೆದರೆ, ಅಲ್ಲು ರಾಘುವಿನ ಫೇಸ್‌ಬುಕ್ಕಿನಲ್ಲಿ ಫ್ಯಾನ್ಸ್‌ ಪೇಜ್‌ ಸೃಷ್ಟಿಯಾಯಿತು. ಸದ್ಯಕ್ಕೆ ಈಗ ಆ ಪೇಜ್‌ಗೆ 1,47,669 ಲೈಕ್ಸ್‌, 1,61,493 ಫಾಲೋವರ್ ಇದ್ದಾರೆ. ಎಷ್ಟೊಂದು ಡಬ್‌ಸ್ಮ್ಯಾಶ್‌ ವಿಡಿಯೋಗಳು ಈಗ ಬರುತ್ತಿದ್ದರೂ ಇವರಿಬ್ಬರ ವಿಡಿಯೋ ನೋಡಲು ಜನರು ಇನ್ನೂ ಉತ್ಸುಕರಾಗಿದ್ದಾರೆ. ಜನಪ್ರಿಯತೆ ಒಂದರಿಂದ ಏನೂ ಪ್ರಯೋಜನವಿಲ್ಲ ಎನ್ನುವ ಆಪಾದನೆಯೊಂದಿದೆ.

ಅದೆಷ್ಟು ಸರಿ ಎಂಬುದುದು ಹೇಳುವುದು ಕಷ್ಟ. ಆದರೆ ರಾಘು- ಸುಶ್ಮಿತಾರಿಗೆ ಸಿನಿಮಾ ಆಫ‌ರ್‌ಗಳಂತೂ ಸಿಕ್ಕಿವೆ. ಈಗಾಗಲೇ ಇವರಿಬ್ಬರು ಜೋಡಿಯಾಗಿ ನಟಿಸಿರುವ “ಆರ್ಯ ಶಿವ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಪ್ರತಿಭಾವಂತ ನಟರನ್ನು ಗುರುತಿಸಿ ಬೆಳೆಸುವ, ಕನ್ನಡ ಸಿನಿಮಾಗಳಿಗೆ, ಹಾಡುಗಳಿಗೆ ಪ್ರಮೋಶನ್‌ ಮಾಡುವ ಕೆಲಸ ಈ ಪೇಜ್‌ ಮೂಲಕ ಅವರು ಮಾಡುತ್ತಿದ್ದಾರೆ. ಅಲ್ಲದೇ, ಇನ್ನಷ್ಟು ಡಬ್‌ಸ್ಮ್ಯಾಶ್‌ ಕಲಾವಿದರನ್ನು ಪ್ರೋತ್ಸಾಹಿಸಲು “ಸ್ಪಾರ್ಕ್‌’ ಎಂಬ ಸ್ಟುಡಿಯೋ ಕೂಡ ತೆರೆದಿದ್ದಾರೆ.

ಫಾಲೋವರ್ಸ್‌: 1,61,493

******

ಹಬ್ಬದ ಮಹತ್ವ ಹೇಳುವ ಹಂಸಾ
ಪುರಾಣ, ಪುಣ್ಯಕಥೆ, ಪ್ರವಚನ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದೆಲ್ಲಾ ಹಳೆಯ ಕಾಲದ್ದು, ಯಾರಿಗೆ ಬೇಕು ಎಂಬ ಉದಾಸೀನ ಮನಸ್ಥಿತಿಯ ಜನರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅದನ್ನು ಸುಳ್ಳು ಮಾಡುವಂಥ ಫೇಸ್‌ಬುಕ್‌ ಪೇಜ್‌ ಒಂದಿದೆ. ಅದುವೇ “ಆರ್‌.ಜೆ. ಹಂಸಾ’ ಅವರ ಅಫೀಶಿಯಲ್‌ ಪೇಜ್‌. ಹಂಸಾ ಅವರು ಮೊದಲು 92.7 ಬಿಗ್‌ ಎಫ್.ಎಂನಲ್ಲಿ ಆರ್‌.ಜೆ ಆಗಿದ್ದವರು. ಆಗ ಪ್ರತಿದಿನ ಬೆಳಗ್ಗೆ “ಸುಪ್ರಭಾತ’ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

ಆ ಕಾರ್ಯಕ್ರಮದ ಮೂಲಕ ಬೆಂಗಳೂರಿಗರ ಮುಂಜಾವನ್ನು ದೈವಿಕವಾಗಿಸುವುದರ ಜೊತೆಗೆ ಅಭಿಮಾನಿಗಳನ್ನೂ ಪಡೆದಿದ್ದರು. ಕಾರ್ಯಕ್ರಮದಲ್ಲಿ ಅವರು ತಾವು ಹಿರಿಯರಿಂದ ಕೇಳಿ ತಿಳಿದ ಸಂಗತಿಗಳನ್ನು ಶ್ರೋತೃಗಳಿಗೆ ತಿಳಿಸಿಕೊಡುತ್ತಿದ್ದರು. ಕೇವಲ ಹಾಡು, ಮನರಂಜನೆ ನೀಡುವವರಿಗೆ ಮಾತ್ರವೆ ಅಭಿಮಾನಿಗಳಿರುತ್ತವೆ ಎಂದುಕೊಂಡವರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ, ಹಂಸಾರವರಿಗೂ ಅಗಾಧ ಫ್ಯಾನ್‌ಗಳು ಹುಟ್ಟಿಕೊಂದ್ದರು.

ಆರ್‌.ಜೆ ಕೆಲಸ ಬಿಟ್ಟ ಮೇಲೂ ಹಂಸಾರವರಿಗೆ ತಮ್ಮ ಇಷ್ಟದ ಕಾರ್ಯವನ್ನು ಮುಂದುವರಿಸುವ ಮನಸ್ಸಾಯಿತು. ಆಗ ಹೊಳೆದದ್ದು ಫೇಸ್‌ಬುಕ್‌ ಮೂಲಕ ಜನರನ್ನು ತಲುಪುವ ಐಡಿಯಾ. ಇದಕ್ಕೆ ಅವರ ಪತಿಯ ಸಹಕಾರವೂ ಸಿಕ್ಕಿತು. ಕಳೆದ ವರ್ಷ ಅಕ್ಷಯ ತೃತೀಯದಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಮೊದಲ ವಿಡಿಯೊ ಶೇರ್‌ ಮಾಡಿದ್ದರು. ಅದನ್ನು ಬಹಳಷ್ಟು ಜನರು ನೋಡಿ ಮೆಚ್ಚಿಕೊಂಡರು.

ಅಂದಿನಿಂದ ಹಂಸಾ, ಪ್ರತಿ ಹಬ್ಬದ ಬಗ್ಗೆಯೂ, ಅದರ ವೈಶಿಷ್ಟ ಮತ್ತು ಪೌರಾಣಿಕ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡುವ ವಿಡಿಯೊ ಅಪ್ಲೋಡ್‌ ಮಾಡುತ್ತಾರೆ. ಭೀಮನ ಅಮವಾಸ್ಯೆಯ ಬಗೆಗಿನ ಅವರ ವಿಡಿಯೊ 750 ಶೇರ್‌, 1 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿರುವುದು ವಿಶೇಷ. ನೀವು ಈ ಹಬ್ಬದ ಬಗ್ಗೆ ಹೇಳಿ, ಆ ಸಂಪ್ರದಾಯದ ಬಗ್ಗೆ ಮಾಹಿತಿ ಕೊಡಿ ಎಂದು ಫ್ಯಾನ್ಸ್‌ಗಳೇ ಕೇಳುವುದು ಇವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

“ನಮ್ಮ ಪ್ರತಿ ಹಬ್ಬ, ಸಂಪ್ರದಾಯಕ್ಕೂ ವಿಶೇಷವಾದ ಅರ್ಥವಿದೆ. ಅದನ್ನು ಅರಿತುಕೊಂಡಿರುವವರ ಸಂಖ್ಯೆ ಕಡಿಮೆ. ನಾವೇನೋ ಅಜ್ಜ- ಅಜ್ಜಿಯರಿಂದ ಕಥೆಗಳನ್ನು ಕೇಳಿ ತಿಳಿದಿರುತ್ತೇವೆ. ಎಲ್ಲದರ ಹಿಂದೆಯೂ ವೈಜ್ಞಾನಿಕವಾದ ಕಾರಣವೊಂದಿದೆ. ಆದರೆ, ಇಂದಿನ ಪೀಳಿಗೆಯವರಿಗೆ ಆ ಬಗ್ಗೆ ಮಾಹಿತಿ ಇಲ್ಲ. ಹಾಗಾಗಬಾರದು ಅನ್ನೋದು ನನ್ನ ವಿಡಿಯೊಗಳ ಉದ್ದೇಶ. ಇದರಿಂದ ಖುಷಿ, ಸಂತೃಪ್ತಿ ಸಿಗುತ್ತೆ. ನನಗೆ ಅಷ್ಟೇ ಸಾಕು’ ಎನ್ನುತ್ತಾರೆ ಆರ್‌.ಜೆ. ಹಂಸಾ.

ಎಫ್ಬಿ ವಿಡಿಯೋ: 1 ಲಕ್ಷಕ್ಕೂ ಅಧಿಕ ವೀಕ್ಷಣೆ

******

ಹಾಳಾಗೋದೇ


ಕನ್ನಡ ರ್ಯಾಪರ್‌ ಚಂದನ್‌ ಶೆಟ್ಟಿಯನ್ನು ಇವತ್ತಿನ ದಿನ ಯಾರಾದರೂ ಗುರುತು ಹಿಡಿಯುತ್ತಿದ್ದಾರೆಂದರೆ, ಅದರ ಕ್ರೆಡಿಟ್‌ ಸಲ್ಲಬೇಕಾಗಿರುವುದು, ಅವದು ಯೂಟ್ಯೂಬ್‌ನಲ್ಲಿ ರಿಲೀಸ್‌ ಮಾಡಿದ್ದ “ಹಾಳಾಗೋದೇ’ ಹಾಡಿಗೆ. ಕಾಲೇಜು ಹುಡುಗರ ನಡುವೆ, ಪಡ್ಡೆಗಳ ನಡುವೆಯಂತೂ ಈ ಹಾಡು ಸಿಕ್ಕಾಪಟ್ಟೆ ಪಾಪ್ಯುಲರ್‌ ಆಗಿತ್ತು. ಯೂಟ್ಯೂಬ್‌ನಲ್ಲಿ ಶೇರ್‌ ಆಗಿದ್ದ ವಿಡಿಯೋವನ್ನು ಅತ್ಯಧಿಕ ಮಂದಿ ವೀಕ್ಷಿಸಿದ್ದಾರೆ. ಅದರ ನಂತರವೇ ಅವರಿಗೆ ಆಫ‌ರ್‌ಗಳು ಬರತೊಡಗಿದ್ದು, ಇನ್ನಷ್ಟು ಮ್ಯೂಸಿಕ್‌ ವಿಡಿಯೋಗಳನ್ನು ಮಾಡಲು ಸಾಧ್ಯವಾಗಿದ್ದು.

******

ಲೈವ್‌ ಅವಾಂತರ
ಫೇಸ್‌ಬುಕ್‌ ಲೈವ್‌ನಲ್ಲಿ ಯುವತಿಯೊಬ್ಬಳು ಮಾಡಿಕೊಂಡ ಅವಾಂತರದ ಬಗ್ಗೆ ಇಲ್ಲಿ ಬರೆಯಲೇಬೇಕು. ಚೀನಾದ ಝಾಂಗ್‌ ಎಂಬ 26 ವರ್ಷದ ವಿಡಿಯೊ ಬ್ಲಾಗರ್‌ ಲೈವ್‌ನಲ್ಲಿ ತಮ್ಮ ವೀಕ್ಷಕರಿಗೆ ಹಸಿ ಅಲೋವೆರಾ (ಲೋಳೆಸರ) ತಿನ್ನುವುದರಿಂದ ಆಗುವ ಉಪಯೋಗಗಳ ಕುರಿತಾಗಿ ಮಾಹಿತಿ ನೀಡುತ್ತಿದ್ದಳು. ಲೈವ್‌ ಆಗಿ ಅಲೊವೆರಾ ತಿಂದು ತೋರಿಸುವ ಗಡಿಬಿಡಿಯಲ್ಲಿ ಆಕೆ ಅಗೇವ್‌ ಅಮೆರಿಕನಾ ಎಂಬ ಸಸ್ಯವನ್ನು ತಿಂದು ಫ‌ಜೀತಿ ಮಾಡಿಕೊಂಡಳು.


ಅಲೊವೆರಾದ ಎಲೆಗಳನ್ನೇ ಹೋಲುವ ಅಗೇವ್‌ ಅಮೆರಿಕನಾ ಒಂದು ವಿಷಕಾರಿ ಸಸ್ಯ. ಅಗೇವ್‌ ಎಲೆಗಳನ್ನು ತಿಂದು ಸ್ವಲ್ಪ ನಿಮಿಷಗಳಲ್ಲೇ ಆಕೆ ಅನಾರೋಗ್ಯಕ್ಕೆ ತುತ್ತಾದಳು. ಲೈವ್‌ ವೀಕ್ಷಿಸುತ್ತಿದ್ದ ಆಕೆಯ ಅಭಿಮಾನಿಗಳಿಗೆ ಏನಾಗುತ್ತಿದೆ ಎಂದು ಗಲಿಬಿಲಿಯಾಯ್ತು. ಗಂಟಲಿನಲ್ಲಿ ಬೆಂಕಿ ಎದ್ದ ಅನುಭವವಾಗುತ್ತಿದೆ ಎಂದು ಹೇಳಿದಾಗಲೇ ಅವರಿಗೆಲ್ಲ ಆದ ಅನಾಹುತದ ಅರಿವಾಗಿದ್ದು. ತಕ್ಷಣ ಹತ್ತಿರದ ಆಸ್ಪತ್ರೆಗೆ ಅವಳನ್ನು ದಾಖಲಿಸಲಾಯ್ತು. ಅಭಿಮಾನಿ ದೇವರುಗಳನ್ನು ಸಂತೃಪ್ತಿ ಪಡಿಸುವ ಭರದಲ್ಲಿ ಆಕೆ ಪಾಪ ಆಸ್ಪತ್ರೆಗೆ ಹೋಗಬೇಕಾಯ್ತು.

******

ದಿ ಲಿವಿಂಗ್‌ ರೂಂ ಕಛೇರಿ
ಇದು ಗುರುಪ್ರಿಯಾ ಎಂಬ ಸಂಗೀತಪ್ರಿಯರು ಶುರು ಮಾಡಿರುವ ಪೇಜ್‌. ಸಂಗೀತವನ್ನೇ ಉಸಿರಾಡಿಕೊಂಡಿರುವ ಗುರುಪ್ರಿಯಾ ಅವರು ಸಂಗೀತಗಾರರನ್ನು, ಸಂಗೀತಾಭಿಮಾನಿಗಳನ್ನು ಒಂದೆಡೆ ಸೇರಿಸಿ, ಮನೆಯಲ್ಲೇ ಸಣ್ಣ ಸಂಗೀತ ಕಛೇರಿ ನಡೆಸುತ್ತಾರೆ. ಕೇವಲ 50- 60 ಜನರು ಸೇರುವ ಕಾರ್ಯಕ್ರಮದಲ್ಲಿ, ವೇದಿಕೆ ಮತ್ತು ಪ್ರೇಕ್ಷಕರ ನಡುವೆ ಅಂತರವೇ ಕಾಣಿಸದು. ತಿಂಗಳಿಗೊಮ್ಮೆ ನಡೆಯುವ ಈ ಕಾರ್ಯಕ್ರಮದ ವಿವರಗಳನ್ನು “ದಿ ಲಿವಿಂಗ್‌ರೂಮ್‌ ಕಛೇರಿ’ ಪೇಜ್‌ನಲ್ಲಿ ನೀಡುತ್ತಾರೆ. ಮೊದಲು ಪೇಜ್‌ ಮೂಲಕ ಕಾರ್ಯಕ್ರಮದ ಲೈವ್‌ ಕೂಡ ತೋರಿಸಲಾಗುತ್ತಿತ್ತು. ಆದರೆ, ಜನ ಸಂಗೀತದ ನೆಪದಲ್ಲಾದರೂ ಮೊಬೈಲ್‌ ಕೈಬಿಟ್ಟು ಕಾರ್ಯಕ್ರಮಕ್ಕೆ ಬರಲಿ ಎಂಬ ಆಶಯದಿಂದ ವಿಡಿಯೊ ಶೇರ್‌ ಮಾಡುವುದನ್ನು ನಿಲ್ಲಿಸಿದ್ದಾರೆ. 

ಯು ಟ್ಯೂಬ್‌ನಿಂದ ಹಣ ಮಾಡೋದ್ಹೇಗೆ?
1. ನಿಮ್ಮದೇ ಆದ ಒಂದು ಯುಟ್ಯೂಬ್‌ ಚಾನೆಲ್‌ ತೆರೆಯಿರಿ. 
2. ನಿಮ್ಮದೇ ಸ್ವಂತ ರಚನೆಯ, ಹೈ ಕ್ವಾಲಿಟಿ ವಿಡಿಯೊವನ್ನು ಚಾನೆಲ್‌ಗೆ ನಿಯಮಿತವಾಗಿ ಅಪ್ಲೋಡ್‌ ಮಾಡಿ.
3. ನಿಮ್ಮ ವಿಡಿಯೊದ ಚಂದಾದಾರರ (ಸಬ್‌ಸೆð„ಬರ್) ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ. ಎಫ್ಬಿ, ಟ್ವಿಟರ್‌ ಖಾತೆಯಲ್ಲಿ ನಿಮ್ಮ ಯುಟ್ಯೂಬ್‌ ಚಾನೆಲ್‌ ಬಗ್ಗೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 
4.ಜನಪ್ರಿಯತೆಯ ಆಧಾರದಲ್ಲಿ ಯು ಟ್ಯೂಬ್‌ನವರು  ನಿಮ್ಮ ಚಾನೆಲ್‌ನ ಜಾಹೀರಾತುಗಳನ್ನು ಹಾಕುತ್ತಾರೆ. ಅದಕ್ಕಾಗಿ ನೀವು ಚಾನೆಲ್‌ ಸೆಟ್ಟಿಂಗ್‌ನಲ್ಲಿ “ಎನೇಬಲ್‌ ಮಾನೆಟೈಸೇಶನ್‌’ ಎಂಬ ಬಟನ್‌ ಕ್ಲಿಕ್‌ ಮಾಡಬೇಕು. 
5. ನಿಮ್ಮ ವಿಡಿಯೊಗೆ ಕನಿಷ್ಠಪಕ್ಷ 10 ಸಾವಿರ ವ್ಯೂವ್ಸ್‌ ಸಿಕ್ಕಿದರೆ ಜಾಹೀರಾತಿನಿಂದ ಹಣ ಗಳಿಸಬಹುದು. 

* ಪ್ರಿಯಾಂಕಾ ನಟಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next