Advertisement

ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಿ; ಸಾಣೇಹಳ್ಳಿ ಸ್ವಾಮೀಜಿ

06:31 PM Jun 25, 2022 | Team Udayavani |

ಹಿರೇಕೆರೂರ: ಜನತೆ ನಾಗರಿಕರಾಗುತ್ತಿದ್ದಾರೆ. ಆದರೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಸಂಸ್ಕೃತಿ ಮರೆತ ಮನುಷ್ಯ ಅನಾಗರಿಕನಾಗುತ್ತಾನೆ. ಪ್ರತಿಯೊಬ್ಬರೂ ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಬದುಕು ಕಟ್ಟಿಕೊಂಡು ಸುಂದರ ಸಮಾಜ ನಿರ್ಮಾಣ ಮಾಡಬೇಕೆಂದು ಸಾಣೇಹಳ್ಳಿ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

Advertisement

ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಹೊರವ ಲಯದ ಬಿ.ಸಿ.ಪಾಟೀಲ ನಗರದಲ್ಲಿ ಕೌರವ ಶಿಕ್ಷಣ ಸಂಸ್ಥೆಯಿಂದ ನೂತನವಾಗಿ ನಿರ್ಮಿಸಿರುವ ಜಗಜ್ಯೋತಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ನಾಗರಿಕತೆ ಬಾಹ್ಯ ಬದುಕಿನ ಸಂಕೇತವಾದರೆ, ಸತ್ಯ, ನ್ಯಾಯ, ಧರ್ಮ, ಪ್ರಾಮಾಣಿಕತೆ ಸಂಸ್ಕೃತಿಯ ಸಂಕೇತಗಳಾಗಿವೆ. ಇಂದು ನಾಗರಿಕರಾಗಿ ಸಂಸ್ಕೃತಿ ಮರೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ನಾಗರಿಕತೆ ಗಳನ್ನೊಳಗೊಂಡ ಸಂಸ್ಕೃತಿ ನಮ್ಮದಾಗಿಸಿಕೊಂಡು ಪ್ರಾಮಾಣಿಕರಾಗಿ ದುಡಿಯಬೇಕು, ಬದುಕಬೇಕು. ಜಾತಿ ಭೇದ ಮಾಡದೇ ನಾವೆಲ್ಲರೂ ಮನುಷ್ಯರೆಂದು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ನಮ್ಮ ಅಂತ ರಂಗ, ಬಹಿರಂಗ ಬೇರೆಯಾಗದೇ ಎರಡೂ ಒಂದೇ ಇದ್ದಾಗ ದೇವರ ಒಲುಮೆಗೆ ಪಾತ್ರರಾಗಲು ಸಾಧ್ಯ ಎಂದರು.

ಕೊಪ್ಪಳ ಸಂಸ್ಥಾನ ಗವಿ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಹಲವು ದಾರ್ಶನಿಕರು, ಸಂತರು ನೆಲೆಸಿ ನಮ್ಮ ನೆಲವನ್ನು ಪವಿತ್ರಗೊಳಿಸಿದ್ದಾರೆ. ಪಾಶ್ಚಿಮಾತ್ಯರು ನಮ್ಮ ನೆಲದ ಸಂಸ್ಕೃತಿ ತಿಳಿದುಕೊಂಡು ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ, ಪ್ರೀತಿ ಹೊಂದಿದ್ದಾರೆ. ಜಗತ್ತಿನಲ್ಲಿಯೇ ಅತೀ ಶ್ರೀಮಂತ ಸಂಸ್ಕೃತಿ ನಮ್ಮದಾಗಿದೆ. ನಾವಿರುವ ಭೂಮಿ ಸ್ವರ್ಗವಾಗಬೇಕಾದರೆ ಹಸಿದ ವರಿಗೆ ಅನ್ನ, ಬಾಯಾರಿಕೆಯಾದವರಿಗೆ ನೀರು, ದುಃಖದಲ್ಲಿರುವ ವರಿಗೆ ಸಹಾಯ ನೀಡುವ ಹೃದಯಗಳಿದ್ದಾಗ ಸ್ವರ್ಗವಾಗುತ್ತದೆ.

ನಮ್ಮ ನಿತ್ಯ ಜೀವನದ ಚಿಂತೆಗಳ ನಡುವೆ ನಿಶ್ಚಿಂತರಾಗಿ ಧರ್ಮ ಮಾರ್ಗದಲ್ಲಿ ನಡೆದು ಎಲ್ಲವನ್ನೂ ಮೆಟ್ಟಿ ನಿಂತು ಪರೋಪಕಾರಿಯಾಗಿ ಬದುಕು ಕಟ್ಟಿಕೊಳ್ಳಬೇಕು. ಬಿ.ಸಿ.ಪಾಟೀಲ ಅವರು ಶಾಲೆ, ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿ, ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಅವರು ಕೀಳರಿಮೆಯಿಂದ ಹೊರಬಂದು ಎಲ್ಲರಂತೆ ಸಾಧನೆ ಮಾಡಲು ಅನುಕೂಲವಾಗುವಂತೆ ಕೌರವ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲಾಯಿತು.

Advertisement

ಇಂದು ಅದರಡಿಯಲ್ಲಿ ಈ ಭಾಗದ ಜನತೆಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಜಗಜ್ಯೋತಿ ಸಾಂಸ್ಕೃತಿಕ ಕೇಂದ್ರ ನಿರ್ಮಿಸಲಾಗಿದೆ ಎಂದರು. ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಪೀಠಾಧಿಪತಿ ಶ್ರೀ
ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕ ಅರುಣಕುಮಾರ ಪೂಜಾರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ, ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಜಿ.ಶಿವನಗೌಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಎಸ್‌.ಪಾಟೀಲ, ಆರ್‌.ಎನ್‌.ಗಂಗೋಳ, ಕುಸುಮಾ ದೊಡ್ಡಗೌಡ ಪಾಟೀಲ, ರವಿಶಂಕರ ಬಾಳಿಕಾಯಿ, ಲಿಂಗರಾಜ ಚಪ್ಪರದಳ್ಳಿ, ಜಿ.ಪಿ.ಪ್ರಕಾಶ, ಎನ್‌.ಎಂ.ಈಟೇರ, ರಾಜು ಹುಚಗೊಂಡರ, ಅಶೋಕ ಪಾಟೀಲ, ವನಜಾ ಪಾಟೀಲ, ಸೃಷ್ಠಿ ಸುಜಯ್‌, ಸೌಮ್ಯ ಪ್ರತಾಪ್‌, ಸುರೇಶ ಮಾರ್ಗದ, ಸಿದ್ದಪ್ಪ, ಎಸ್‌. ವೀರಭದ್ರಯ್ಯ ಇನ್ನಿತರರು ಭಾಗವಹಿಸಿದ್ದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕೌರವ ಶಿಕ್ಷಣ ಸಂಸ್ಥೆ ವತಿಯಿಂದ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ಜಗಜ್ಯೋತಿ ಎಂದು ಹೆಸರಿಟ್ಟಿರುವುದು ಅಭಿನಂದನಾರ್ಹವಾಗಿದೆ. ಅವರು ರಂಗಭೂಮಿ, ಚಲನಚಿತ್ರ, ಪೊಲೀಸ್‌ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಜನರ ಒಲವು ಸಂಪಾದಿಸಿ ಯಶಸ್ಸು ಪಡೆದುಕೊಂಡಿದ್ದಾರೆ. ಕೃಷಿ ಸಚಿವರಾಗಿ ರೈತರೊಂದಿಗೆ ಆತ್ಮೀಯ ಸಂಬಂಧ ಹೊಂದಿ ಅವರ ನೋವು-ನಲಿವುಗಳನ್ನು ಅರ್ಥೈಯಿಸಿಕೊಂಡು ಸ್ಪಂದನೆ ಮಾಡುತ್ತಿದ್ದಾರೆ.
ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next