Advertisement

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

02:40 PM Apr 24, 2024 | Team Udayavani |

ಮಂಗಳೂರು: ಬಡವರಿಗೆ ಆರೋಗ್ಯ ವಿಮೆ, ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರೂ. ಸಹಿತ ದೇಶದ ಅಭಿವೃದ್ಧಿ, ಉದ್ಯೋಗ ಸಹಿತ ಜನರ ಬದುಕು ರೂಪಿಸುವ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಮಾಡುತ್ತಿದ್ದರೆ, ಹಿಜಾಬ್‌, ಹಲಾಲ್‌, ಮಸೀದಿ, ಮಂದಿರ ಎಂಬ ವಿಷಯದೊಂದಿಗೆ ಭಾವನಾತ್ಮಕವಾಗಿ ಜನರನ್ನು ಕೆರಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆ ಬದುಕು ಹಾಗೂ ಭಾವನೆಗಳ ನಡುವೆ ನಡೆ ಯುವ ಚುನಾವಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್‌ನ ಸದಸ್ಯ ಡಾ|ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 24 ಸ್ಥಾನದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವುದು ಶತಃಸಿದ್ಧ ಎಂದರು.

Advertisement

2014ರ ಚುನಾವಣೆಯ ವೇಳೆ 60 ತಿಂಗಳ ಅಧಿಕಾರ ನೀಡಿದರೆ ಕಾಂಗ್ರೆಸ್‌ ಪಕ್ಷದ 2ಜಿ ಕಲ್ಲಿದ್ದಲು ಪ್ರಕರಣ, ವಿದೇಶದಲ್ಲಿ ಕಪ್ಪು ಹಣ ಎಂದು ಜನರನ್ನು ಮರುಳು ಮಾಡಿ ಬಿಜೆಪಿ ಅಧಿಕಾರ ಪಡೆದರು. ಆದರೆ 10 ವರ್ಷ ಆದರೂ ಆ ಹಗರಣವನ್ನು ಸಾಬೀತು ಪಡಿಸಲು ಆಗಿಲ್ಲ. ಕಪ್ಪು ಹಣ ವಾಪಸು ತಂದಿಲ್ಲ. ಮತ್ತೆ 2019ರಲ್ಲಿ ಪುಲ್ವಾಮಾ ದಾಳಿಯಾಯಿತು. ಬಳಿಕ ರಾಮ ಮಂದಿರವನ್ನು ಮುನ್ನೆಲೆಗೆ ತಂದರು. ಆದರೆ ಈ ಬಾರಿ ವಿದೇಶಿ ಕೈವಾಡಗಳಿಂದ ನನಗೆ ಕುತ್ತು ಬಂದಿದೆ. ಕರಿಮಣಿ ಸರಕ್ಕೆ ಕುತ್ತು ಬಂದಿದೆ. ಸಂಪತ್ತು ಹಂಚಿಕೆ ಆಗಲಿದೆ ಎಂದು ಹೇಳುವ ಮೂಲಕ ಹತಾಶೆ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಬಳಿಕದ ಭಾರತದಲ್ಲಿ ಯಾವೊಬ್ಬ ಪ್ರಧಾನಿಯೂ ಇಂತಹ ಹತಾಶೆಯ ಮಾತುಗಳನ್ನಾಡಿಲ್ಲ ಎಂದರು.

ಚುನಾವಣೆ ಬಾಂಡ್‌ ತಂದಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ್ದರೂ ಅದನ್ನು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಭ್ರಷ್ಟರ ಪಕ್ಷ ಎನ್ನುತ್ತಿದ್ದವರು. ಅಶೋಕ್‌ ಚವ್ಹಾಣ್‌, ಪ್ರಫ‌ುಲ್‌ ಪಟೇಲ್‌ ಮೊದ ಲಾದವರನ್ನು ಭ್ರಷ್ಟರು ಎಂದು ಹೇಳಿ ಇದೀಗ ಅವರನ್ನು ಬಿಜೆಪಿಯ ವಾಶಿಂಗ್‌ ಮೆಶಿನ್‌ಗೆ ಹಾಕಿ ಕ್ಲೀನ್‌ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಹಿಂದುತ್ವದ ಪಾಠ ಬಿಜೆಪಿಯಿಂದ ಕಾಂಗ್ರೆಸ್‌ ಕಲಿಯಬೇಕಾಗಿಲ್ಲ. ಬಿಜೆಪಿ ಹುಟ್ಟುವ ಮೊದಲೇ ಪ್ರತೀ ಹಳ್ಳಿ ಹಳ್ಳಿಯಲ್ಲಿ ಇಲ್ಲಿ ರಾಮ ಮಂದಿರ ಗಳಿದ್ದವು. ಸರ್ವರ ಜತೆಗೆ ಸಮಾನಾಗಿ ಬಾಳುವ ಹಿಂದುತ್ವವನ್ನು ನಮ್ಮ ತಂದೆ ತಾಯಿ ನಮಗೆ ತಿಳಿಸಿದ್ದಾರೆ. ರಾಮ ಮಂದಿರವನ್ನು ಮತ ಗಳಿಕೆಯ ಉದ್ದೇಶದಿಂದ ಬಿಜೆಪಿಯು ಚುನಾ ವಣ ಮಂದಿರವಾಗಿ ರೂಪಿಸಿದೆ ಎಂದು ಮಂಜುನಾಥ ಭಂಡಾರಿ ದೂರಿದರು.

ದ.ಕ. ಜಿಲ್ಲೆಯಲ್ಲಿ 15 ವರ್ಷ ಬಿಜೆಪಿ ಸಂಸದರಾಗಿದ್ದವರು ಮಾಡಿದ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಕೇಳಬಹುದಿತ್ತಲ್ಲವೇ? ಅದರ ಬದಲು ಮೋದಿಯನ್ನೇ ಕರೆಸಿ ಇಲ್ಲಿ ಮತ ಕೇಳಿದ್ದು ಯಾಕೆ? ಹಾಗಾದರೆ ಅಭಿವೃದ್ಧಿ ಆಗಿಲ್ಲ ಎಂಬುದು ನಿಜವೆಂದು ಬಿಜೆಪಿ ಒಪ್ಪಿದಂತಲ್ಲವೇ? ಎಂದರು. ಶಾಹುಲ್‌ ಹಮೀದ್‌, ಮಹಾಬಲ ಮಾರ್ಲ, ಪ್ರವೀಣ್‌ ಚಂದ್ರ ಆಳ್ವ, ಶುಭೋದಯ ಆಳ್ವ, ಅಶ್ವಿ‌ನ್‌ ಕುಮಾರ್‌ ರೈ, ಲಾರೆನ್ಸ್‌ ಡಿ’ಸೋಜಾ, ಆರಿಫ್, ಸಂತೋಷ್‌ ಕುಮಾರ್‌, ಸುಹಾನ್‌ ಆಳ್ವ, ನೀರಜ್‌ ಪಾಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

ಮಂಜುನಾಥ ಭಂಡಾರಿ ಪ್ರಶ್ನೆಗಳು
ಕಾಂಗ್ರೆಸ್‌ ಅವಧಿ 2014ರವರೆಗೆ ದೇಶದ ಸಾಲ 55 ಲಕ್ಷ ಕೋಟಿ ಇದ್ದರೆ, ಬಿಜೆಪಿ ಬಂದ 10 ವರ್ಷಗಳಲ್ಲೇ ದೇಶದ ಸಾಲ 150 ಲಕ್ಷ ಕೋ.ರೂ.ಗಳಾಗಿದ್ದು ಹೇಗೆ?

ಕಪ್ಪು ಹಣ ತರಲು 60 ದಿನ ಕೊಡಿ ಎಂದವರಿಗೆ 10 ವರ್ಷವಾದರೂ ಯಾಕೆ ತರಲು ಸಾಧ್ಯವಾಗಿಲ್ಲ?

ಚುನಾವಣೆ ದಿನಾಂಕ ಹತ್ತಿರವಾದಂತೆ ಕೇಂದ್ರ ಚುನಾವಣಾ ಆಯುಕ್ತರು ರಾಜೀನಾಮೆ ನೀಡಿದ್ದು ಯಾಕೆ?

ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾದ ಮೋದಿ ಅವರು ಮಾಂಗಲ್ಯಸರ ಸಹಿತ ಭಾವನಾತ್ಮಕ ವಿಷಯವಾಗಿ ಹತಾಶರಾಗಿದ್ದು ಸೋಲಿನ ಭಯವೇ?

ಅಬಕಾರಿ ನೀತಿ ಸರಿಯಿಲ್ಲವೆಂಬ ಕಾರಣಕ್ಕೆ ಅರವಿಂದ ಕೇಜ್ರಿವಾಲ್‌ ಬಂಧನವಾದರೆ, ಚುನಾವಣೆ ಬಾಂಡ್‌ ಸರಿಯಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದರಿಂದ ಯಾರ ಬಂಧನವಾಗಬೇಕಿತ್ತು?

ಜನರ ಅಭಿವೃದ್ಧಿ ವಿಷಯದಲ್ಲಿ ನಡೆಯಬೇಕಾದ ಚುನಾವಣೆಯನ್ನು ಮಂದಿರ, ಮಸೀದಿ ವಿಷಯವನ್ನು ಮುನ್ನೆಲೆಗೆ ತರುವುದು ಸಮ್ಮತವೇ?
ಕಾಂಗ್ರೆಸ್‌ನಲ್ಲಿದ್ದಾಗ ಭ್ರಷ್ಟಾಚಾರಿಗಳು, ಬಿಜೆಪಿಗೆ ಹೋದಾಗ ಅವರು ಸಭ್ಯರು ಆಗುವುದು ಹೇಗೆ?

Advertisement

Udayavani is now on Telegram. Click here to join our channel and stay updated with the latest news.

Next