ನಿನ್ನೆಯ ದಿನ ಒಂದೊಳ್ಳೆಯ ನೆನಪಾಗಿರಬೇಕು..ನಾಳೆ ಎಂಬುದು ಇಂದಿಗೆ ಸ್ಫೂರ್ತಿಯಾಗಿರಬೇಕು. ಆದರೆ ಅದೇ ನಾಳೆಯ ಚಿಂತೆಯಲ್ಲಿ ಇಂದಿನ ಖುಷಿ ಕಳೆದುಕೊಳ್ಳುವಂತಿರಬಾರದು. ತುಂಬಾ ಜನ ನಾಳೆಯ ಚಿಂತೆಯಲ್ಲಿ ಇಂದಿನ ಸುಖ ಕಳೆದು ಕೊಳ್ಳುವವರೇ.. ಬದಲಾಗಿ ನಾಳಿನ ಚಿಂತೆಗಾಗಿ ಇಂದಿನ ಸಂತೋಷ ಅನುಭವಿಸದೇ ಇರುವುದರಿಂದ ಕಳೆದುಕೊಳ್ಳುವುದು ಬದುಕಿನ ಸಣ್ಣ ಸಣ್ಣ ಖುಷಿಯಷ್ಟೇ…
ಬದುಕು ಎಂಬುದು ಪುಸ್ತಕದಂತೆ
ಬದುಕು ಒಂದು ಪುಸ್ತಕದಂತೆ. ಬದುಕಿನ ಪುಸ್ತಕದಲ್ಲಿ ಮನುಷ್ಯನಿಗೆ ಪುಟ ಹಿಂತಿರುಗಿಸಿ ಅಲ್ಲಿ ಮತ್ತೂಮ್ಮೆ ಕಳೆಯಲು ಅವಕಾಶವಿಲ್ಲ. ನೆನ್ನೆ ಎನ್ನುವುದು ಬರಿ ಬರೆದ ಪುಟವಷ್ಟೇ. ಅದನ್ನು ಓದಬಹುದು ಆದರೆ ಮತ್ತೆ ಅಲ್ಲಿ ಬರೆಯಲು ಸಾಧ್ಯವಿಲ್ಲ. ಬದುಕೂ ಹಾಗೆ. ಕಳೆದು ಹೋದ ದಿನಗಳು ಇಂದಿಗೆ ನೆನಪುಗಳಷ್ಟೇ. ಅಲ್ಲಿ ಮತ್ತೆ ಬದುಕಲು ಸಾಧ್ಯವಿಲ್ಲ. ಬದಲಾಗಿ ನಾವು ಇಂದು ಎನ್ನುವ ಪುಟದಲ್ಲಿ ಬಣ್ಣದ ಬಣ್ಣದ ಅನುಭವ, ಖುಷಿ ಇರುವಂತೆ ನೋಡಿಕೊಂಡರೆ ಬದುಕು ಇನ್ನಷ್ಟೂ ಸುಂದರ.
ಈ ದಿನವಷ್ಟೇ ಮನುಷ್ಯನಿಗಿರುವ ಅವಕಾಶ. ನಾಳೆಯ ಕುರಿತು ಗೊತ್ತಿಲ್ಲ. ಗೊತ್ತಿಲ್ಲದ ನಾಳೆಗಾಗಿ ಚಿಂತಿಸವ ಬದಲು ಇಂದಿನ ಸುಂದರ ದಿನವನ್ನೂ ಇನ್ನಷ್ಟು ಖುಷಿಯಿಂದ ಕಳೆಯುವತ್ತ ನಾವು ಮನಸ್ಸು ಮಾಡಿದರೆ ಪ್ರತಿ ದಿನವೂ ನೆಮ್ಮದಿಯ ಬದುಕು ಎಲ್ಲರದಾಗುತ್ತದೆ. ಇಂದು ಮಾಡಬೇಕಾದ ಕೆಲಸವನ್ನು ನೆಮ್ಮದಿಯಿಂದ ಮಾಡೋಣ. ಕೆಲಸದಲ್ಲೂ ಸಂತೃಪ್ತಿ ಸಿಗುತ್ತದೆ.
ಇಂದಿಗಾಗಿ ಬದುಕಿ ಎಂದರೆ ನಾಳೆಯನ್ನು ಮರೆತುಬಿಡಿ ಎಂದರ್ಥವಲ್ಲ. ಬದಲಾಗಿ ಇಂದಿನ ಬದುಕಿಗೆ ನಾಳೆ ಎಂದುದು ಸ್ಫೂರ್ತಿಯಾಗಿರಲಿ. ನಾಳೆ ಎಂಬ ಕಲ್ಪನೆಯೇ ಇರದಿದ್ದರೆ ಇಂದು ಖುಷಿಯಾಗಿರಲು ಸಾಧ್ಯವಿಲ್ಲ. ಮಲಗುವ ಮುನ್ನ ಇಂದಿನ ದಿನದ ಖುಷಿಯನ್ನು ಮರುನೆನಪಿಸಿ. ಅದು ನಾಳಿನ ಸುಂದರ ಆರಂಭಕ್ಕೆ ದಾರಿಯಾಗುತ್ತದೆ. ಅದೇ ಖುಷಿಯಲ್ಲಿ ದಿನವಿಡೀ ಸಣ್ಣ ಸಣ್ಣ ಖುಷಿಯನ್ನೂ ಅನುಭವಿಸುವುದನ್ನು ಸಾಧ್ಯ.
ಬದುಕು ಸುಂದರವಾರಬೇಕು. ಆದರೆ ಅದಕ್ಕಾಗಿ ಯಾವುದೋ ವಿಷಯಗಳಿಗೆ ಮೊರೆ ಹೋಗುವ ಬದಲು ಪ್ರತಿ ಕ್ಷಣದ ಖುಷಿಯನ್ನು ಅನುಭವಿಸಲು ಕಲಿಯಿರಿ. ನಾಳೆಯ ಭಯ, ನೆನ್ನೆಯ ನೆನಪು ಇಂದಿನ ಖುಷಿಯನ್ನು ಹಾಳುಮಾಡದಿರಲಿ.
- ರಂಜಿನಿ ಮಿತ್ತಡ್ಕ