ಉಡುಪಿ/ ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗೀಕರಿಸಿರುವ ಕೃಷಿ ಸಂಬಂಧಿ ಕಾನೂನುಗಳು ರೈತ ವಿರೋಧಿ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ
ಉಡುಪಿ ನಗರದಲ್ಲಿ ಬಸ್ ಸಂಚಾರ ಎಂದಿನಂತಿದ್ದು, ಬೆಳಿಗ್ಗೆ ಕೆಲವು ಸಂಘಟನೆಗಳು ರಸ್ತೆ ತಡೆ ನಡೆಸಿ ಬಸ್ ಸಂಚಾರಕ್ಕೆ ಅಡ್ಡಿ ಮಾಡಲು ಯತ್ನಿಸಿದವು. ಆದರೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಪ್ರಸಂಗ ನಡೆಯಿತು.
ಕುಂದಾಪುರ
ನಗರದಲ್ಲಿ ಯಾವುದೇ ಬಂದ್ ಇರಲಿಲ್ಲ. ಬಂದ್‌ಗೂ ತಮಗೂ ಸಂಬಂಧವೇ ಇಲ್ಲದಂತೆ ವ್ಯವಹಾರ, ಓಡಾಟ ನಡೆದಿದೆ. ಒಂದು ಕೆಎಸ್‌ಆರ್‌ಪಿ ಪ್ಲಟೂನನ್ನು ಫ್ಲೈಓವರ್ ಸಮೀಪ ನಿಯೋಜಿಸಲಾಗಿದೆ. ಬಿಜೆಪಿ ರೈತಮೋರ್ಚಾ ಹಾಗೂ ರಿಕ್ಷಾ ಚಾಲಕರ ಘಟಕ ಬಂದ್‌ಗೆ ಬೆಂಬಲ ಇಲ್ಲ ಎಂದು ಮೊದಲೇ ಘೋಷಿಸಿದೆ. ಕಾಂಗ್ರೆಸ್ ಬೆಂಬಲ ನೀಡಿದ್ದು ಮಧ್ಯಾಹ್ನ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟನೆ ಸಭೆ ನಡೆಸಲಿದೆ.
ಮಂಗಳೂರು ನಗರದಲ್ಲಿ ಬಂದ್ ಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ನಗರದಲ್ಲಿ ಬಸ್ ಸಂಚಾರ ಯಥಾಸ್ಥಿತಿಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಟಪಾಡಿ ಉದ್ಯಾವರ, ಶಂಕರಪುರ, ಕುರ್ಕಾಲು ಪರಿಸರದಲ್ಲಿ ಬಹುತೇಕ ತರಕಾರಿ ಅಂಗಡಿ, ಹೂವಿನ ಮಾರುಕಟ್ಟೆ, ರಿಕ್ಷಾ ಬಸ್ಸು ಸಹಿತ ಇತರ ವಾಹನಗಳ ಓಡಾಟವು ಮಾಮೂಲಿನಂತೆ ಕಂಡುಬರುತ್ತಿದೆ.
ಸುರತ್ಕಲ್: ಸುರತ್ಕಲ್ ಬೈಕಂಪಾಡಿ ಸಹಿತ ವಿವಿಧೆಡೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಗಡಿ ಮುಗ್ಗಟ್ಟು ತೆರೆದಿದ್ದು ವ್ಯಾಪಾರ ವಹಿವಾಟು ನಡೆಯುತ್ತಿದೆ. ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ. ಬೈಕಂಪಾಡಿಯ ಎಪಿಎಂಸಿಯಲ್ಲಿ ಮಿಶ್ರಪ್ರತಿಕ್ರಿಯೆ ಕಂಡು ಬಂತು. ರೈತಪರ, ಸಿಪಿಐಎಂ,ಸಿ ಐಟಿಯು ಬೆಂಬಲಿತ ಕಾರ್ಮಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಯಾವುದೇ ರೀತಿಯ ಬಂದ್ ಕಂಡು ಬರಲಿಲ್ಲ. ಬಸ್ಸು, ಆಟೋಗಳ ಸಂಚಾರ ಯಥಾಸ್ಥಿತಿಯಂತಿದೆ. ಮುನ್ನೆಚ್ಚರಿಕೆಯಾಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.