ರಾಣಿಬೆನ್ನೂರ: ಪ್ರಶಸ್ತಿ ಪುರಸ್ಕಾರಗಳ ನಿರೀಕ್ಷೆ ಹೊಂದದೆ ನಿಸ್ವಾರ್ಥ ಭಾವನೆಯಿಂದ ಕೆಲಸ ಮಾಡಬೇಕು. ಕೆಲಸ ಮಾಡುವುದು ನಮ್ಮ ಕರ್ತವ್ಯ ಮಾತ್ರ ಅದರ ಫಲ ಪರಮಾತ್ಮನಿಗೆ ಬಿಡಬೇಕು, ಅಂದಾಗ ಜೀವನ ಪರಿಪೂರ್ಣವಾಗಲು ಸಾಧ್ಯ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ಹೇಳಿದರು.
ನಗರದ ಚೆನ್ನೇಶ್ವರಮಠದಲ್ಲಿ ಇತ್ತೀಚಿಗೆ ಜರುಗಿದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಮತ್ತು ರಂಭಾಪುರಿ ಪೀಠದ ಲಿಂ| ಜಗದ್ಗುರು ವೀರ ಗಂಗಾಧರ ಶಿವಾಚಾರ್ಯರ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಜನು ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ ಶುದ್ಧವಾಗಿರುವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ ಹಾಗೂ ಸಂತೃಪ್ತಿ ದೊರೆಯುವುದಿಲ್ಲ ಎಂದು ನುಡಿದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ಮಾಮೀಜಿ ಮಾತನಾಡಿ, ಮನುಷ್ಯ ಮನಸ್ಸು, ಬುದ್ದಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸದ್ಗುರುವಿನ ಉಪದೇಶವನ್ನು ಆಲಿಸಿದಾಗಲೇ ಮನುಜ ಸದ್ಗತಿಯನ್ನು ಪಡೆಯಲು ಸಾಧ್ಯ. ಸತ್ಸಂಗವು ಮನುಷ್ಯನನ್ನು ಒತ್ತಡದ ಜೀವನದಿಂದ ಬಿಡುಗಡೆ ಪಡೆದು ಮುಕ್ತಿಯ ಕಡೆಗೆ ಕೊಂಡೊಯ್ಯುವ ಸನ್ಮಾರ್ಗವಾಗಿದೆ, ಸತ್ಸಂಗವು ಜನ್ಮಜನ್ಮಾಂತರದ ಪಾಪಕರ್ಮಗಳು ನಾಶವಾಗಿ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಸಾಪ ಅಧ್ಯಕ್ಷೆ ಎ.ಬಿ.ರತ್ನಮ್ಮ ಮಾತನಾಡಿ, ಇಂದಿನ ಒತ್ತಡ ಜೀವನದಲ್ಲಿ ಸಾಗುತ್ತಿರುವ ಮನುಜರು ಆಧ್ಯಾತ್ಮದ ಚಿಂತನೆ ಮತ್ತು ಭಾವನೆಗಳಿಂದ ಬಿಡುಗಡೆ ಹೊಂದುತ್ತಿದ್ದೇವೆ. ಅಧ್ಯಾತ್ಮ ಜೀವನವಿಲ್ಲದ ಬದುಕು ನುಸಿ ತಿಂದ ಧಾನ್ಯಗಳಂತಾಗುತ್ತಿದ್ದೇವೆ. ಇದರಿಂದ ಜೀವನ ಬರಡಾಗುತ್ತಿದೆ. ಆದಕಾರಣ ಪ್ರತಿಯೊಬ್ಬರೂ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಹಾಗೂ ನೀತಿ ಕಥೆಗಳನ್ನು ಹೇಳಬೇಕು ಎಂದರು. ಹರಿಹರದ ಕವಿಗುರುರಾಜ ಪಾಟೀಲ ರಂಭಾಪುರಿ ಪೀಠದ ಲಿಂಗೈಕ್ಯ ಶ್ರೀಗಳ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಆನಿಮಠದ ಆರ್.ಜಿ. ಮಹೇಶ್ವರಯ್ಯ, ಪಿಎಚ್‌ಡಿ ಪುರಸ್ಕೃತ ಡಾ| ದುಶಂತ ಓಲೇಕಾರ, ಗುತ್ತಲದ ಸಿ.ಬಿ.ಕುರುವತ್ತಿಗೌಡ್ರ, ಶಿಕ್ಷಕ ಪಾಲಾಕ್ಷಸ್ವಾಮಿ ನೆಗಳೂರಮಠ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಪೌರಾಯುಕ್ತ ಡಾ| ಮಹಾಂತೇಶ ಎನ್., ಉಮೇಶ ಗುಂಡಗಟ್ಟಿ, ಅ.ಸಿ.ಹಿರೇಮಠ, ಸುನಂದಮ್ಮ ತಿಳವಳ್ಳಿ, ವಿ.ವಿ. ಹರಪನಹಳ್ಳಿ, ಗಿರಿಜಾ ದುರ್ಗದಮಠ, ಕಸ್ತೂರಿ ಪಾಟೀಲ ಮತ್ತಿತರರು ಇದ್ದರು.