Advertisement

ಸಂಘರ್ಷದಿಂದ ಬದುಕು ಸಾರ್ಥಕವಾಗದು: ರಂಭಾಪುರಿ ಶ್ರೀ

05:51 PM Feb 28, 2022 | Team Udayavani |

ಧಾರವಾಡ: ವಿಶ್ವದ ಎಲ್ಲ ಧರ್ಮ ಸಿದ್ಧಾಂತಗಳೂ ಶಾಂತಿಪೂರ್ಣ ಭಾವೈಕ್ಯ ಚಿಂತನೆಯನ್ನೇ ಪ್ರತಿಪಾದಿಸುತ್ತವೆ. ಸಂಘರ್ಷದಿಂದ ಮನುಕುಲದ ಬದುಕು ಸಾರ್ಥಕಗೊಳ್ಳುವುದಿಲ್ಲ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಹೇಳಿದರು.

Advertisement

ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಗುರುಸಿದ್ಧೇಶ್ವರ ಮಠದ ಉದ್ಘಾಟನೆ ಹಾಗೂ ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವೈರುಧ್ಯವನ್ನು ಮರೆತು ಎಲ್ಲರೂ ಕೂಡಿ ಬಾಳುವ ಸಾಮರಸ್ಯದ ಪ್ರತೀಕವಾದ ಮಾನವ ಧರ್ಮದ ಔನ್ನತ್ಯಕ್ಕೆ ಶ್ರಮಿಸಲು ಎಲ್ಲರೂ ಮುಂದಾಗಬೇಕು. ಧರ್ಮದ ಆಶಯಗಳನ್ನು ಅರಿಯದೇ ಕ್ಷುಲ್ಲಕ ಕಾರಣಗಳಿಗಾಗಿ ಕವಲು ದಾರಿಯಲ್ಲಿ ಹೆಜ್ಜೆಹಾಕಿ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಾರದು. ಧರ್ಮದ ಸಂಸ್ಕಾರ, ಸನ್ನಡತೆ, ಸತ್ಪರಂಪರೆಯ ಘನತೆಯನ್ನು ಅರ್ಥ ಮಾಡಿಕೊಂಡು ಶಿವಜ್ಞಾನದೊಂದಿಗೆ ಗುರುಕಾರುಣ್ಯಕ್ಕೆ ಒಳಗಾದಾಗ ಎಲ್ಲರೊಳಗೆ ಕೂಡಿ ಬದುಕಿ ಬಾಳುವ ಹಿರಿಮೆ ಅರ್ಥವಾಗುತ್ತದೆ ಎಂದರು.

ಕಲಘಟಗಿ ಹನ್ನೆರಡು ಮಠದ ಶ್ರೀರೇವಣಸಿದ್ಧ ಶಿವಾಚಾರ್ಯರು, ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು, ಮುಂಡಗೋಡದ ರುದ್ರಮುನಿ ಸ್ವಾಮೀಜಿ, ಸವಡಿ ಸ್ವಾಮೀಜಿ, ಚಂದ್ರಯ್ಯಸ್ವಾಮಿ ಹಿರೇಮಠ ಪಾಲ್ಗೊಂಡಿದ್ದರು.

ಮಾಜಿ ಶಾಸಕ ನಾಗರಾಜ ಛಬ್ಬಿ ಸಮಾವೇಶ ಉದ್ಘಾಟಿಸಿದರು. ಕಾಂಗ್ರೆಸ್‌ ನಾಯಕ ಬಂಗಾರೇಶ ಹಿರೇಮಠ, ಹು-ಧಾ ಪಾಲಿಕೆ ಸದಸ್ಯ ಸಂದಿಲಕುಮಾರ, ಕಿರಣ ಪಾಟೀಲಕುಲಕರ್ಣಿ, ಶಿವು ಬೆಂಡಿಗೇರಿ, ಗುರುನಾಥ ದಾನವೇನವರ, ಶಿವಪೂಜಯ್ಯ ತಡಸಮಠ, ಮದನ ಕುಲಕರ್ಣಿ, ಗ್ರಾಪಂ ಸದಸ್ಯರಾದ ಬಸವರಾಜ ನೇಸರಗಿ, ಅನಸೂಯಾ ಪಾಟೀಲ, ನಿಂಗವ್ವ ದೇವಗೇರಿ, ಯಲ್ಲಪ್ಪ ಉಣಕಲ್ಲ, ಮಾಳೇಶ್ವರ ಕರಡಿಗುಡ್ಡ, ಫಕ್ಕೀರಪ್ಪ ಅಡಕಿ ಇದ್ದರು. ಇದಕ್ಕೂ ಮೊದಲು
ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ರಂಭಾಪುುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಜರುಗಿತು.

Advertisement

ರಾಜಕೀಯದಲ್ಲಿ ಜನಹಿತಕ್ಕಾಗಿ ಧರ್ಮದ ಮೌಲ್ಯಗಳ ಅನುಪಾಲನೆ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ನುಸುಳಬಾರದು. ಯಾವುದೇ ಕಾರಣಕ್ಕೂ ರಾಜಕಾರಣದ ಹೊಸ್ತಿಲನ್ನು ಧರ್ಮ ಕಾಯುವಂತಾಗಬಾರದು.
ಡಾ| ಪ್ರಸನ್ನ ರೇಣುಕ
ವೀರಸೋಮೇಶ್ವರ ಭಗವತ್ಪಾದರು

Advertisement

Udayavani is now on Telegram. Click here to join our channel and stay updated with the latest news.

Next