Advertisement

ಕಾರ್ಮಿಕರ ಹರತಾಳಕ್ಕೆ ಅಲ್ಪ ಯಶಸ್ಸು

05:53 AM Jan 09, 2019 | |

ಚಿತ್ರದುರ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ವಿರೋ ಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌, ಮೊದಲ ದಿನವಾದ ಮಂಗಳವಾರ ಜಿಲ್ಲೆಯಲ್ಲಿ ಭಾಗಶಃ ಯಶಸ್ವಿಯಾಗಿದೆ.

Advertisement

ಶಾಲಾ, ಕಾಲೇಜು, ಅಂಚೆ ಕಚೇರಿ, ಬ್ಯಾಂಕ್‌, ಎಲ್‌ಐಸಿ ಜತೆಗೆ ಇತರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳು ಮುಚ್ಚಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ನಡೆಸಿ ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಅಧಿಕಾರಕ್ಕೆ ಬಂದ ದಿನದಿಂದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರಿ ಸೇವೆಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸಿ ಬಂಡವಾಳ ಶಾಹಿಗಳಿಗೆ, ಕಾರ್ಪೋರೆಟ್‌ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂ.ಗಳ ಸಾಲ ಮತ್ತು ತೆರಿಗೆ ರಿಯಾಯತಿ ನೀಡಿ ನೌಕರ ವರ್ಗವನ್ನು ಶೋಷಿಸಲಾಗುತ್ತಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವುದರಿಂದ ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಕಾರ್ಮಿಕರು ಸಂಪೂರ್ಣವಾಗಿ ಬೀದಿಗೆ ಬಿದ್ದಿದ್ದಾರೆ ಎಂದು ಆರೋಪಿಸಿದರು.

ಅಂಚೆ ಇಲಾಖೆ ನೌಕರರು ಕಚೇರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಅಂಚೆ ನೌಕರರಿಗೆ ವೇತನ ತಾರತಮ್ಯ ಮಾಡುತ್ತಿದೆ, ಸೇವಾ ಭದ್ರತೆ ನೀಡುತ್ತಿಲ್ಲ ಎಂದು ದೂರಿದರು. 

ಬ್ಯಾಂಕ್‌ ಮತ್ತು ಎಲ್‌ಐಸಿ ನೌಕರರು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಕೇಂದ್ರ ಸರ್ಕಾರ ನೀತಿ ಕೋಟ್ಯಂತರ ದುಡಿಯುವ ವರ್ಗದಲ್ಲಿ ಆತಂಕ ಹಾಗೂ ತಳಮಳವನ್ನುಂಟು ಮಾಡಿದೆ. ಕಾರ್ಮಿಕ ನೀತಿ ನಿಯಮಾವಳಿ ಉಲ್ಲಂಘನೆ ಎಗ್ಗಿಲ್ಲದೆ ನಡೆದಿದೆ. ಖಾಲಿ ಹುದ್ದೆಗಳ ಭರ್ತಿ ಮಾಡುತ್ತಿಲ್ಲ, ಸರ್ಕಾರಿ ಸೇವೆಗಳನ್ನು ಗುತ್ತಿಗೆಗೆ ನೀಡುವುದು, ಇದರ ನೆಪದಲ್ಲಿ ಸಿಬ್ಬಂದಿ ಕಡಿತಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ದೇಶವನ್ನು ಬೆಲೆ ಏರಿಕೆಯಿಂದ ರಕ್ಷಿಸುತ್ತೇವೆ. ಅಚ್ಛೇ ದಿನ್‌ ಬರಲಿದೆ ಎನ್ನುತ್ತಲೇ ದೇಶದ ಜನರ ಶೋಷಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲಾಗುತ್ತದೆ ಎಂದು ಮೋದಿ ನೀಡಿದ ಭರವಸೆ ಇಂದಿಗೂ ಈಡೇರಿಲ್ಲ. ಉದ್ಯೋಗ ನೀಡುವುದು ಹೋಗಲಿ, ಕಾರ್ಮಿಕ ಮತ್ತು ನೌಕರ ವರ್ಗದ ನಿಯಂತ್ರಣ ಸೇರಿದಂತೆ ದುಡಿಯುವ ಜನರ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶದ ಕೋಟ್ಯಾಂತರ ಕುಟುಂಬಗಳು ಜೀವನದ ಆಧಾರವಾಗಿದ್ದ ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿವೆ.

ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ನರೇಗಾ ಯೋಜನೆಯ ಅನುದಾನ ಕಡಿತ ಮಾಡಲಾಗಿದೆ ಎಂದು ಕಿಡಿ ಕಾರಿದರು. ಎಐಟಿಯುಸಿ., ಐಎನ್‌ಟಿಯುಸಿ, ಬಿಸಿಯೂಟ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ರೈತ ಸಂಘ ಹಾಗೂ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ) ಕಾರ್ಯಕರ್ತರು, ಕೆನರಾ ಬ್ಯಾಂಕ್‌ ಸೇರಿದಂತೆ ಮತ್ತಿತರ ಬ್ಯಾಂಕುಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next