ಬಹಳ ಸಂಕೋಚದಿಂದ ಗಂಡ- ಹೆಂಡತಿ ಕುಳಿತಿದ್ದರು. ನಡು ವಯಸ್ಸಿನವರು. ಮುಖ ಮುದುಡಿತ್ತು. ಹೆಂಡತಿ ಧೈರ್ಯ ತೆಗೆದುಕೊಂಡು, “ಸಮಸ್ಯೆ ಏನೂ ಇಲ್ಲಾ ಮೇಡಂ… ಇವರೇ ಕರಕೊಂಡು ಬಂದಿದ್ದಾರೆ’ ಎಂದರು. ಗಂಡನಿಗೆ ರೇಗಿ ಹೋಯಿತು. ಮಾತನಾಡಲು ಅಷ್ಟು ಕಸಿವಿಸಿಯಾಗುವ ವಿಚಾರ ಎಂದರೆ, ದಂಪತಿಯ ನಡುವೆ ಶಾರೀರಿಕ ಸಂಬಂಧದ ಬಗ್ಗೆ ತಕರಾರು ಇರುತ್ತದೆ. ಬೇಗ ಬೇಗ ಮಾತನಾಡಲು ಸಾಧ್ಯವಾಗುವುದಿಲ್ಲ. ಮದುವೆಯಾಗಿ ಹತ್ತು ವರ್ಷಗಳಾಗಿವೆ. ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳಿದ್ದಾರೆ. ಸಂಸಾರದಲ್ಲಿ ಎಲ್ಲರ ಜೊತೆಗೂ ಹೆಂಡತಿ ಹೊಂದಿಕೊಂಡಿದ್ದಾಳೆ, ಮನೆಯವರೂ ಇವಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ, ಹೆಂಡತಿಗೆ ಗಂಡನೊಡನೆ ಕೂಡುವ ಬಗ್ಗೆ ನಿರಾಸಕ್ತಿ ಮೂಡಿದೆ. ಆತನನ್ನು ಹೊರಗೆ ಕಳುಹಿಸಿ, ಆಕೆಯಿಂದ ಮಾಹಿತಿ ಪಡೆದೆ.
ಎರಡನೇ ಮಗುವಾದ ನಂತರ ಆಕೆಗೆ ಸೆಕ್ಸ್ ಬಗ್ಗೆ ಆಸಕ್ತಿ ಇಲ್ಲ. ಮನೆಕೆಲಸ- ಮಕ್ಕಳ ಕೆಲಸ ಜಾಸ್ತಿ. ಬೆಳಗಾಗೆದ್ದು, ಅಡುಗೆಯ ಜೊತೆಗೆ ದೇವರಿಗೆ ಸಲ್ಲುವ ನೈವೇದ್ಯವನ್ನೂ ತಯಾರಿ ಮಾಡಬೇಕು. “ನಂಗೆ ಇವರ ಜೊತೆ ಸೇರಲು ಸಮಯವಿಲ್ಲ ಮೇಡಂ… ರಾತ್ರಿ ಹೊತ್ತಿಗೆ ನಂಗೆ ಸುಸ್ತಾಗಿರುತ್ತೆ. ಬೆಳಗ್ಗೆ ಕೆಲಸದ ಧಾವಂತ’ ಎಂದರು. ವಯಸ್ಸು ಚಿಕ್ಕದು. ತಿರಸ್ಕರಿಸಲು ಬೇರೆ ಕಾರಣವಿರಬೇಕು ಎಂದುಕೊಂಡು, ಆತನ ಮೇಲೆ ಸಿಟ್ಟು ಬರಲು ಕಾರಣ ಕೆದಕಿದೆ.
ಸೆರಗು ಮುಂದಿಟ್ಟು ಆಕೆ ಅತ್ತುಬಿಟ್ಟರು. ಮದುವೆಯಾದ ಹೊಸತರಲ್ಲಿ ಕಾಮಾತುರದಿಂದ ಕೂಡಿದರೂ, ವರ್ಷಗಳು ಕಳೆದಂತೆ, ಗಂಡ- ಹೆಂಡತಿಯ ನಡುವೆ ಕುಸಿದ ಪರಸ್ಪರ ಆಂತರಿಕ ಸಂಬಂಧಗಳು ಕೂಡುವಿಕೆಗೆ ಸರಹದ್ದು ಹಾಕಿಬಿಡುತ್ತವೆ. ಕೂಡುವಿಕೆಗೆ ಭಾವನಾತ್ಮಕ ಸಂಬಂಧಗಳೂ ಮುಖ್ಯವಾಗುತ್ತವೆ. ಜಾತ್ರೆಯಲ್ಲಿ ಆಕೆ ಗಾಜಿನ ಬಳೆ ಕೊಳ್ಳಲು ಹೋದಾಗ ಈತ ಜಿಪುಣತನ ಮಾಡಿ ಕೊಡಿಸಲೇ ಇಲ್ಲ. ಆಕೆಗೆ ಸುಮಂಗಲಿಯ ಸಂಕೇತವದು. ಎರಡನೇ ಮಗುವಿನ ಬಸುರಿಯಲ್ಲಿ ಸೀರೆ ಇರಲಿ, ದುಂಡು ಮಲ್ಲಿಗೆ ಹೂವನ್ನೂ ಕೊಡಿಸಲಿಲ್ಲ. ಮಸಾಲೆದೋಸೆ ತಿನ್ನಲು ಯಾವತ್ತೂ ಹೋಗಲಿಲ್ಲ. ವ್ಯಾಪಾರದಲ್ಲಿ ಬೇರೆ ಊರಿಗೆ ಹೋದರೆ, ಒಂದು ಫೋನ್ ಇರಲಿ, ಮೆಸೇಜನ್ನೂ ಮಾಡುವುದಿಲ್ಲ. ಮೈದುನನು ಮಕ್ಕಳಿಗೆ ಬೈದಾಗ, ಗಂಡ ಪರ ವಹಿಸಿಕೊಳ್ಳುವುದಿಲ್ಲ. ಗಂಡನಿಗಿಂತ ಇವಳಿಗೆ ಮಕ್ಕಳ ಮೇಲೆ ನಿಗಾ ಜಾಸ್ತಿ. ಈ ಮಧ್ಯೆ ಕುಡಿತದ ಚಾಳಿ ಹಿಡಿದಿದೆ ಆತನಿಗೆ. ವಾಸನೆ ತಡೆಯಲಾಗುವುದಿಲ್ಲ.
ನಾನು ಕೂಡಲೇ ಆತನ ಕೌನ್ಸೆಲಿಂಗ್‌ಗೆ ಹೆಚ್ಚು ಒತ್ತುಕೊಟ್ಟೆ. ಕೂಡಲು ಈಕೆಗೆ ಆಸೆ ಇದೆ. ಮನಸ್ಸಿಲ್ಲ ಎಂಬ ವಿಚಾರ ಆತನಿಗೆ ಗೊತ್ತಾಯಿತು. ಹೆಣ್ಣಿಗೆ ಚಿಕ್ಕ ಚಿಕ್ಕ ವಿಚಾರಗಳಲ್ಲಿ ತೃಪ್ತಿ ಸಿಗದಿದ್ದರೆ, ಮಾನಸಿಕವಾಗಿ ಗಂಡನಿಂದ ದೂರವಾಗುತ್ತಾಳೆ. ಲೈಂಗಿಕ ಕ್ರಿಯೆ ಅನವಶ್ಯಕ ಎನಿಸಿತ್ತದೆ. ಮಕ್ಕಳ ರಕ್ಷಣೆ ಮಾಡದ ಗಂಡನ ಕಾಮಾತುರ ಸಹ್ಯವಾಗುವುದಿಲ್ಲ. ವ್ಯಾಘ್ರನಂತೆ ಕಾಣುತ್ತಾನೆ. ಲಾಲಿತ್ಯದಿಂದ ಕೂಡಿದ ಮಧುರ ಸಂಬಂಧ ಬೆಳೆಸಿಕೊಳ್ಳುವುದು ಕಷ್ಟವಲ್ಲ, ಎಚ್ಚರ ವಹಿಸಿ.
ಶುಭಾ ಮಧುಸೂದನ್, ಮನೋಚಿಕಿತ್ಸಾ ವಿಜ್ಞಾನಿ