ಕೊಕ್ಕರೆಗಳನ್ನು ಬಕ ಪಕ್ಷಿಯ ಗುಂಪಿಗೆ ಸೇರಿಸಲಾಗಿದೆ. ಇದು ಗಂಭೀರ ನಡಿಗೆಯ ಹಕ್ಕಿ. ಚಿಕ್ಕ ಹಸಿರು ಕೊಕ್ಕರೆ , ಬೆಳ್ಳಕ್ಕಿ ಗುಂಪಿಗೆ ಸೇರಿದೆ. ಇದು ಜವಗು ಸಂಚಾರಿ ಹಕ್ಕಿ. ನದಿ, ಕೆರೆ, ಗಜನಿ ಪ್ರದೇಶ, ಅಣೆ ಕಟ್ಟಿನ ಹಿನ್ನೀರ ಪ್ರದೇಶ, ಕೆಸರು ಗದ್ದೆ ಇರುವ ಭಾಗದಲ್ಲಿ ವಾಸ ಮಾಡುತ್ತದೆ. ಮಳೆಗಾಲದಲ್ಲಿ ನೀರು ನಿಲ್ಲುವ ಹೊಂಡ, ಕೆರೆ, ಕಟ್ಟೆ ಮುಂತಾದ ಜಾಗವನ್ನು ತನ್ನ ಇರುನೆಲೆಯಾಗಿ ಮಾಡಿಕೊಳ್ಳುತ್ತದೆ. ಈ ಹಕ್ಕಿ ‘ಆಡೇìಡಿಯಾ’ ಕುಟುಂಬಕ್ಕೆ ಸೇರಿದೆ. ಕಪ್ಪು ಬಿಟರಿನ್, ರಾತ್ರಿ ಬಕ ಪಕ್ಷಿಗಳು ಈ ಹಕ್ಕಿಯನ್ನು ತುಂಬಾ ಹೋಲುತ್ತವೆ. ಹಸಿರು ಮೈಬಣ್ಣ, ಕುತ್ತಿಗೆ ಭಾಗದಲ್ಲಿಯ ಕೆಂಪು ಗರಿಯಿಂದ ಇತರೆ ಹಕ್ಕಿಗಳಿಂದ ಬೇರ್ಪಡಿಸಬಹುದು. ಈ ಹಕ್ಕಿಯನ್ನು ಇತರ ಕೊಕ್ಕರೆಗಳಿಗೆ ಹೋಲಿಸಿದರೆ, ಗಾತ್ರದಲ್ಲಿ ಇದು ಚಿಕ್ಕದು.
Advertisement
ಕೊಕ್ಕರೆಗಳಲ್ಲಿ, ಚುಂಚಿನಲ್ಲಿ ವೈವಿಧ್ಯತೆ ಕಾಣಬಹುದು. ಕೂಗು ಆಧರಿಸಿಯೇ ಸುಮಾರು 64 ವಿಧದ ಹಕ್ಕಿಗಳನ್ನು ಗುರುತಿಸಲಾಗಿದೆ. ಚಿಕ್ಕ ಹಸಿರು ಕೊಕ್ಕರೆಯು ಕುತ್ತಿಗೆಯನ್ನು ಸದಾ ಕುಗ್ಗಿಸಿಕೊಂಡಿರುವಂತೆ ಭಾಸವಾಗುತ್ತದೆ. ತರುಣ ಹಕ್ಕಿಯ ನೆತ್ತಿಗೆ ಹಸಿರು ಮಿಶ್ರಿತ ಕಪ್ಪು ಬಣ್ಣ ಇದೆ. ರೆಕ್ಕೆ ಮತ್ತು ಬೆನ್ನಿನ ಭಾಗ ಹಸಿರು ಛಾಯೆಯ ಕಪ್ಪು , ಕೆಳಗೆ ಬಂದಂತೆ ದಟ್ಟ ಹಸಿರು ಇಲ್ಲವೇ ನೀಲಿ ಛಾಯೆ ಕಾಣುವುದು. ಕುತ್ತಿಗೆಯು ಪಾರ್ಶ್ವದಲ್ಲಿ ಕಂದು ಕೆಂಪು ರೋಮಗಳಿಂದ ಆವೃತವಾಗಿದೆ. ಮುಂದೆ ಕುತ್ತಿಗೆ ಮಧ್ಯದಲ್ಲಿ ಮೇಲಿನಿಂದ ಕೆಳಕ್ಕೆ ಬಂದಂತೆ ಮಸಕು ಬಿಳಿ ಬಣ್ಣದಿಂದ ಕೂಡಿದೆ. ಅದರ ಮೇಲೆ ಮೇಲಿನಿಂದ ಕೆಳಗೆ -ಕಂದು ಗೆರೆ ಕೆಳಮುಖವಾಗಿದೆ. ಹೊಟ್ಟೆ ಭಾಗ -ತಿಳಿ ಬೂದು ಬಣ್ಣ, ಕಾಲು ಸ್ವಲ್ಪ ಕುಳ್ಳು ಎನಿಸಿದರೂ ದಪ್ಪ ಮತ್ತು ಸದೃಢವಾಗಿದೆ. ಚೂಪಾದ ಕಪ್ಪು ಚುಂಚಿದೆ. ಕಾಲಿನಲ್ಲಿ ಮುಂದೆ ಮೂರು ಮತ್ತು ಹಿಂದೆ ಒಂದು ಬೆರಳಿದೆ. ಹಳದಿ ಬೆರಳಿನ ತುದಿಯಲ್ಲಿ ಹರಿತವಾದ ಕಪ್ಪು ಉಗುರು ಇದೆ. ಇದರಿಂದ ಬೇಟೆಯನ್ನು ಗಟ್ಟಿಯಾಗಿ ಹಿಡಿದಿಕೊಂಡು ಹಾರಲು ಸಹಾಯಕವಾಗಿದೆ. ಈ ಹಕ್ಕಿ ಕೆಸರು ಪ್ರದೇಶದಲ್ಲಿ ತಪಸ್ಸು ಮಾಡುತ್ತಿರುವಂತೆ ಸುಮ್ಮನೆ ಕುಳಿತಿರುತ್ತದೆ.